ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು: ವಿ.ಎಸ್ ಉಗ್ರಪ್ಪ

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸ್ಥಳೀಯ  ಪೋಲೀಸ್ ಕಾರ್ಯವೈಕರಿ ನೋಡಿದರೆ, ರಾಮನ ಜಪ ಮಾಡುತ್ತಿರುವ ಬಿಜೆಪಿಯು ರಾವಣನ ಕ್ರೌರ್ಯ ಮೆರೆಯುತ್ತಿದೆ. ಸರ್ಕಾರದ ಘನತೆ ಉಳಿಸಿಕೊಳ್ಳುವ ಸಲುವಾಗಿ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ ಎನ್ನಿಸುತ್ತದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ವಿ.ಎಸ್‌.ಉಗ್ರಪ್ಪ ಎಂದಿದ್ದಾರೆ.

ಮಂಗಳವಾರ ರಾತ್ರಿ ಸಾಮೂಹಿಕ ಅತ್ಯಚಾರ ಪ್ರಕರಣ ನಡೆದರೂ ಸುಮಾರು 11 ಗಂಟೆಗೆ ಸಂತ್ರಸ್ತ ಹೆಣ್ಣು ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಅಂಗಾಗಗಳ ಮೇಲೆ ತೀವ್ರವಾಗಿ ದಾಳಿ ನಡೆದಿರುವ ಗಾಯಗಳಾಗಿವೆ. ಬುಧವಾರ ಸಂಜೆ 4 ಗಂಟೆವರೆಗೂ ಪ್ರಕರಣ ದಾಖಲಾಗುವುದಿಲ್ಲ. ಪೊಲೀಸರು 354ಎ ಸೆಕ್ಷನ್ ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅದಕ್ಕೆ ಶಿಕ್ಷೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಹೊರತು. 376 ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ಯಾಕೆ ದಾಖಲಿಸಿ ಎಂದರು.

ಕಳೆದ ಮೂವತ್ತು ದಿನಗಳಲ್ಲಿ ಮೈಸೂರಿನಲ್ಲಿ 3 ಹತ್ಯೆಗಳು ನಡೆದಿವೆ. 1 ಶೂಟೌಟ್ ಆಗಿದೆ. ಸುಮಾರು 16 ಸುಲಿಗೆಗಳು, 3 ದರೋಡೆ, ಇಂದು ಸಹ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ 12 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಆ ಜಿಲ್ಲಾ ಮಂತ್ರಿಗಳು, ರಾಜ್ಯದ ಗೃಹಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

ಕಾಂಗ್ರೆಸ್‌ ನಾಯಕ ಹೆಚ್‌.ಎಂ.ರೇವಣ್ಣ ಮಾತನಾಡಿ ‘ಬಿಜೆಪಿ ಸರ್ಕಾರದ ಅವಧಿಯಲ್ಲಿನ ಘಟನೆ ನೆನೆಸಿಕೊಂಡರೆ ಆಘಾತವಾಗುತ್ತದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪತ್ರಕರ್ತೆ ಪ್ರಶ್ನೆ ಮಾಡಿದಾಗ ಸಚಿವ ಈಶ್ವರಪ್ಪ ನಿನ್ನ ಮೇಲೆ ರೇಪ್ ಆಗಿದೆಯಾ? ಎಂದು ಕೇಳುತ್ತಾರೆ. ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಇಂದು ಮತ್ತೆ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇದೇ ವೇಳೆ ರಘುಪತಿ ಭಟ್ ಅವರ ಪ್ರಕರಣ ನೆನಪಿಗೆ ಬರುತ್ತದೆ. ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಂದಿತಾ ಅವರ ಪ್ರಕರಣ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ ಅವರ ಪ್ರವೇಶಕ್ಕೆ ಅಡ್ಡಿ ಮಾಡಿ ರಾದ್ಧಾಂತ ಮಾಡಿದ್ದರು. ಈಗ ಗೃಹ ಸಚಿವರಾಗಿರುವ ಅವರು ತಾವು ಹೋಗುವವರೆಗೂ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂಬ ಆದೇಶ ಕೊಟ್ಟಿದ್ದಾರೆ. ಇವರು ಯಾವರೀತಿ ಕಾರ್ಯ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪ ಅಮರನಾಥ್‌ ಮಾತನಾಡಿ ʻಬಿಜೆಪಿ ಸರ್ಕಾರ ಉತ್ತರ ಪ್ರದೇಶ ಮಾಡೆಲ್ ಅನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ. ಉತ್ತರ ಪ್ರದೇಶವನ್ನು ರೇಪ್ ರಾಜಧಾನಿ ಎಂದು ಕರೆಯುತ್ತಿದ್ದರು. ಆದರೆ ಈಗ ಆ ಅಪಕೀರ್ತಿ ಕರ್ನಾಟಕಕ್ಕೆ ತರುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಮಹಿಳೆ ಮೇಲೆ ದೌರ್ಜನ್ಯ ನಡೆದಾಗಲೂ ಅವರು ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನೋವಿನ ಸಂಗತಿʼ ಎಂದರು.

ರಾಮ ರಾಜ್ಯದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ತೆರದಾಳದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಮಹಿಳೆ ಮೇಲೆ ಹಲ್ಲೆ ಮಾಡಿ ಗರ್ಭಪಾತಕ್ಕೆ ಕಾರಣರಾಗಿದ್ದರು. ಅವರ ಮೇಲೂ ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನು ಮಾಜಿ ಸಚಿವರ ಮೇಲೆ ಅತ್ಯಾಚಾರ ಆರೋಪ ಬಂದಾಗಲೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನುಮುಂದೆ ಇಂತಹ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರಾದ ಶೋಭಕ್ಕಾ, ಸ್ಮೃತಿ ಇರಾನಿ, ಇಲ್ಲಿನ ಶಶಿಕಲಾ ಜೊಲ್ಲೆ ಯವರು ಯಾಕೆ ಮಾತನಾಡುತ್ತಿಲ್ಲ. ಸಚಿವರಾಗಿದ್ದರೂ ಮಹಿಳೆಯರ ಪರ ಮಾತನಾಡಲು ಅವರಿಗೆ ಅಪಮಾನವೇ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಕಾಂಗ್ರೆಸ್‌ ನಾಯಕಿ ಮೋಟಮ್ಮ ಅವರು ‘ ಮೋದಿ ಅವರು ಬೇಟಿ ಬಚಾವೋ, ಬೇಟಿ  ಪಡಾವೋ ಅಂತಾರೆ. ರಾಜಸ್ಥಾನದ ಉನ್ನಾವೋ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ  ಇಷ್ಟೆಲ್ಲಾ ಘಟನೆ ನಡೆದರೂ ಮೋದಿ ಅವರು ಯಾಕೆ ಮಾತನಾಡುತ್ತಿಲ್ಲ. ಬಿಜಾಪುರದಲ್ಲಿ ಶಾಲೆಗೆ ಹೋಗುತ್ತಿದ್ದ ದಾನಮ್ಮ ಎಂಬ ಹೆಣ್ಣು ಮಗಳನ್ನು ಎಳೆದೊಯ್ದು ದೇವಾಲಯದ ಹಿಂಭಾಗದ ಆವರಣದಲ್ಲಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದರು. ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಮುಖ್ಯಮಂತ್ರಿಗಳಾಗಲಿ, ಪ್ರಧಾನಿಗಳಾಗಲಿ, ಸರ್ಕಾರದವರಾಗಲಿ ಯಾರೂ ಹೇಳಿಕೆ ನೀಡುತ್ತಿಲ್ಲ ಎಂದರು.

ಮಂಜುಳಾ ನಾಯ್ಡು ಅವರು ಮಾತನಾಡಿ ‘ನಿರ್ಭಯ ಕೇಸ್ ನಡೆದಾಗ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು 376 ಕಾಯ್ದೆಗೆ ತಿದ್ದುಪಡಿ ತಂದು ಹೆಣ್ಣಿನ ಮೇಲಿನ ದೌರ್ಜನ್ಯ ನಡೆದರೆ ಅದು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ ಗಲ್ಲಿಗೇರಿಸುವ ಶಿಕ್ಷೆ ನೀಡುವಂತೆ ಕಾಯ್ದೆಯನ್ನು ಬಲಪಡಿಸಿದ್ದರು. ಮಂಗಳೂರಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗ, ಇದನ್ನು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಉಗ್ರಪ್ಪ ಅವರಿಗೆ ಹೇಳಿದಾಗ 11 ಫಾಸ್ಟ್ ಟ್ರ್ಯಾಕ್ ಕೋರ್ಟ್, 5 ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು.

ಹೆಣ್ಣಿನ ಮೇಲೆ ಅತ್ಯಾಚಾರ ಸಂಬಂಧಿಸಿದಂತೆ  ಉಡಾಫೆ ಹೇಳಿಕೆ ನೀಡುತ್ತಿರುವ ಸಚಿವರಿಗೆ ನಾಚಿಕೆಯಾಗಬೇಕು. ನಾವು ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯಲು ಕಾನೂನು ಬಲಪಡಿಸಿದರೆ, ಇವರು ಅದನ್ನು ಸಡಿಲ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಮನಸ್ಥಿತಿ ಇರುವ ಸರ್ಕಾರ ದೇಶದಲ್ಲಿ ಆಡಳಿತ ನಡೆಸಲು ನಾಲಾಯಕ್ಕುʼ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *