ಬೆಂಗಳೂರು: ಕೋವಿಡ್ ಸೋಂಕಿತರಲ್ಲಿ ಕಡಿಮೆ ಪ್ರಮಾಣದ ಲಕ್ಷಣಗಳು ಹೊಂದಿದ ಎಲ್ಲರೂ ಮನೆ ಆರೈಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇನ್ನು ಮುಂದೆ ಸೋಂಕಿತರಿಗೆ ಮನೆ ಆರೈಕೆ ವ್ಯವಸ್ಥೆ ಇಲ್ಲವಾಗಿದ್ದು ಸೋಂಕಿತರು ಕಡ್ಡಾಯವಾಗಿ ಹತ್ತಿರದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಿಬೇಕೆಂದು ಬಿಬಿಎಂಪಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಆದೇಶ ಹೊರಡಿಸಿರುವ ಬಿಬಿಎಂಪಿ ಮನೆ ಆರೈಕೆಗೆ ಸಂಬಂಧಿಸಿದಂತೆ ಬಹುತೇಕ ಮನೆಗಳಲ್ಲಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಉತ್ತಮ ವಾತವರಣವಾಗಲಿ, ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇರಬೇಕಾಗುತ್ತದೆ. ಹಾಗೂ ಸೋಂಕಿತರ ಮನೆಯಲ್ಲಿ ಇತರೆ ಆರೋಗ್ಯ ಸಮಸ್ಯೆ ಇರುವವರು ಇರಬಾರದು ಎಂಬುದು ಪ್ರಮುಖ ಅಂಶವಾಗಿದೆ.
ಇದನ್ನು ಓದಿ: ಗುಣಮುಖರ ಸಂಖ್ಯೆಯಲ್ಲಿ ಏರಿಕೆ. ಇಳಿಕೆಯಾಗದ ಸಾವಿನ ಸಂಖ್ಯೆ
ಈ ಎಲ್ಲ ಅಂಶಗಳು ಇವೆಯೇ ಎಂದು ಪರಿಶೀಲಿಸಿ ಕೋವಿಡ್ ಸೋಂಕಿತರಿಗೆ ಮನೆ ಆರೈಕೆಗೆ ಅನುಮತಿ ನೀಡಬೇಕು. ಇವುಗಳಲ್ಲಿ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲದಿದ್ದರೂ, ಸೋಂಕಿತರು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕೆಂದು ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ಆದೇಶಿಸಿದ್ದಾರೆ.
ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಕುರಿತು ಬಿಬಿಎಂಪಿ ಮಾಹಿತಿ ನೀಡಿದ್ದು ಮನೆ ಆರೈಕೆಯಲ್ಲಿದ್ದ 778 ರೋಗಿಗಳು ಮೇ ತಿಂಗಳಲ್ಲಿ ಸಾವನ್ನಪ್ಪಿದ ಬಗ್ಗೆ ಪರಿಶೀಲನಾ ಸಮಿತಿಯು ವರದಿ ನೀಡಿತ್ತು.
ನೆನ್ನೆ ದಾವಣಗೆರೆಯಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮನೆ ಆರೈಕೆಯಲ್ಲಿರುವ ಕೋವಿಡ್ ಸೋಂಕಿತರಿಂದಲೇ ಇತರರಿಗೂ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಡ್ ಸೋಂಕಿತರಿಗೆ ಮನೆ ಆರೈಕೆಗೆ ಅವಕಾಶ ನೀಡುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮತ್ತೆ ಲಾಕ್‌ಡೌನ್ ವಿಸ್ತರಿಸಿದ್ದು ಜೂನ್ 7ರವರೆಗೂ ಮುಂದುವರೆದಿದೆ.
ಸೋಂಕು ಹರಡುವಿಕೆ ಕಡಿಮೆಯಾಗದ ಕಾರಣಗಳ ನಿಖರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಸೋಂಕಿತರಿಗೆ ಮನೆ ಆರೈಕೆ ನೀಡಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಪರೋಕ್ಷ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಮನೆ ಆರೈಕೆಗೆ ಸರಕಾರ ನಿಷೇಧಿಸಿದೆ.