ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ ಪಠ್ಯವನ್ನು ಕೈಬಿಟ್ಟ ಮರು ಪರಿಷ್ಕರಣಾ ಸಮಿತಿ

ಬೆಂಗಳೂರು: ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ನೂತನ ಪಠ್ಯ ಮರು ಪರಿಷ್ಕರಣೆ ಸಮಿತಿಯು ಮಾಡಿರುವ ತಿದ್ದುಪಡಿಗಳನ್ನು ಖಂಡಿಸಿ ಪ್ರತಿಭಟನೆ-ವಿರೋಧಗಳು ದೊಡ್ಡ ಪ್ರಮಾಣದಲ್ಲಿ ತಾರಕ್ಕೇರುತ್ತಿದ್ದು, ದಿನದಿಂದ ದಿನಕ್ಕೇ ಹೆಚ್ಚಾಗುತ್ತಲೇ ಇದೆ. ಈ ಸಂದರ್ಭದಲ್ಲಿ ಮತ್ತೊಂದು ಸಮಿತಿಯು ಅನಾಹುತ ಮಾಡಿರುವುದು ಬೆಳಕಿಗೆ ಬಂದಿದೆ.

7ನೇ ತರಗತಿ ಸಮಾಜ ವಿಜ್ಞಾನ-2 ಪಠ್ಯದಿಂದ ಕರ್ನಾಟಕದ ಮಹಿಳಾ ಹೋರಾಟಗಾರರಾದ ಉಲ್ಲಾಳದ ರಾಣಿ ಅಬ್ಬಕ್ಕ ದೇವಿ, ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠಗಳನ್ನು ಕೈಬಿಡಲಾಗಿದೆ.

‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ಎಂಬ 7ನೇ ತರಗತಿಯ ಪಾಠದಲ್ಲಿ ಕರ್ನಾಟಕದ ಹೋರಾಟಗಾರ್ತಿಯರ ಬಗ್ಗೆ ಬಹಳ ವಿವರವಾದ ವಿಷಯಗಳು ಇವೆ. ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ ಎಂದು ಹೆಸರಾಗಿರುವ ರಾಣಿ ಅಬ್ಬಕ್ಕದೇವಿಯು ಒಬ್ಬರು. ಅವರು ಪೋರ್ಚುಗೀಸರ ವಿರುದ್ಧ ಕಾದಾಡಿದ್ದ ವಿವರಗಳು ಪಾಠದಲ್ಲಿ ಇದ್ದವು. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಕಪ್ಪ ಕಾಣಿಕೆ ಕೊಡಲು ನಿರಾಕರಿಸಿದಾಗ 1568ರಲ್ಲಿ ದಾಳಿ ಸಂಭವಿಸುತ್ತದೆ. ಅದನ್ನು ಅಬ್ಬಕ್ಕ ಹಿಮ್ಮೆಟ್ಟಿಸಿದ್ದ ವಿವರಗಳನ್ನು ನೀಡಲಾಗಿತ್ತು. ಆದರೆ ನೂತನ ಪಠ್ಯ ಪರಿಷ್ಕರಣೆಯಲ್ಲಿ ಆ ಪಠ್ಯ ಕೈಬಿಡಲಾಗಿದೆ.

ಅದೇ ರೀತಿಯಾಗಿ ಕಳೆದ ವರ್ಷದ ಪಠ್ಯದಲ್ಲಿ ಕರ್ನಾಟಕದ ದಿಟ್ಟ ಹೋರಾಟಗಾರ್ತಿಯರಾದ ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠವಿದ್ದದವು. ಇವುಗಳನ್ನು ಸಹ ತೆಗೆದುಹಾಕಿರುವ ನೂತನ ಸಮಿತಿಯು ಕರ್ನಾಟಕ ಸಮಾಜಮುಖಿ ಚಳವಳಿಗಳ ಎಂಬ ಪಠ್ಯದಲ್ಲಿ ಕೇವಲ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಅರುಣಾ ಅಸಫ್ ಅಲಿಯವರ ಪಠ್ಯ ಮಾತ್ರ ಇರಿಸಿಕೊಂಡಿದೆ. ಅವರ ಕುರಿತು ಸಮರ್ಪಕ ವಿವರಗಳಿಲ್ಲದೆ ಕೇವಲ 4 ಪ್ಯಾರಗಳಲ್ಲಿ ಮೇಲುಮಟ್ಟಕ್ಕೆ ಪರಿಚಯಿಸಿ ಕೈತೊಳೆದುಕೊಳ್ಳಲಾಗಿದೆ.

ನಮ್ಮ ಮಕ್ಕಳು ಏಕೆ ಕನ್ನಡದ ಹೋರಾಟಗಾರರ ಬಗ್ಗೆ ಅದರಲ್ಲಿಯೂ ಮಹಿಳಾ ಹೋರಾಟಗಾರ್ತಿಯರ ಬಗ್ಗೆ ತಿಳಿದುಕೊಳ್ಳಬಾರದು ಎಂಬ ಪ್ರಶ್ನೆ ಎದ್ದಿದೆ. ವೀರ ರಾಣಿ ಅಬ್ಬಕ್ಕನವರ ಪಠ್ಯ ಕೈಬಿಟ್ಟಿದ್ದೇಕೆ ಪಠ್ಯ ಪುಸ್ತಕ ಮರು ಪರಿಷ್ಕರಣಾ ಸಮಿತಿ ಹಾಗೂ ರಾಜ್ಯ ಸರ್ಕಾರ ಉತ್ತರಿಸಬೇಕಿದೆ.

ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಪ್ರಾಣತೆತ್ತ ಹಲವಾರು ಮಹಿಳೆಯರ ಜೀವನ ಚಿತ್ರಣಗಳು ಕಣ್ಮರೆಯಾಗಿವೆ. ಇರುವ ಕೆಲವರ ಬಗ್ಗೆಯಾದರೂ ಮಕ್ಕಳು ಓದಿ ಅವರನ್ನು ಆದರ್ಶವನ್ನಾಗಿ ಪರಿಗಣಿಸಬೇಕು. ಆದರೆ ಅಂತಹ ಮಹಿಳಾ ಹೋರಾಟಗಾರ್ತಿಯರ ಪಠ್ಯವನ್ನೇ ಕೈಬಿಟ್ಟಿರುವುದು ದುರಂತವಾಗಿದೆ.

Donate Janashakthi Media

Leave a Reply

Your email address will not be published. Required fields are marked *