ಹೊರಗುತ್ತಿಗೆ ನೌಕರರನ್ನು ನಿವೃತ್ತಿವರೆಗೆ ಮುಂದುವರೆಸಲು-ಬಾಕಿ ವೇತನ ಬಿಡುಗಡೆಗೊಳಿಸಲು ಒತ್ತಾಯ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ವಸತಿ ಶಾಲೆ ಕಾಲೇಜುಗಳ ‘ಡಿ’ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮತ್ತು ಹೊರಗುತ್ತಿಗೆ ಬೋಧಕೇತರ ಸಿಬ್ಬಂದಿಗಳನ್ನು ನಿವೃತ್ತಿ ವರೆಗೆ ಸೇವೆಯಲ್ಲಿ ಮುಂದುವರೆಸಬೇಕು ಅವರ ಬಾಕಿ ವೇತನವನ್ನು ಸಂದಾಯ ಮಾಡುವ ಹಾಗೂ ಇನ್ನಿತರೆ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದೊಂದಿಗೆ ಸಭೆ ನಡೆಸಿದ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಚರ್ಚಿಸಿದರು.

ಹೊರಗುತ್ತಿಗೆ ನೌಕರರು, ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ, ರಾಣಿಚನ್ನಮ್ಮ, ಡಾ. ಅಂಬೇಡ್ಕರ್ ಇತ್ಯಾದಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಸತಿ ಶಾಲೆಗಳಲ್ಲಿ ನಾವು ಅಡುಗೆ, ಸ್ವಚ್ಛತೆ, ಕಾವಲು ಮೊದಲಾದ ‘ಡಿ’ ವರ್ಗದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಯಾರಿಂದಲೂ ಯಾವುದೇ ತಕರಾರು ಇರಲಿಲ್ಲ. ಒಂದಲ್ಲ ಒಂದು ದಿನ ಅವರು ತಮ್ಮ ತಮ್ಮ ಸ್ಥಾನಗಳಲ್ಲಿ ಕಾಯಂ ಆಗುವ ಕನಸು ಕಾಣುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವಿದ್ಯಾವಂತ ಮಹಿಳೆಯರಾಗಿದ್ದು ಸಾಮಾಜಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಾಗಿದ್ದರು. ಹಲವರು ವಿಧವೆಯರು, ಒಂಟಿ ಜೀವನ ನಡೆಸುವವರು ಇದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಅವರನ್ನು ಕಾಯಂಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿತು. ಆದರೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಜೇಷ್ಠತೆಗೆ ಅನುಗುಣವಾಗಿ ಕಾಯಂ ಮಾಡುವ ಬದಲಾಗಿ ಸರ್ಕಾರ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿತು. ಇದರ ಪರಿಣಾಮವಾಗಿ ಅನೇಕ ವರ್ಷಗಳಿಂದ ಕೆಲಸ ಮಾಡಿ ಅನುಭವ ಇದ್ದವರು ಕೆಲಸ ಕಳೆದುಕೊಂಡರು. ಅಡುಗೆ ಮಾಡುವ ಅನುಭವವೂ ಆಸಕ್ತಿಯೂ ಇಲ್ಲದವರು ಆಯ್ಕೆಯಾಗಿ ಸೇರಿಕೊಂಡಿದ್ದಾರೆ ಎಂದು ಸಂಘಟಕರು ಅಧಿಕಾರಿಗಳ ಗಮನಕ್ಕೆ ತಂದರು.

ಈಗಾಗಲೇ ವೃತ್ತಿಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಿದವರನ್ನು ಹೆಚ್ಚುವರಿ ಸಿಬ್ಬಂದಿಗಳೆಂದು ಹೊರಹಾಕಟ್ಟಿದ್ದಾರೆ. ಇವರಲ್ಲಿ ಅನೇಕ ಮಂದಿ ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡ್ಡಿದ್ದರು. ಇವರಲ್ಲಿ ಹಲವರಿಗೆ ಸುಮಾರು ಒಂದು ವರ್ಷದ ವೇತನ ಇದುವರೆಗೂ ಪಾವತಿ ಆಗಿರುವುದಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದಾರೆ.

ಅಲ್ಲದೆ, ಇಲಾಖೆಗಳ ಸ್ಥಳೀಯ ಅಧಿಕಾರಿಗಳು ದುರ್ಬಳಕೆ ಮಾಡಲು ಮುಂದಾಗಿದ್ದು, ತಮಗೆ ಬೇಕಾದವರಿಗೆ, ಲಂಚಕೊಟ್ಟವರಿಗೆ ‘ಡಿ’ ವರ್ಗದ ಹುದ್ದೆಗಳನ್ನು ಮಾರಿಕೊಂಡಿದ್ದಾರೆ. ಇನ್ನು ಹಲವು ಕಡೆ ಕೆಲಸ ಕಳೆದುಕೊಂಡು ಬೀದಿಯಲ್ಲಿರುವ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಿಸಿಕೊಂಡು ಕೆಲಸ ಮಾಡಿಸುತ್ತಾ ತಮ್ಮ ಸಂಬಳದಲ್ಲಿ ಒಂದು ಅತ್ಯಲ್ಪ ಭಾಗವನ್ನು ಅವರಿಗೆ ಕೊಟ್ಟು ದುಡಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಅನೇಕ ಜನ ಬೋಧಕೇತರ ಸಿಬ್ಬಂದಿಗಳು ನೇರ ನೇಮಕಾತಿಯಿಂದ ಕೆಲಸ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘಟಕರು ಗಮನಕ್ಕೆ ತಂದರು.

ಸಭೆಯಲ್ಲಿ ಅಂತಿಮವಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಎರಡು ತಿಂಗಳ ನಂತರ ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಪರವಾಗಿ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ಜಂಟಿ ಕಾರ್ಯದರ್ಶಿ ಕೆ. ಹನುಮೇಗೌಡ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ, ಉಪಾಧ್ಯಕ್ಷರಾದ ಆಂಜನೇಯ ರೆಡ್ಡಿ, ಇ.ಆರ್‌.ಯಲ್ಲಪ್ಪ, ಜಂಟಿ ಕಾರ್ಯದರ್ಶಿ ಹುಲುಗಪ್ಪ ಚಲುವಾದಿ, ಸಹ ಕಾರ್ಯದರ್ಶಿ ಗ್ಯಾನೇಶ್‌ ಕಡಗದ ಮತ್ತಿತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *