ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಜಾಮಿಯಾ ಮಸೀದಿ ವಿವಾದವನ್ನು ಮತ್ತೆ ಮುನ್ನಲೆಗೆ ತಂದಿರುವ ಹಿಂದುತ್ವವಾದಿಗಳು ಜಾಮಿಯಾ ಮಸೀದಿಯನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿ, ಕರಪತ್ರಗಳನ್ನು ಹಂಚಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ.
ಹಿಂದುತ್ವ ಪರ ಸಂಘಟನೆಗಳು ಜಾಮಿಯಾ ಮಸೀದಿ ಚಲೋ ಚಳವಳಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಐವರಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ತಿಳಿಸಲಾಗಿದೆ.
ನಿಷೇಧಾಜ್ಞೆ ಇದ್ದರೂ ಸಹ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮಸೀದಿ ಪ್ರವೇಶಿಸುವ ಬಗ್ಗೆ ಮಂಡ್ಯ ತಾಲ್ಲೂಕಿನ ಉಪ್ಪರಕನಹಳ್ಳಿಯ ಹಿಂದುತ್ವವಾದಿ ಶಿವಕುಮಾರ್ ಆರಾಧ್ಯ ಪೊಲೀಸರ ಸೂಚನೆಗೂ ಕ್ಯಾರೆ ಎನ್ನದೆ ಕರಪತ್ರ ಹಂಚಿಕೆ ಮಾಡಿದ್ದಾನೆ.
ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ 144ನೇ ವಿಧಿ ಅನ್ವಯ ತಹಶೀಲ್ದಾರ್ ಶ್ವೇತಾ ಎನ್.ರವಿಂದ್ರ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಕರಪತ್ರ ಹಂಚಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದರೂ, ಯಾವ ಆದೇಶಗಳಿಗೂ ಹಿಂದುತ್ವವಾದಿಗಳು ಬಗ್ಗುತ್ತಿಲ್ಲ. ನಾಳೆ (ಜೂನ್ 4) ಹಲವು ನಾಟಕೀಯ ಬೆಳವಣಿಗೆಗಳು ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಮದ್ಯ ಮಾರಾಟ ನಿಷೇಧ
ಜೂನ್ 4ರಂದು ಹಿಂದೂಪರ ಸಂಘಟನೆಗಳಿಂದ ನಡೆಯಲಿರುವ ಶ್ರೀರಂಗಪಟ್ಟಣ ಜಾಮೀಯ ಮಸೀದಿ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡದಂತೆ ನಿಷೇಧಿಸಿಲಾಗಿದೆ. ಅಂದು ನಡೆಯುವ ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಯ ಪ್ರತಿಭಟನೆಗೂ ಅವಕಾಶವಿಲ್ಲ. ಅತಿ ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಗಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಇಂದು (ಜೂನ್ 3) ಸಂಜೆ 6ರಿಂದ ಜೂನ್ 5ರವರೆಗೆ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ 5 ಕಿಮೀ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ. ಶನಿವಾರ ನಡೆಯಬೇಕಿದ್ದ ವಾರದ ಸಂತೆಯನ್ನೂ ಮುಂದೂಡಿ ಪುರಸಭೆ ಮುಖ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಾಮಿಯಾ ಮಸೀದಿಯಲ್ಲಿ ಮದರಸಾ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಡಳಿತಕ್ಕೆ ದೂರು ನೀಡಿದೆ. ಮಸೀದಿಯಲ್ಲಿ ಮದರಸಾ ವಿದ್ಯಾರ್ಥಿಗಳಿರುವ ವಿಡಿಯೊ ಒಂದು ಈಗ ವೈರಲ್ ಆಗಿದೆ. ಮದರಸಾವನ್ನು ಖಾಲಿ ಮಾಡಬೇಕು ಎಂದು ವಿಎಚ್ಪಿ ಒತ್ತಾಯಿಸಿದೆ.