ಪ್ರಾಮಾಣಿಕತೆಯಿಂದ ನೇಮಕಾತಿಯಾಗಲಿದೆ ವಂಚನೆಗಳಿಗೆ ಒಳಗಾಗದಿರಿ: ಆರಗ ಜ್ಞಾನೇಂದ್ರ

ಬೆಂಗಳೂರು: ‘ಪೊಲೀಸ್‌ ಇಲಾಖೆಯುಲ್ಲಿ ಕೆಲಸ ಕೊಡಿಸುತ್ತೇನೆಂದು ಕೆಲವರು ಭರವಸೆ ನೀಡಿ ಅಭ್ಯರ್ಥಿಗಳನ್ನು ವಂಚಿಸುತ್ತಿರುವ  ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಯಾವುದೇ ವಂಚನೆಗಳಿಗೆ ಒಳಗಾಗದಿರಿʼ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟವಾಗಿ ನುಡಿದರು.

ಪೊಲೀಸ್ ಸಬ್‌ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಗೃಹ ಸಚಿವರು ಪೊಲೀಸ್ ಹುದ್ದೆ ಕೊಡಿಸುವ ಹೆಸರಿನಲ್ಲಿ ವಂಚನೆ ಮಾಡುವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದ್ದಾರೆ.

ಇದನ್ನು ಓದಿ: ನೌಕರಿ ಹೆಸರಲ್ಲಿ ವಂಚನೆ ; ವಿಧಾನಸೌಧವೇ ಇವರ ಅಡ್ಡ!

‘ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕಾನ್‌ಸ್ಟೆಬಲ್‌ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿಯನ್ನು ಪಾರದರ್ಶಕವಾಗಿ ಮತ್ತು ನಿಯಮಗಳ ಅನುಸಾರವಾಗಿಯೇ ನಡೆಯಲಿದೆ. ಯಾರೂ ವದಂತಿಗಳಿಗೆ ಬಲಿಯಾಗದಿರಿʼ  ಎಂದರು.

ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ 947 ಸಬ್ ಇನ್ಸ್ ಪೆಕ್ಟರ್ ಹಾಗೂ 4000 ನಾಗರೀಕ ಕಾನ್ಸ್ ಸ್ಟೆಬಲ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ನೇಮಕಾತಿ ಪ್ರಕ್ರಿಯೆಯಗಳ ಭಾಗವಾಗಿ ನಡೆಯುತ್ತಿರುವ ದೈಹಿಕ ಸಾಮರ್ಥ್ಯತೆ ಹಾಗೂ ಲಿಖಿತ ಪರೀಕ್ಷೆಗಳು, ಅತ್ಯಂತ ಪಾರದರ್ಶಕವಾಗಿದ್ದು ಇದರಲ್ಲಿ ದಾಖಲಾಗುವ ಫಲಿತಾಂಶಗಳೇ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಗಳಾಗಿರುತ್ತವೆ. ಹುದ್ದೆ ಕೊಡಿಸುವುದಾಗಿ ಯಾರದರೂ ಆಮಿಷ ಒಡ್ಡಿದರೆ, ಅಭ್ಯರ್ಥಿಗಳು ಅಥವಾ ಅವರ ಪೋಷಕರು, ವಿಷಯವನ್ನು ಪೊಲೀಸರಿಗೆ ತಿಳಿಸಬೇಕು, ಮತ್ತು ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಅಜ್ಞಾತ ಸ್ಥಳಗಳಿಂದ ಸ್ಯಾಟಲೈಟ್ ಕರೆ ವಿಚಾರವಾಗಿಯೂ ಮಾತನಾಡಿದ ಅವರು, ಎಷ್ಟು ಕರೆಗಳು ಹೋಗಿದೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಕೇಂದ್ರ ಸರ್ಕಾರದ ತಂಡ ರಾಜ್ಯದ ಪೊಲೀಸರ ಜೊತೆ ಸಂಪರ್ಕದಲ್ಲಿದೆ. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ. ಈ ಬಗ್ಗೆ ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ. ಯಾವುದೇ ಅರಣ್ಯ ಪ್ರದೇಶದಿಂದ ಕರೆ ಹೋಗಿರಲಿ. ಅದನ್ನು ಪತ್ತೆಮಾಡಿ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *