ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟಗಾರರ ಮನೆಗೆ ಮಧ್ಯರಾತ್ರಿ ಸಂದರ್ಭದಲ್ಲಿ ಹತ್ತಾರು ಪೊಲೀಸರು ನುಗ್ಗಿ ನೊಟೀಸು ನೀಡುವುದು ಮತ್ತು ಅಧಿಕಾರಿಗಳ ಎದುರು ಹಾಜರಾಗಿ ತಲಾ 2 ಲಕ್ಷ ರೂ. ಬಾಂಡ್ ಬರೆದುಕೊಡಬೇಕು ಎಂದು ಬೆದರಿಕೆ ಹಾಕಿರುವ ಕ್ರಮವನ್ನು ಮಾಜಿ ಶಾಸಕ ಜೆ.ಆರ್.ಲೋಬೋ ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿನ ಸಮಸ್ಯೆಯನ್ನಿಟ್ಟುಕೊಂಡು ಹೋರಾಟ ಮಾಡುವವರನ್ನು ಪೊಲೀಸ್ ಇಲಾಖೆಯು ಕ್ರಿಮಿನಲ್‌ಗಳಂತೆ ಬಿಂಬಿಸುವುದು ಸರಿಯಲ್ಲ. ಇದು ರಾಜಕೀಯ ಹೋರಾಟವಲ್ಲ. ಜನಸಾಮಾನ್ಯರ ಸಮಸ್ಯೆಯ ವಿರುದ್ಧದ ಜನರ ಧ್ವನಿ ಅಷ್ಟೇ. ಹೋರಾಟಗಾರರ ಮನೆಗೆ ಮಧ್ಯರಾತ್ರಿ ಪೊಲೀಸ್ ತಂಡವು ತೆರಳಿ ನೋಟಿಸ್ಸು ನೀಡಿ ಬೆದರಿಕೆ ಒಡ್ಡುವುದು ಸರಿಯಾದ ಕ್ರಮವಲ್ಲ. ಪೊಲೀಸರ ಕ್ರಮವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಮುಟ್ಟುತ್ತಿದೆ ಎಂಬ ಆತಂಕ ಕಾಡುತ್ತಿದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.
ಇಂತಹ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾತ್ರಿ ವೇಳೆ ಪೋಲಿಸರು ಮನೆಗೆ ಹೋಗಬಾರದು ಎಂದು ಸುಪ್ರೀಂಕೋರ್ಟ್ ಪದೇ ಪದೇ ಹೇಳಿದೆ. ಹೀಗಿರುವಾಗ ಪೊಲೀಸ್ ಕಮಿಷನರ್ ಇಂತಹ ವರ್ತನೆಗೆ ಹೇಗೆ ಅವಕಾಶ ಕೊಡುತ್ತಿದ್ದಾರೆ ಎಂಬುದನ್ನು ಸರಕಾರವೇ ಉತ್ತರಿಸಬೇಕಾಗಿದೆ. ಅಲ್ಲದೆ ಹೋರಾಟಗಾರ್ತಿಯರ ಮನೆಗೆ ಮಧ್ಯರಾತ್ರಿ ತೆರಳಿದ ಪೊಲೀಸರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯರಾತ್ರಿ ತೆರಳಿ ನೋಟಿಸ್ಸು ನೀಡಲು ಅವರೇನು ಕೊಲೆ ಆರೋಪಿಯೇ? ವೆರೋನಿಕಾ ಕರ್ನೆಲಿಯೊ
ಸುರತ್ಕಲ್ ಟೋಲ್‌ಗೇಟ್ ತೆರವು ಹೋರಾಟದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ಮನೆಗೆ ಪೊಲೀಸರು ಮಧ್ಯರಾತ್ರಿ ತೆರಳಿ ನೋಟಿಸ್ ಜಾರಿ ಮಾಡಲು ಅವರೇನು ಕೊಲೆ ಮಾಡಿದ್ದಾರೆಯೇ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೊ ಉಡುಪಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸುರತ್ಕಲ್ ನಲ್ಲಿ ಅಕ್ರಮವಾಗಿ ಟೋಲ್ ಪ್ಲಾಜಾ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ 20 ಕಿಮಿ ಸಮೀಪದಲ್ಲೇ ಹೆಜಮಾಡಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ ಇರುವುದರಿಂದ ಒಂದನ್ನು ತೆರವುಗೊಳಿಸುವಂತೆ ಹೋರಾಟಗಾರರು ಮನವಿ ಮಾಡುತ್ತಾ ಬಂದರೂ ಸಹ ಬಿಜೆಪಿ ಸಂಸದರು ಮತ್ತು ಶಾಸಕರು ಕಿವಿ ಕೇಳಿಯೂ ಕೇಳದಂತೆ ನಟಿಸುತ್ತಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯ ವಿರುದ್ದ ಅಕ್ಟೋಬರ್ 18ರಂದು ಆಯೋಜಿಸಿರುವ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರಕಾರ ಪೊಲೀಸರ ಮೂಲಕ ನೋಟಿಸ್ಸು ನೀಡಿ ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.