ಗೃಹ ಸಚಿವರ ಆರೋಪ ನಿಜವಾಗಿದ್ದಲ್ಲಿ ಅವರ ಮೇಲೆ 376 ಸೆಕ್ಷನ್ ಕೇಸ್ ಹಾಕಿ ಬಂಧಿಸಿ: ಡಿ.ಕೆ ಶಿವಕುಮಾರ್

ಬೆಂಗಳೂರು: ಗೃಹ ಮಂತ್ರಿಗಳು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ರೇಪ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದು, ಅದು ಯಾರೇ ಆಗಿರಲಿ ಅವರ ಮೇಲೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಿ’ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ʻಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಯಾವ ಕಾಂಗ್ರೆಸಿಗರು ರೇಪ್ ಮಾಡಿದ್ದಾರೆ..?! ಗೃಹ ಸಚಿವರ ಮೇಲೆ ಯಾರು ರೇಪ್ ಮಾಡಿದ್ದಾರೋ, ಅದು ಯಾವುದೇ ನಾಯಕರಾಗಿರಲಿ, ಅವರ ಮೇಲೆ ಪೊಲೀಸರು 376 ಕಾಯ್ದೆ ಅನ್ವಯ ದೂರು ದಾಖಲಿಸಿ, ಬಂಧಿಸಲಿ ಎಂದು ನಾನು ಪೊಲೀಸ್ ಮಹಾ ನಿರ್ದೇಶಕರನ್ನು (ಡಿಜಿಪಿ) ಆಗ್ರಹಿಸುವೆ ಎಂದರು.

ಇದನ್ನು ಓದಿ: ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌ ‘ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿ 48 ಗಂಟೆಗಳಾದರೂ ಯಾರನ್ನೂ ಬಂಧಿಸದಿರುವುದು ತನಿಖೆಯನ್ನು ಚುರುಕುಗೊಳಿಸಿದಿರುವುದು ನಾಚಿಕೆಗೇಡಿನ ಸಂಗತಿ. ಆದಷ್ಟು ಬೇಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಇಲಾಖೆಯ ಮರ್ಯಾದೆ ಹಾಳು ಮಾಡಬಾರದು ಎಂದು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ. ಆರೋಪಿಗಳ ರಕ್ಷಣೆಗೆ ನಿಲ್ಲಬೇಡಿ ಎಂದು ನಾನು ವಿಧಾನಸಭೆ ಅಧಿವೇಶನದಲ್ಲೂ ಆಗ್ರಹಿಸಿದ್ದೆ. ಆದರೆ ಈ ಸರಕಾರ ಬೇಜವಾಬ್ದಾರಿ ಮೆರೆಯುತ್ತಿದೆʼʼ ಎಂದು ಟೀಕಿಸಿದರು.

ಮೈಸೂರು ದುರ್ಘಟನೆಗೆ ಸಂಬಂಧಿಸಿದಂತೆ ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ತನಿಖಾ ಸಮಿತಿ ರಚಿಸಿದ್ದೇವೆ. ಈ ಸಮಿತಿಯಲ್ಲಿ ಎಚ್.ಎಂ ರೇವಣ್ಣ, ಶಾಸಕ ತನ್ವಿರ್ ಸೇಠ್, ರೂಪಾ ಶಶಿಧರ್, ಮಲ್ಲಜಮ್ಮ, ಮಾನಸ ಮಂಜುಳಾ, ಮಂಜುಳಾ ನಾಯ್ಡು ಅವರು ಇದ್ದಾರೆ. ಈ ಸಮಿತಿ ಕೂಡಲೇ ಮೈಸೂರಿಗೆ ಹೋಗಿ, ಪ್ರಕರಣದ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಸಂತ್ರಸ್ಥೆಯ ಗುರುತನ್ನು ಬಹಿರಂಗಪಡಿಸಿದ್ದು, ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ದಾಖಲೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಸರಕಾರ ಪೋಲಿಸ್‌ ಇಲಾಖೆ ಬಗ್ಗೆ ನಂಬಿಕೆ ಇಲ್ಲದೆ ಎಸ್ಐಟಿ ತನಿಖಾ ತಂಡ ರಚಿಸಿದೆ. ಅತ್ಯಾಚಾರ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದೇ ಇರೋ ಪೊಲೀಸರು ಮರ್ಯಾದೆ ಕಳೆದುಕೊಂಡಿದ್ದಾರೆ. ಪೊಲೀಸರಿಗೆ ಇಂಥ ದುಸ್ಥಿತಿ ಬರಬಾರದಿತ್ತು. ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ನೋವು ವ್ಯಕ್ತಪಡಿಸಿದರು.‌

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ಮೋಟಮ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಹಿಳಾ ಹೋರಾಟಗಾರ್ತಿ ಮಂಜುಳಾ ನಾಯ್ಡು, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ, ಸಲೀಂ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *