ಗೃಹ ಸಚಿವ ಸ್ವಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಬಿ ಕೆ ಹರಿಪ್ರಸಾದ್‌ ಖಂಡನೆ

ತೀರ್ಥಹಳ್ಳಿ: ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡುವ ಯತ್ನ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಗ್ರಾಮ, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಪತಿ ಎದುರೇ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ, ವಿಕೃತ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕ್ರರ್ಮಿಗಳನ್ನು ಬಂಧಿಸಿ ಎಂದು  ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಆಗ್ರಹಿದ್ದಾರೆ.

ಘಟನೆ ನಡೆದು 2 ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಯಾಕೆ? ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಮೇಲೂ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ಯುವಕರಿಬ್ಬರು ದುಷ್ಕ್ರತ್ಯ ಎಸೆಗಿದ್ದಾರೆಂದು ಸಂತ್ರಸ್ತರೇ ಗುರುತಿಸಿರುವಾಗ ಇಲ್ಲಿವರೆಗೂ ಪೊಲೀಸರು ಬಂಧಿಸದಿರುವುದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಗೃಹ ಸಚಿವರ ಗಮನಕ್ಕೇ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆಯಾಗಿ ಯುವಕನ ಕೊಲೆ ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ “ಮಾಹಿತಿಯ ಮೂಲ” ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ? ಎಂದರು.

ದುಷ್ಕ್ರರ್ಮಿಗಳ ಅಟ್ಟಹಾಸವನ್ನ ಮಟ್ಟ ಹಾಕಬೇಕಿದೆ. ಸಂತ್ರಸ್ತರ ಶೋಷಿತ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ಸಂತ್ರಸ್ತೆ ಹಾಗೂ ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು. ಹಾಗೂ ಮಹಿಳಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡು ಮಹಿಳೆ ರಕ್ಷಣೆಗೆ ಧಾವಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಬಿ ಕೆ ಹರಿಪ್ರಸಾದ್‌ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ತೀರ್ಥಹಳ್ಳಿಯ ಆರಗ ಸಮೀಪದಲ್ಲಿನ ಗ್ರಾಮವೊಂದರಲ್ಲಿ ಪತಿಗೆ ಹೊಡೆದು ಅವರ ಕಣ್ಣೆದುರೇ ತನ್ನ ಪತ್ನಿಯನ್ನು  ಎಳೆದೊಯ್ದು, ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಮೇ 09ರ ರಾತ್ರಿ 10:30 ಕ್ಕೆ ನಡೆದಿದೆ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆರೋಗ್ಯದಲ್ಲಿ ಸಮಸ್ಯೆ ಎಂದು ದಂಪತಿಗಳು ಮೇ 09ರಂದು ಪಟ್ಟಣದಲ್ಲಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ವಾಪಾಸ್ಸು ಮನೆಗೆ ಮರಳು ಸಂದರ್ಭದಲ್ಲಿ ಸಂಪತ್, ಆದರ್ಶ್ ಹಾಗೂ ಮತ್ತಿಬ್ಬರು ಸೇರಿ ಎರಡು ಬೈಕ್‌ನಲ್ಲಿ ಆಗಮಿಸಿದ ನಾಲ್ವರು ದಂಪತಿಗಳನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ದೂರು ದಾಖಲಾಗಿದೆ. ಈ ಘಟನೆ ನಡೆದ ಸಲುವಾಗಿ ಪ್ರಕರಣದ ಸಂತ್ರಸ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಕುರಿತು ಸಂತ್ರಸ್ತೆ, ಪತಿಯ ತಲೆಗೆ ಹೊಡೆದು ನನ್ನನ್ನ ಕಾಡಿಗೆ ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಪತಿ ಎಚ್ಚರಗೊಂಡು ಜೋರಾಗಿ ಕೂಗತೊಡಗಿದರು. ಆಗ ನಾನೂ ಕೂಡ ಕಿರುಚಿತ್ತಿದ್ದನ್ನು ಕೇಳಿ ಸ್ಥಳೀಯರು ಅಲ್ಲಿಗೆ ದಾವಿಸಿದರು. ಜನರು ಸ್ಥಳಕ್ಕೆ ಬರುವುದನ್ನು ನೋಡಿದ ದುಷ್ಕರ್ಮಿ ಯುವಕರು ಅಲ್ಲಿಂದ ಓಡಿಹೋದರು ಎಂದು ದೂರಿನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ದಂಪತಿಯ ಹೇಳಿಕೆ ಪಡೆದು, ಪೊಲೀಸರು ಎರಡು ದಿನಗಳಾದರು ಕೂಡ ಮೊಕದ್ದಮೆ ದಾಖಲಿಸಿರಲಿಲ್ಲ. ಆಸ್ಪತ್ರೆಗೆ  ಭೇಟಿನೀಡಿ ಮಾಹಿತಿ ಪಡೆದ ಸ್ಥಳಿಯ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲು ಮಾಡಿಲ್ಲ, ಹಾಗಾಗಿ  ಅಧಿಕಾರಿಗಳು ಈ ಪ್ರಕರಣವನ್ನ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *