ಹಿಂದೂ ಸಮಾಜೋತ್ಸವ ಹೆಸರಿನಲ್ಲಿ ಮುಸ್ಲಿಂ ದ್ವೇಷಿ ಭಾಷಣ-ಯುವಜನತೆಯನ್ನು ದಾರಿತಪ್ಪಿಸುವ ತಂತ್ರ

ಬೆಂಗಳೂರು: ʻʻಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ನಡೆಯಬೇಕಾದ ನಿಗದಿತ ಕಾರ್ಯಕ್ರಮ ನಡೆಯದೇ ಅಲ್ಲಿ ಬರೀ ರಾಷ್ಟ್ರೀಯ ಮೂಲಭೂತವಾದಿಗಳ ಮತ್ತು ಮುಸ್ಲಿಂ ದ್ವೇಷಿಗಳ ಸಮಾವೇಶವೇ ನಡೆಯಿತು. ಬರೀ ದ್ವೇಷವನ್ನ ಹರಡುವಂತಹದ್ದೇ ಅದಾಗಿದೆʼʼ ಎಂದು ಚೇತನಾ ತೀರ್ಥಹಳ್ಳಿ ಕಟುವಾಗಿ ಟೀಕೆ ಮಾಡಿದ್ದಾರೆ.

ಇತ್ತೀಚಿಗೆ ಕ್ಲಬ್‌ ಹೌಸ್‌ ಎಂಬ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಅಂತಹದರಲ್ಲಿ ಒಂದು ಕಲ್ಲಡ್ಕ ಪ್ರಭಾಕರ ಭಟ್ಟರ ʻಹಿಂದೂ ಸಮಾಜೋತ್ಸವʼ ನಡೆಯಿತು. ಆದರೆ ಕಾರ್ಯಕ್ರಮದಲ್ಲಿ ಕೇವಲ ದ್ವೇಷವನ್ನು ಹರಡುವುದಾಗಿತ್ತು.

ಈ ಸಮಾವೇಶದ ಪ್ರಾರಂಭದಲ್ಲಿ ನಾಲ್ಕು ಹಾಡುಗಳನ್ನು ಹಾಡಲಾಗಿತ್ತು. ಅವು ಭಾರತ ಮತ್ತು ‘ತಾಯಿ ಭಾರತಿ’ಗೆ ಸಂಬಂಧಪಟ್ಟಿದೆ. ನಾಲ್ಕು ಹಾಡುಗಳಲ್ಲಿ ಒಂದು ಹಿಂದಿ ಹಾಡೂ ಇತ್ತು.

ಕಲ್ಲಡ್ಕ ಭಟ್ಟರ ಭಾಷಣದಲ್ಲಿ ಅವರಿಗೆ ಅದೆಷ್ಟು ಅಭದ್ರತೆ ಮತ್ತು ತಮ್ಮ ಧರ್ಮದ ಬಗ್ಗೆ ಅಪನಂಬಿಕೆ ಅಂದ್ರೆ, ಸನಾತನ ಧರ್ಮದ ಮೂಲ ಆಶಯಗಳನ್ನು ನಡೆಸ್ಕೊಂಡು ಹೋದ್ರೆ ಅದು ಉಳಿಯೋದೇ ಇಲ್ಲ. ಅದಕ್ಕೇ ಹಿಂದುತ್ವದ ಖಡ್ಗ ಹಿಡಿದು ಹಿಂದೂ ಹೆಣ್ಮಕ್ಳಿಗೆ ಮಕ್ಳನ್ನ ಹುಟ್ಸಿ ಮಕ್ಳನ್ನ ಹುಟ್ಸಿ ಅಂತ ಇಡೀ ಭಾಷಣದಲ್ಲಿ ಗೋಗರೆಯುತ್ತಿದ್ದರು.

ಇದನ್ನು ಓದಿ: ಉದ್ಯೋಗವಿಲ್ಲದೆ ಸಾವಿಗೆ ಶರಣಾದವರ ಸಂಖ್ಯೆ ಹೆಚ್ಚಳ

ಕಾರ್ಯಕ್ರಮದ ಪ್ರಖರ ವಾಗ್ಮಿ ಅಂಕಣಕಾರರೊಬ್ಬರು ಒಬ್ಬರು ಸ್ವಾಮೀಜಿ ಬಂದಿದಾರೆ ಅವರು ಆಶೀರ್ವಚನ ಮಾಡ್ತಾರೆ ಅಂದರು. ಅವರು ವಜ್ರದೇಹಿ ಮಠದ ಸ್ವಾಮೀಜಿ ಅಂತೆ. ಅಡ್ಡಿ ಇಲ್ಲ ಹಿಂದೂಗಳಲ್ಲಿ ಯಾವುದೇ ಜಾತಿಯವರಾಗಿರಬಹುದು, ಕೆಳ ಜಾತಿಗಳು ಅಂತಾರಲ್ಲ, ಅವರೂ ಇರಬಹುದು ಅಂದುಕೊಂಡರೆ ಅದಲ್ಲ, ಬದಲಾಗಿ ಅವರು ಕೂಡಾ ಮೇಲ್ಜಾತಿಯವರೇ!! ಕೊಂಕಣಿ ಬ್ರಾಹ್ಮಣರ ಮಠದವರಂತೆ.

ಕಲ್ಲಡ್ಕ ಭಟ್ಟರ ಮುಂದುವರೆದ ಭಾಷಣದಲ್ಲಿ ಅಸ್ಪೃಶ್ಯರಿಗೆ ಬೇಕಾದಷ್ಟು ಮಾಡಿದೀವಿ ಅಂದರು, ಅಲ್ಲದೆ, ಅಂಬೇಡ್ಕರ್ ಜನ್ಮದಿನದಂದು ದಲಿತರ ಮನೆಗೆ ಹೋಗಿ ಅವರು ಮಾಡಿದ ಅಡಿಗೇನೇ ಊಟ ಮಾಡಿದ್ದೀವೆ ಎಂದು ಹೇಳಿದ್ದಾರೆ ಇದು ಇವರ ಅಂತಹ ದೊಡ್ಡ ಸಾಧನೆಯೇ ಎಂದು ಚೇತನಾ ತೀರ್ಥಹಳ್ಳಿ ಪ್ರತಿಕ್ರಿಯಿಸಿದ್ದಾರೆ.

ಮುಂದುವರೆದು ಅನಂತಮೂರ್ತಿಯವರ ಬಗ್ಗೆ ಮಾತನಾಡುತ್ತಾ ಅವರು ಹಿಂದೂ ವಿರೋಧಿಯಾಗಿದ್ದಕ್ಕೇ ಅವ್ರು ಕಾಯಿಲೆ ಬಂದು ಸತ್ತೋದ್ರು ಎಂದು ಬಡಬಡಾಯಿಸುತ್ತಿದ್ದರು.

ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಈ ಮೊದಲಿನಿಂದಲೂ ರಾಷ್ಟ್ರೀಯತೆಯ ವಿಷಜೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಈ ಸಮಾವೇಶದಲ್ಲೂ ಅದೇ ಮಾಡಿದ್ದು, ಇದರಲ್ಲಿ ಮತ್ತು ಹೆಚ್ಚು ಉಗ್ರವಾಗಿ ಮಾತನಾಡಿದ್ದಾರೆ ಅನ್ನೋದು ನಿಜವಾಗ್ಲೂ ಆತಂಕದ ವಿಷಯ ಎಂದು ಚೇತನಾ ತೀರ್ಥಹಳ್ಳಿ ಅವರು ತಿಳಿಸಿದರು.

ಕಲ್ಲಡ್ಕ ಭಟ್ಟರ ಮಾತುಗಳಲ್ಲಿ ತಾಲಿಬಾನಿನ ವಿಚಾರಗಳು ಹೊಳೆಯುತ್ತಿದ್ದು, ಅದೇ ಮಾದರಿಯಲ್ಲಿ ಹಿಂದೂ ಗುಂಪು ರಚನೆ ಅವಶ್ಯಕತೆ ಇದೆ ಎಂದಿದ್ದಾರೆ. ಆದರೆ, ನಮ್ಮ ದೇಶದ ಬಹುಸಂಖ್ಯಾತ ಹಿಂದೂಗಳು ಸಹಿಷ್ಣುಗಳಾಗಿದ್ದಾರೆ, ಅವರು ಬ್ರಾಹ್ಮಣ್ಯಕ್ಕೆ ಮಾರಿಕೊಂಡವರಲ್ಲ. ದೊಡ್ಡ ಸಂಖ್ಯೆಯಲ್ಲಿ ಭಾರತೀಯರ ತಾಲಿಬಾನ್ ಕಟ್ಟೋದು ಸುಲಭದ ಮಾತಲ್ಲ. ಅಲ್ಲಿಯಷ್ಟು ನೇರವಾಗಿ ಹಿಂಸಾಚಾರಕ್ಕೆ ದೊಡ್ಡ ಸಂಖ್ಯೆಯಲ್ಲಿ ಇಳಿಯೋದೂ ಕಷ್ಟ. ಇವರ ತಲೆಗಳಲ್ಲಿ ತುಂಬಿ ಕುಳಿತಿರೋ ತಾಲಿಬಾನ್ ಚಿಂತನೆ ಉಂಟಲ್ಲ, ಕಣ್ಣಿಗೆ ಕಾಣದ ಮಸಲತ್ತುಗಳು ಮತ್ತು ದ್ವೇಷದ ಪರಾಕಷ್ಠೆ. ಅದು ದೈಕಿವಾಗಿನ ತಾಲಿಬಾನೀಕರಣಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಆಫ್ಘನ್ನಿನ ತಾಲಿಬಾನ್ ಹೆಚ್ಚೆಂದರೆ ಐದು ತಲೆಮಾರುಗಳನ್ನ ಬಾಧಿಸಿ ಮುಗಿದು ಹೋಗಬಹುದು. ಆದರೆ, ಮಾನಸಿಕ ತಾಲಿಬಾನಿನ ವಿಚಾರಗಳು ಸೂಪ್ತ ಮನಸ್ಸಿನಾಳಕ್ಕೆ ಒಳಹೊಕ್ಕಿ ಮೂಲೆಯಲ್ಲಿ ಅವಿತಿರುತ್ತದೆ. ಅದು ಕ್ರಮೇಣ ತಲೆಮಾರುಗಳವರೆಗೆ ಹಬ್ಬಿ ಸಮಯ ಸಂದರ್ಭದಲ್ಲಷ್ಟೆ ಕಾಣಿಸಿಕೊಳ್ತಾ ವಿಕೃತಿ ಮೆರೆಯುವ ಅಪಾಯ ಇರುವಂತದು ಎಂದು ಚೇತನಾ ತೀರ್ಥಹಳ್ಳಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಭಾರತ ಸೌಮ್ಯ ಬಂಡವಾಳವಾದದಿಂದ ಬಂಡವಾಳವಾದಿ ಪ್ಯಾಸಿಸಂ ಕಡೆಗೆ ವಾಲುತ್ತಿದೆ: ಪ್ರೊ.ಪಣಿರಾಜ್ ಕೆ.

ದೈಹಿಕ ಸಂಘಟಿತ ತಾಲಿಬಾನನ್ನು ಹೇಗೋ ಮಟ್ಟ ಹಾಕಬಹುದು, ಆದರೆ, ಮಾನಸಿಕ ತಾಲಿಬಾನನ್ನು ಮಟ್ಟ ಹಾಕೋದು ಹೇಗೆ?  ಹಾಗಾಗಿ ಹಿಂದೂ ಅನಿಸಿಕೊಂಡಿರುವ ಜೀವಪರ ಜನರೊಂದಷ್ಟು ಮಂದಿ ಸೇರಿ ಯಾಕೆ “ನಿಜವಾದ ಹಿಂದೂ ಸಮಾವೇಶ” ಮಾಡಬಾರದು?  ಎಂದು ಚೇತನಾ ತೀರ್ಥಹಳ್ಳಿ ಕರೆ ನೀಡಿದ್ದಾರೆ.

ನಿಜವಾದ ಹಿಂದುತ್ವ ಅಂದ್ರೆ ನಮ್ಮ ಜಪದಗಳು, ನೆಲಮೂಲದ ಕಾವ್ಯಗಳು, ಸ್ಥಳೀಯ ದೈವಗಳು, ಕಾರಣಿಕರು, ಸೌಹಾರ್ದಿಗಳು, ಸರಳವಾಗಿ ಮಾತಾಡುವವರು, ಪ್ರೀತಿ ಹಂಚುವವರು, ಆಧ್ಯಾತ್ಮಿಕರು, ಶ್ರೇಣಿ ಮಾಡದ ಎಲ್ಲ ಜಾತಿಗಳು, ಹೆಣ್ಣುಮಕ್ಕಳು ಮತ್ತು ತೃತೀಯ ಲಿಂಗಿಗಳಿಗೂ ಸಮಾನ ಅವಕಾಶ ಇರುವ ಚಿಂತನೆ… ಇದು ನಮಗೆ ಬೇಕಿರುವ ಹಿಂದೂ ಧರ್ಮ, ಇದು ನಿಜವಾದ ಹಿಂದೂ ಧರ್ಮ ಅಂತ ಯಾಕೆ ತೋರಿಸಬಾರದು? ಎಂದು ಪ್ರಶ್ನಿಸಿದ್ದಾರೆ.

ಭಟ್ಟರದು ಅದೇ ಹಳೆಯ ಹೊಲಸು ಚಾಳಿಯ ಮಾತುಗಳು: ಮುನೀರ್‌ ಕಾಟಿಪಳ್ಳ

ಕಲ್ಲಡ್ಕ ಪ್ರಭಾಕರ ಭಟ್ಟರು ‘ಹಿಂದು ಸಮಾಜೋತ್ಸವ’ ಸಭೆಯನ್ನು ಆಯೋಜಿಸಿರುವುದು ನೋಡಿದರೆ, ನಿರುದ್ಯೋಗದ ಭೀಕರ ಹೊಡೆತದಿಂದಾಗಿ ಬೀದಿಗೆ ಬಿದ್ದಿರುವ ಹತಾಶ ಯುವಕ, ಯುವತಿಯರ ಉದ್ಯೋಗದ ಕುರಿತು ಮಾತಾಡುತ್ತಾರೆ ಎಂದು ಕೊಂಡಿದ್ದೇವು. ಆದರೆ, “ಕನಿಷ್ಟ ಹಿಂದು ಯುವಕ ಯುವತಿಯರಿಗಾದರು ಕೆಲಸ ಕೊಡಿ” ಎಂದು ಸರಕಾರಗಳ ವಿರುದ್ದ ಮಾತನಾಡುತ್ತೇವೆಂದು ಎಂದು ಭಾವಿಸಲಾಗಿತ್ತು ಆದರೆ ಆದದ್ದೂ ಬೇರೆಯದೇʼʼ ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷರಾದ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

ತಮ್ಮ ಭಾಷಣದುದ್ದಕ್ಕೂ ಅದೇ ಮಕ್ಕಳು ಹುಟ್ಟಿಸುವುದು, ಜಾನುವಾರು ರಕ್ಷಣೆ, ಸಾಬರು, ತಾಲಿಬಾನು ಅಂತ ಮಾತಾಡಿದ್ರು, ಅವರದ್ದೇ ಜಿಲ್ಲೆಯಲ್ಲಿ ಸರಗಳ್ಳತನ, ಮನೆಗಳ್ಳತನ ಸರಣಿಯಾಗಿ ನಡೆಯುತ್ತಿರುವುದು, ಅದರಲ್ಲಿ ಈವರಗೆ ಅಂತಹ ಕೃತ್ಯಗಳ ಹಿನ್ನಲೆ ಇಲ್ಲದ ಹೊಸ ಯುವಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು, ಅವರೆಲ್ಲರೂ ಉದ್ಯೋಗ ಪಡೆಯಲು ವಿಫಲರಾಗಿರುವ ಹತಾಶ ನಿರುದ್ಯೋಗಿ ಗಳಾಗಿರುವುದು ಕಲ್ಲಡ್ಕ ಭಟ್ಟರಿಗೆ ಅರಿವಿಗೇ ಬಂದಿಲ್ಲ ಎಂಬುವುದೇ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಬ್ಯಾಕ್ ಲಾಗ್ ಹುದ್ದೆ : ಯಾರಿಗೂ ಬೇಡವಾದ ಕೂಸು

ಭಟ್ಟರೇ, ಬೇರೇನೂ ಬೇಡ ನಿಮ್ಮದೇ ದಿನ ಪತ್ರಿಕೆಗಳ ಅಪರಾಧ ಸುದ್ದಿಗಳ ಕಡೆ ಒಂದಷ್ಟು ಕಣ್ಣಾಡಿಸಿ ನೋಡಿ ಓದಿರಿ, ಪೊಲೀಸ್ ಠಾಣೆಗಳಲ್ಲಿ ವರದಿಯಾದ ಕಳ್ಳತನ ಪ್ರಕರಣ, ಆರೋಪಿಗಳ ವಿವರ ಪಡೆದುಕೊಳ್ಳಿ. ಉದ್ಯೋಗದಿಂದ ವಂಚಿತ ಹತಾಶ ನಿರುದ್ಯೋಗಿ ಯುವಜನತೆಯ ಪಾಡು ತಿಳಿಯುತ್ತದೆ ಎಂದು ಮುನೀರ್‌ ಕಾಟಿಪಳ್ಳ ಅವರು ವಿವರಿಸಿದ್ದಾರೆ.

ಆರ್ಥಿಕ ಸಂಕಷ್ಟ, ನಿರುದ್ಯೋಗದಿಂದಾಗಿ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಮಂಗಳೂರಿನ ಮಾನಸಿಕ ತಜ್ಞ ವೈದ್ಯರೇ, ಹೇಳುತ್ತಿದ್ದಾರೆ. ಸಾಧ್ಯವಾದರೆ ಅವರನ್ನೊಮ್ಮೆ ಕಂಡು ಮಾತಾಡಿಸಿಕೊಂಡು ಬನ್ನಿ‌. ಹಾಗೆಯೇ ಆತ್ಮಹತ್ಯೆ ಪ್ರಕರಣಗಳು ಕೊರೊನಾ ಸಾವಿಗಿಂತಲೂ ಹಲವು ಪಟ್ಟು ಹೆಚ್ವುತ್ತಿದೆಯಲ್ಲ? ಅದರಲ್ಲಿ ಉದ್ಯೋಗ, ವ್ಯಾಪಾರ ಕಳಕೊಂಡವರು ಎಷ್ಟು ಅಂತ ತಿಳಿದುಕೊಳ್ಳಿ ಆಗ ನಿಜವಾದ ಹಿಂದೂ ಸಮಾಜದ ಯುವಜನತೆಯ ನಿಜಸ್ವರೂಪ ತಿಳಿಸುತ್ತದೆ ಎಂದು ಮುನೀರ್‌ ಕಾಟಿಪಳ್ಳ ಹೇಳಿದರು.

ಸಾಬರನ್ನು ಬಿಡಿ, ನತದೃಷ್ಟ ಹಿಂದೂ ಯುವಕ ಯುವತಿಯರ ಉದ್ಯೋಗದ ಕುರಿತಾದರು ಮಾತಾಡಿ, ಸಾಧ್ಯವಾದರೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಮುಖಾಮುಖಿ ಭೇಟಿಗೆ ನಾನು ಸಿದ್ದ ಎಂದು ಸೂಚನೆ ನೀಡಿದರು.

 

ಮಾಹಿತಿ ಸಂಗ್ರಹ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *