ಹಿಂದುಳಿದ ವರ್ಗಗಳ ಆಯೋಗ ವರದಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವ ಸರಕಾರ: ಸಿದ್ದರಾಮಯ್ಯ

ಬೆಂಗಳೂರು : ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಒಂದು ಜಾತಿ ಅಥವಾ ಜನಾಂಗದ ಪರವಾಗಿ ಆರ್ಥಿಕತೆ, ಸಾಮಾಜಿಕ, ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಲ್ಲ. ಆಯೋಗದ ವರದಿಯನ್ನು ಸ್ವೀಕರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ದಿವಂಗತ ರಾಜೀವ್ ಗಾಂಧಿ ಮತ್ತು ದಿವಂಗತ ಡಿ.ದೇವರಾಜ ಅರಸು ಅವರ ಜನ್ಮದಿನಾಚಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಮಾತನಾಡಿದರು.

ಸಚಿವ ಈಶ್ವರಪ್ಪ ಹೊರಗಡೆ ಬಂದು ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು ಎನ್ನುತ್ತಾರೆ. ಈ ವಿಚಾರದಲ್ಲಿ ಅವರು ಒಂದು ದಿನವಾದರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿಲ್ಲ. ವರದಿಯಲ್ಲಿ ಒಂದು ಜಾತಿಯ ಪರ ಏನಾದರೂ ಶಿಫಾರಸು ಮಾಡಲಾಗಿದೆಯೇ ? ಎಲ್ಲ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಅದನ್ನು ಸ್ವೀಕರಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಹಿಂದುಳಿದ ಸಮುದಾಯದವರಿಗೆ ವಿಶೇಷ ಯೋಜನೆ: ಬಸವರಾಯ ಬೊಮ್ಮಾಯಿ

ಬಿಜೆಪಿಯವರು ಮಹಾ ಮೋಸಗಾರರು ಮತ್ತು ಸುಳ್ಳುಗಾರರು. ಜನರಿಗೆ ಸಳ್ಳುಗಳನ್ನು ಹೇಳಿಯೇ ದಾರಿ ತಪ್ಪಿಸುವವರು. ಇತಿಹಾಸ ತಿರುಚುವಲ್ಲಿ ಹಾಗೂ ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿ ಕೇವಲ ಭ್ರಷ್ಟರ ಪಕ್ಷವಲ್ಲ. ಆ ಪಕ್ಷದ ನಾಯಕರು ಸಂವಿಧಾನ, ಸಾಮಾಜಿಕ ನ್ಯಾಯ, ಮೀಸಲು ಸೌಲಭ್ಯದ ವಿರೋಧಿಗಳು ಆಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವರದಿಯನ್ನು ಸಿದ್ದರಾಮಯ್ಯ ಅವರೇ ಬರೆಯಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ಸರಕಾರಕ್ಕೆ ವರದಿ ಸೇರಿಲ್ಲ.  ಪುಟ್ಟರಂಗ ಶೆಟ್ಟಿಯವರು ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿದ್ದಾಗ ವರದಿ ಅಂಗೀಕಾರ ಮಾಡಿಸಿ ಎಂದು ಸೂಚಿಸಿದ್ದೆ. ಆಗ ಕುಮಾರಸ್ವಾಮಿಯವರು ವರದಿ ಮಂಡಿಸಲು ಪುಟ್ಟರಂಗ ಶೆಟ್ಟಿಯವರಿಗೆ ಅವಕಾಶ ಕೊಡಲಿಲ್ಲ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಹೀಗಾಗಿ ಜಗಳ ಬೇಡ ಬಿಡಿ ಎಂದು ಹೇಳಿದ್ದೆ.

ಸರ್ಕಾರಿ ಶಾಲಾ ಶಿಕ್ಷಕರ ನೆರವಿನಿಂದ ತಯಾರಿಸಿದ ವರದಿ ಅದು. ಖಾಸಗಿಯವರು ಮಾಡಿದ್ದಲ್ಲ. ಈ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಅದಕ್ಕೆ ಅಂಕಿ-ಅಂಶ ಅಗತ್ಯ. ಈ ಕಾರಣಕ್ಕಾಗಿಯೇ ವರದಿ ತಯಾರಿಸಲು ನಿರ್ಧರಿಸಲಾಗಿತ್ತು.

ಬಿಜೆಪಿಯವರಂತೂ ಹಿಂದುಳಿದ ವರ್ಗದವರಿಗೆ ಮೀಸಲು ತಾವೇ ಕೊಟ್ಟಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ರಾಜೀವ್‍ಗಾಂಧಿಯವರು ಮೀಸಲು ಸೌಲಭ್ಯ ಒದಗಿಸಿದ ಬಳಿಕ ಅಂದಿನ ರಾಜ್ಯಸಭೆ ಸದಸ್ಯ, ದಿವಂಗತ ರಾಮಾಜೋಯಿಸ್ ಅವರು ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋದರು.

ಇದನ್ನು ಓದಿ: ಡಾ.ಸಿ.ಎಸ್. ದ್ವಾರಕಾನಾಥ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

ಬಿಜೆಪಿಯವರು ಎಂದಾದರೂ ಮಿಸಲು ಸೌಲಭ್ಯದ ಪರವಾಗಿ ಮಾತನಾಡಿದ್ದಾರೆಯೇ ? ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟಾಗಲೂ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದವರು ಬಿಜೆಪಿ ನಾಯಕರು. ಮೀಸಲು ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ಹಾವನೂರು, ಮಂಡಲ್, ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳನ್ನು ತೀವ್ರವಾಗಿ ವಿರೋಧಿಸಿದವರು ಅವರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮೋದಿಯವರಿಗೆ ನಾಚಿಕೆ ಆಗುವುದಿಲ್ಲವೇ ? ಇಡೀ ಸಮಾಜದ ಹಾಗೂ ಎಲ್ಲ ಧರ್ಮದವರು, ಜಾತಿ ಜನಾಂಗದವರನ್ನು ಒಳಗೊಂಡಿರುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ.

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಅನಂತಕುಮಾರ್ ಹೆಗಡೆ ಅವರು ಹೇಳಿಕೆ ನೀಡಿದಾಗ ಮೋದಿ ಮತ್ತು ಅಮಿತ್ ಶಾ ಮೌನ ವಹಿಸಿದ್ದೇಕೆ. ಹೇಳಿಕೆಗೆ ಅವರು ಕುಮ್ಮಕ್ಕು ಇದ್ದುದೇ ಇದಕ್ಕೆ ಕಾರಣ. ಮೀಸಲಾತಿಗೆ ಬಿಜೆಪಿ ವಿರುದ್ಧವಾಗಿರುವುದೇ ಇಂತಹ ವರ್ತನೆಗೆ ಕಾರಣ.

ಎಚ್ಚರದಿಂದ ಇರಬೇಕು

ಬಿಜೆಪಿಯವರ ಬಗ್ಗೆ ಎಚ್ಚರದಿಂದ ಇರಬೇಕು. ಅವರು ಇತಿಹಾಸ ತಿರುಚಿ ಜನರು ಅದರಲ್ಲಿಯೂ ಯುವಕರನ್ನು ದಾರಿ ತಪ್ಪಿಸುತ್ತಾರೆ. ಕಾಂಗ್ರೆಸ್ ನಲ್ಲಿರುವ ಹಿಂದುಳಿದ ವರ್ಗಗಳವರಿಗೆ ಬದ್ಧತೆ ಇರಬೇಕು. ಬದ್ಧತೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಲು ಸಾಧ್ಯ. ಇಲ್ಲದಿದ್ದರೆ ಅಧಿಕಾರ ಸಿಗುವ ಕಡೆ ಹೋಗುತ್ತಾರೆ. ಆ ರೀತಿ ಹೋದವರನ್ನು ಬಿಜೆಪಿಗೆ ಹೋಗಿರುವುದೇಕೆ ಎಂದು ಪ್ರಶ್ನಿಸಿದರೆ ಎಲ್ಲಿದ್ದರೂ ನಿಮ್ಮವನೇ ಅಣ್ಣ ಎನ್ನುತ್ತಾರೆ.

ದೇವರಾಜ ಅರಸು ಅವರು ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ ಯೋಜನೆ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೆ ತಂದು ಜನರಿಗೆ ತಲುಪಿಸಿದವರು. ಕನಸಿನಲ್ಲಿಯೂ ವಿಧಾನಸೌಧ ನೋಡದವರನ್ನು, ವಿಧಾನಸೌಧದ ಮೆಟ್ಟಿಲು ಹತ್ತುತ್ತೇವೆ ಎಂದು ನಿರೀಕ್ಷೆ ಮಾಡದವರನ್ನು ಕರೆ ತಂದು ಶಾಸಕ, ಮಂತ್ರಿಗಳನ್ನಾಗಿ ಮಾಡಿದರು. ಹಿಂದುಳಿದವರಿಗೆ ನಿಜವಾದ ಮೀಸಲು ಸೌಲಭ್ಯ ಕೊಟ್ಟವರು ದೇವರಾಜ ಅರಸು ರವರು. ಭಾರಿ ವಿರೋಧ ವ್ಯಕ್ತವಾದರೂ ಎದೆಗುಂದದೆ ನಿರ್ಣಯ ಮಾಡಿದರು.

ನಾನು ವರುಣಾ ನಾಲೆಗೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೆ. ಆಗ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದರು. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸ್ಥಳಕ್ಕೆ ಅರಸು ಅವರು ಬಂದಿದ್ದರು. ಆಗ ಮೊದಲ ಬಾರಿಗೆ ನಾನು ಅವರನ್ನು ನೋಡಿದ್ದು. ರಾಜ್ಯ ರಾಜಕಾರಣದಲ್ಲಿ ಅರಸು ಅವರು ಧೀಮಂತ ನಾಯಕ. ಅವರು ಮಾಡಿರುವ ಕೆಲಸಗಳೇ ನಮಗೆ ಸ್ಫೂರ್ತಿ. ರಾಜೀವ್ ಗಾಂಧಿ ಹಾಗೂ ಅರಸು ಅವರು ಮಾಡಿರುವ ಜನಪರ ಕಾರ್ಯಗಳನ್ನು ನೆನಪು ಮಾಡಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *