ಅತೀ ಹೆಚ್ಚು ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿರುವ ಸಿದ್ದರಾಮಯ್ಯ
ಬಾಪು ಅಮ್ಮೆಂಬಳ
ನೂತನ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರ ಶುಕ್ರವಾರದಂದು 2023-24ನೇ ಸಾಲಿನ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು 14ನೇ ಬಜೆಟ್ ಆಗಲಿದ್ದು, ಈ ಮೂಲಕ ಅವರು ಅತೀ ಹೆಚ್ಚು ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ. ಈ ಹಿಂದೆ ಅವರು 13 ಬಾರಿ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದ ಸಿದ್ದರಾಮಯ್ಯಾ ಅವರು 2013 ರಿಂದ 2018ರ ವರೆಗೆ 6 ಬಾರಿ ಬಜೆಟ್ ಮಂಡಿಸಿದ್ದರು. ಅದಕ್ಕೂ ಮುಂಚೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ 7 ಬಾರಿ ಬಜೆಟ್ ಮಂಡಿಸಿದ್ದರು. ಇದೀಗ ಅವರು ತನ್ನ 14ನೇ ಬಜೆಟ್ ಅನ್ನು ನಾಳೆ ಮಂಡಿಸಲಿದ್ದಾರೆ. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವಜುಬಾಯಿ ರುರುಡಾಬಾಯಿವಾಲಾ ಅವರು 18 ಬಾರಿ ಬಜೆಟ್ ಮಂಡಿಸಿದ್ದು ದೇಶದಲ್ಲೆ ಅತೀ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದರೆ ವಜುಬಾಯಿ ಅವರ ದಾಖಲೆಗಳನ್ನು ಸಿದ್ದರಾಮಯ್ಯ ಮೀರಿಸಲಿದ್ದಾರೆ.
ಇದನ್ನೂ ಓದಿ: ಜುಲೈ 7 ರಂದು ಬಜೆಟ್ ಮಂಡನೆ: ಸಿದ್ದರಾಮಯ್ಯ
ಸರ್ಕಾರ ಚುನಾವಣೆ ಮುಂಚೆ ಘೋಷಿಸಿದ ಐದು ಗ್ಯಾರೆಂಟಿಗಳಲ್ಲಿ ಒಂದನ್ನು ಜಾರಿ ಮಾಡಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ತಿಂಗಳಿನಿಂದ ಜಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ. ಸುಮಾರು 80 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಈಗಾಗಲೆ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ. ಅನ್ನಭಾಗ್ಯ ಅಕ್ಕಿಯ ವಿಚಾರದಲ್ಲಿ ಸರ್ಕಾರ ಒಕ್ಕೂಟ ಸರ್ಕಾರದ ಕಡೆ ಬೆರಳು ತೋರಿಸುತ್ತಿದ್ದು, ಅದಾಗ್ಯೂ ಐದು ಕೆ.ಜಿ. ಅಕ್ಕಿಯ ಹಣವನ್ನು ನೇರವಾಗಿ ನೀಡಲಿದ್ದೇವೆ ಎಂದು ಹೇಳಿದೆ. ಇನ್ನು ಉಳಿದಂತೆ ಗೃಹಲಕ್ಷ್ಮಿ ಮತ್ತು ಯುವನಿಧಿ ಜಾರಿಗೆ ಸರ್ಕಾರ ಇನ್ನೂ ಮುಂದಾಗಿಲ್ಲ. ಈ ಎಲ್ಲಾ ಯೋಜನೆ ಸೇರಿದಂತೆ ನೂತನ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಾಗಿಯೆ ಇವೆ.
ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಗಾತ್ರ ಅಂದಾಜು ಸುಮಾರು 3.35 ಲಕ್ಷ ಕೋಟಿ ರೂಪಾಯಿ ಇರಲಿದೆ ಎಂದು ವರದಿಯಾಗಿದೆ. ಕೊನೆಯ ಬಾರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಸರಕಾರ ಮಂಡಿಸಿದ ಬಜೆಟ್ ಗಾತ್ರ 2,51,541 ಕೋಟಿ ರೂ. ಇತ್ತು. 2021-22ರಲ್ಲಿ 2,38,600 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು.
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ತಾರತಮ್ಯ ಮಾಡಿದೆ ಎಂಬ ಆರೋಪ ವ್ಯಾಪಕವಾಗಿ ಮಾಡಲಾಗಿತ್ತು. ಇದನ್ನು ಸಿದ್ದರಾಮಯ್ಯ ಅವರ ಸರ್ಕಾರ ಸರಿಪಡಿಸಲಿದೆ ಎಂದು ನಂಬಲಾಗಿದೆ. ಇಷ್ಟೆ ಅಲ್ಲದೆ ಐದು ಗ್ಯಾರೆಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಬಜೆಟ್ ಅನ್ನು ಹೇಗೆ ಸಮತೋಲನ ಮಾಡಲಿದ್ದಾರೆ ಎಂಬ ವಿಚಾರವೂ ನಾಳೆ ತಿಳಿಯಲಿದೆ.
ಇದನ್ನೂ ಓದಿ: 2023-24ನೇ ಸಾಲಿನ BBMP ಬಜೆಟ್ ಮಂಡನೆ
ಈ ನಡುವೆ ದಿನಬಳಕೆ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು ಅವುಗಳ ಇಳಿಕೆಯ ಬಗ್ಗೆಯು ಜನಸಾಮಾನ್ಯರು ನಿರೀಕ್ಷೆಯಲ್ಲಿದ್ದಾರೆ. ಅಂಗನವಾಡಿ ನೌಕರರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು ತಮ್ಮನ್ನು ಖಾಯಂ ಮಾಡುವುದು ಸೇರಿದಂತೆ ಹಲವಾರು ಸಮಸ್ಯೆ ವಿಚಾರವಾಗಿ ಎಂದು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೂಡಾ ನೌಕರರು ನಿರೀಕ್ಷೆಯಲ್ಲಿದ್ದಾರೆ. ಹೊಸದಾಗಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸಮಸ್ಯೆ ವಿಚಾರವಾಗಿ ವಿದ್ಯಾರ್ಥಿ ಸಮೂಹ ನಿರೀಕ್ಷೆಯಲ್ಲಿದೆ.
ರೈತರು ಸಾಲಮನ್ನಾದ ನಿರೀಕ್ಷೆಯಲ್ಲಿದ್ದು, ಹೈನುಗಾರರು ಮತ್ತು ಮೀನುಗಾರರು ಪ್ರೋತ್ಸಾಹ ಧನ, ನಷ್ಟ ಪರಿಹಾರ, ಸಬ್ಸಿಡಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಜಾರಿಗೆ ಕಾಯುತ್ತಿದ್ದಾರೆ. ಕೊರೊನಾ ಹೊಡೆತದಿಂದ ಕಂಗೆಟ್ಟಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೂಡಾ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ. ಅಲ್ಲದೆ ಹಲವಾರು ಸಮುದಾಯಗಳು ತಮ್ಮತಮ್ಮ ಸಮುದಾಯಕ್ಕೆ ಮಂಡಳಿ, ನಿಗಮ ನೀಡುವ ಬಗ್ಗೆ ಈಗಾಗಲೆ ಒತ್ತಡ ಹೇರಿದ್ದು, ಭಾರಿ ನಿರೀಕ್ಷೆಯಲ್ಲಿದ್ದಾರೆ.