ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಅವರು ಇಂದು ಬೆಳಗಿನ‌ಜಾವ (ಶನಿವಾರ) ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ 2.30ರ ಸುಮಾರಿಗೆ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜೇಶ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ರಾಜೇಶ್ ಅವರಿಗೆ ಬೆಂಗಳೂರಿನ ಕಸ್ತೂರಬಾ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ರಾಜೇಶ್ ಮೂಲ ಹೆಸರು ಮುನಿಚೌಡಪ್ಪ :
ನಟ ರಾಜೇಶ್ 1935 ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ಇವರ ನಿಜನಾಮ ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ರಂಗಭೂಮಿ ಪ್ರವೇಶಿಸಿದರು. ‘ಸುದರ್ಶನ ನಾಟಕ ಮಂಡಳಿ’ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು.

ಬಳಿಕ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ವಿದ್ಯಾಸಾಗರ್ ರೂಪಿದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಗಮನ ಸೆಳೆದರು.

ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವಿದ್ಯಾಸಾಗರ್ ಅವರನ್ನು ‘ವೀರ ಸಂಕಲ್ಪ’ ಸಿನಿಮಾದ ಮೂಲಕ ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ವಿದ್ಯಾಸಾಗರ್‌ಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ‘ಶ್ರೀ ರಾಮಾಂಜನೇಯ ಯುದ್ಧ’, ‘ಗಂಗೆ ಗೌರಿ’ ಚಿತ್ರಗಳಲ್ಲೂ ವಿದ್ಯಾಸಾಗರ್ ಅಭಿನಯಿಸಿದರು.

1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್‌ ಇಂದ ರಾಜೇಶ್‌ ಎಂದು ಬದಲಾಯಿಸಿಕೊಂಡರು. ನಟ ರಾಜೇಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ‘ನಮ್ಮ ಊರು’. ಸಿ.ವಿ.ಶಿವಶಂಕರ್ ನಿರ್ದೇಶನದ ‘ನಮ್ಮ ಊರು’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು.

‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ರಾಜೇಶ್‌ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

Donate Janashakthi Media

Leave a Reply

Your email address will not be published. Required fields are marked *