ವರದಿ: -ಅಶ್ವಿನಿ ಹೊಸೂರು
ಬೆಂಗಳೂರು: ಮೆಜೆಸ್ಟಿಕ್‌ನ ಮಹಿಳಾ ವಿಶ್ರಾಂತಿ ಗೃಹ (ನಿರ್ಭಯ ಯೋಜನೆಯಡಿ)ದಲ್ಲಿ ಬಸ್‌ಗಾಗಿ ಕಾಯುತ್ತ ಒಳಗಡೆ ಕುಳಿತುಕೊಂಡಿದ್ದ ಒಬ್ಬ ಮಹಿಳಾ ಪ್ರಯಾಣಿಕರನ್ನು ಹೋಮ್‌ಗಾರ್ಡ್ ಸಿಬ್ಬಂದಿಯೊಬ್ಬರು ವಿಶ್ರಾಂತಿ ಗೃಹದಿಂದ ಹೊರಗಡೆ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಲ್ಲಾ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿಯೇ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ (ನಿರ್ಭಯ ಯೋಜನೆಯಡಿ)ದಲ್ಲಿ ನಿರ್ಮಿಸಲಾಗಿದೆ. ಆದರೆ ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಂಡಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಹೋಮ್‌ಗಾರ್ಡ್ ಸಿಬ್ಬಂದಿಯೊಬ್ಬರು “ಇದು ನಾವು ಕುಳಿತುಕೋಳ್ಳುವ ಜಾಗ ಇಲ್ಲಿಗೆ ಯಾರೂ ಬರಬಾರದು” ಎಂದು ಹೇಳಿ ಮಹಿಳಾ ಪ್ರಯಾಣಿಕರೊಬ್ಬರನ್ನು ಅಲ್ಲಿಂದ ಹೊರಗಡೆ ಕಳುಹಿಸಿದ್ದಾರೆ. ಅಷ್ಟೆ ಅಲ್ಲದೆ ಹೇಳದೆ ಕೇಳದೆ ಒಳಗಡೆ ಬಂದು ಕುಳಿತು ಕೊಳ್ಳಲು ಇದು ನಿಮ್ಮ ಮನೆಯಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದು ಸಾರ್ವಜನಿಕರದ್ದು, ಮಹಿಳೆಯರಿಗಾಗಿ ಇರುವ ಭದ್ರತಾ ಕೊಠಡಿ, ನೀವು ಒಬ್ಬ ಮಹಿಳೆಯಾಗಿ ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳನ್ನು ಕೇಳಿ, ನಮ್ಮನ್ನು ಏನು ಕೇಳುತ್ತೀರಿ ಎಂದು ಉದ್ಧಟತನ ಮೆರೆದಿದ್ದಾರೆ ಎಂದು ಪ್ರಯಾಣಿಸುತ್ತಿದ್ದ ಮಹಿಳೆ ಜನಶಕ್ತಿ ಮೀಡಿಯಾ ಕಚೇರಿಗೆ ಫೋನ್ ಮಾಡಿ ಮಾಹಿತಿಯನ್ನು ನೀಡಿ ಘಟನೆಯನ್ನು ವಿವರಿಸಿದರು.
ಈ ಕುರಿತು ನಮ್ಮ ಜನಶಕ್ತಿ ಮೀಡಿಯಾ, ಬಿಎಂಟಿಸಿ ಕಚೇರಿಗೆ ದೂರವಾಣಿ ಮೂಲಕ ವಿಚಾರಿಸಿತು,ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿಯ ಶೋಭಾ ಅವರು ಅಲ್ಲಿರುವ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಪ್ರಯಾಣಿಕರೊಟ್ಟಿಗೆ ಭದ್ರತಾ ಸಿಬ್ಬಂದಿ ಈ ರೀತಿ ನಡೆದುಕೊಂಡಿದ್ದು ಸರಿಯಾದ ವಿಧಾನ ಅಲ್ಲ, ಅವರ ಮೇಲೆ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇನೆ. ಆ ರೀತಿಯ ಘಟನೆಗಳು ನಡೆದರೆ ತಕ್ಷಣ ಬಿಎಂಟಿಸಿ ಹೇಲ್ಪ್ ಲೈನ್‌ಗೆ ಕರೆಮಾಡಿ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರಕಾರ ನಿರ್ಭಯಾ ನಿಧಿಯಡಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕವಾಗಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗಿದೆ. ಈ ಕೊಠಡಿಯಲ್ಲಿ ಕುಡಿಯುವ ನೀರು, ಫೀಡಿಂಗ್ ಕೊಠಡಿ, ಚೇಂಜಿಂಗ್ ಕೊಠಡಿ, ಮಾಹಿತಿ ಪ್ರದರ್ಶನ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಶೌಚಾಯಲ ವ್ಯವಸ್ಥೆ, ವೈ-ಪೈ ಸೇವೆಗಳು ಲಭ್ಯವಿರಲಿದೆ.
ಇದನ್ನೂ ಓದಿ: ನುಡಿದಂತೆ ನಡೆಯದ ಪಕ್ಷ ಅಂದ್ರೆ ಅದು ಬಿಜೆಪಿ | ಸಿಎಂ ಸಿದ್ದರಾಮಯ್ಯ
ಆದರೆ ಇಷ್ಟೇಲ್ಲಾ ಸೌಲಭ್ಯಗಳಿದ್ದರು ಸರಿಯಾಗಿ ಮಹಿಳೆಯರಿಗೆ ಇದು ಸದುಪಯೋಗವಾಗುತಿಲ್ಲ. ಇದಕ್ಕೆ ಕಾರಣ ಮಹಿಳೆಯರಿಗೆ ಬಸ್ ನಿಲ್ದಾಣಗಳಲ್ಲಿ ಈ ರೀತಿಯ ವಿಶ್ರಾಂತಿ ಗೃಹಗಳು ಇದ್ದಾವೆ ಎನ್ನುವ ಮಾಹಿತಿಯೂ ಸಹ ಗೊತ್ತಿಲ್ಲ. ಹಾಗಾಗಿ ಮಹಿಳೆಯರಿ ಬಸ್ ನಿಲ್ದಾಣಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ, ಇಂತಹ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಅದರ ಮಾಹಿತಿಯನ್ನು ಸಾರ್ವಜನಿಕವಾಗಿ ತಿಳಿಸುವ ಕೆಲಸವನ್ನು ಸರ್ಕಾರ ಹಾಗೂ ಅಧಿಕಾರಿಗಳು ಮಾಡಬೇಕಿದೆ.
ಮಹಿಳಿಯರ ಸುರಕ್ಷತೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿರುವು ನಿಜಕ್ಕೂ ಮಹತ್ವದ್ದು. ಇಂತಹ ಯೋಜನೆಗಳು ಜನರು ಸದುಪಯೋಗ ಮಾಡಿಕೊಂಡಾಗ ಮಾತ್ರ ಯಶಸ್ವಿಯಾಗಬಲ್ಲವು. ಭಾರತದಲ್ಲಿ ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ನಿರ್ಭಯಾ ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನಿರ್ಭಯಾ ನಿಧಿ ಅಡಿಯಲ್ಲಿ ಮಹಿಳೆಯ ಸುರಕ್ಷತೆಗೆಂದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2012 ರಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ನಿರ್ಭಯಾ ಹೆಸರಿನಡಿ ಈ ಮಹತ್ವದ ಯೋಜನೆಯನ್ನು ಘೋಷಿಸಲಾಯಿತು.
ವಿಡಿಯೋ ನೋಡಿ: ಸರ್ಕಾರದ ಕಿವಿ ಹಿಂಡಿದ ಮಾಧ್ಯಮದ ಕತ್ತು ಹಿಸುಕುವ ಕೇಂದ್ರ ಸರ್ಕಾರ – ಸಿದ್ದನಗೌಡ ಪಾಟೀಲ್ ಜೊತೆ ಮಾತುಕತೆ