ತುಮಕೂರು: ರಾಜ್ಯದಲ್ಲಿ ಬರೀ ಗೈಲಿ ಮಲ ಬಾಚುವ ಪದ್ದತಿ ಇನ್ನೂ ಜೀವಂತವಾಗಿದೆ. ಹೌದು, ಅದು ಕೂಡ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲಿ. ತುಮಕೂರು ಜಿಲ್ಲೆ ಕೊರಟಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್ನಿಂದ ಮಲ ಹೊರಬಂದಿತ್ತು. ಅದನ್ನು ಬಾಚಿ ಎತ್ತಿ ಹಾಕಲು ಕೂಲಿ ಕಾರ್ಮಿಕ ಹಾಗೂ ಬಾಲಕನನ್ನ ಬಳಕೆ ಮಾಡುವ ಮೂಲಕ ಅಮಾನವೀಯ ಘಟನೆಕ್ಕೆ ಸಾಕ್ಷಿಯಾಗಿದ್ದಾರೆ.
ದಲಿತರಿಂದ ಮಲ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ಮಾಧ್ಯಮದವರನ್ನ ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಧ್ಯಮದವರು ಬಾಲಕನನ್ನ ಮಾತನಾಡಿಸಿದ ವೇಳೆ ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕುಮಾರಣ್ಣ ಎಂಬುವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ, ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ತನಗೆ 10 ವರ್ಷ ವಯಸ್ಸು ಎಂದು ಬಾಲಕ ಹೇಳಿಕೊಂಡಿದ್ದಾನೆ.
ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಗದರಿಸುತ್ತಾನೆ. ಕೂಡಲೇ ಬಾಲಕ ತಾವು ಕೆಲಸ ಮಾಡಲು ಬಳಸುತ್ತಿದ್ದ ಗುದ್ದಲಿ, ಬಾಣಲಿ ತೆಗೆದುಕೊಂಡು ಅಸಹಾಯಕತೆಯಿಂದ ಅಲ್ಲಿಂದ ಶೌಚಾಲಯದ ಕಡೆ ತೆರಳಿದ್ದು ಸಿಬ್ಬಂದಿಯ ದೌರ್ಜನ್ಯಕ್ಕೆ ಸಾಕ್ಷಿಯಾಯಿತು.
ಇದನ್ನೂ ಓದಿ: ಸೇನಾಧಿಕಾರಿ ಕಿರುಕುಳ | ಉಗ್ರಗಾಮಿಯಾಗಲು ಬಯಸಿದ್ದ ನ್ಯಾಷನಲ್ ಕಾನ್ಸರೆನ್ಸ್ ಶಾಸಕ
ಮಾನವನಿಂದ ಮಲ ಹೊರುವ ಪದ್ದತಿ ನಿಷೇಧ ಹಾಗೂ ಬಾಲಕಾರ್ಮಿಕ ಪದ್ದತಿ ನಿಷೇಧ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಅಧಿಕಾರಿಗಳ ಸಮ್ಮುಖದಲ್ಲೆ ಉಲ್ಲಂಘನೆಯಾಗಿರುವುದು ನಿಜಕ್ಕೂ ದುರಂತ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿರುವ ಬಸ್ ನಿಲ್ದಾಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿ, ಸಿಬ್ಬಂದಿಗಳು ನಿರ್ಭೀತಿಯಿಂದ ದಲಿತರ ಕೈಯಲ್ಲಿ ಇಂತಹ ಅನಿಷ್ಟದ ಕೆಲಸ ಮಾಡಿಸಿರುವುದು ಸಚಿವರ ಆಡಳಿತ ಸಾಮರ್ಥ್ಯವನ್ನು ಅಣಕಿಸಿದೆ.
ಈ ಪ್ರಕರಣವನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ. ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಸಚಿವರೇ ಮುಂದೆ ನಿಂತು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್ ಕೆ ದೇಸಾಯಿ Janashakthi Media