ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ವಾರ್ಡ್ ನಿರ್ಮಿಸಲಾಗಿದ್ದು, ಈ ಬಗ್ಗೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಪಾಲಾಕ್ಷ, 50 ಬೆಡ್ ಗಳಲ್ಲಿ 10 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ರಾಮಚಂದ್ರಪ್ಪ “ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ. ನನಗೆ ಅವಶ್ಯಕತೆ ಇಲ್ಲ. ‘ಸಾಯೋರು ಎಲ್ಲಾದರೂ ಸಾಯಲಿ’ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಬಿಜೆಪಿ ಶಾಸಕರ ಉಡಾಫೆ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸಚಿವ ಸದನಾಂದ ಗೌಡ ನಾವೇನು ನೇಣು ಹಾಕಿಕೊಳ್ಳಬೇಕಾ? ಎಂದರೆ ಉಮೇಶ್ ಕತ್ತಿ ಯಾರಾದ್ರೂ ಸಾಯಲಿ ನಾ ಮಾತ್ರ ಬದುಕಿರಬೇಕು ಅಂತಾರೆ. ಬಿಜೆಪಿ ಶಾಸಕ ಸಿದ್ದು ಸವಡಿ ಕಷ್ಟ ಹೇಳೋಕೆ ಫೋನ್ ಮಾಡಿದ್ರೆ ಕೆಟ್ಟದಾಗಿ ಬಯ್ಯ್ದು ಬೆದರಿಕೆ ಹಾಕ್ತಾರೆ. ರಕ್ಷಣೆ ನೀಡಬೇಕಾದ ಶಾಸಕರು, ಸಚಿವರು ಈ ರೀತಿ ಉಡಾಫೆ ಮಾತುಗಳು ಇತ್ತಿಚೆಗೆ ಹೆಚ್ಚಾಗಿ ಕೇಳು ಬರುತ್ತಿವೆ. ಇದು ಅವರ ಅಸಮರ್ಥ್ಯವೋ, ಅಸಹಾಯಕವೋ, ದುರಹಂಕಾರವೋ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.