ಹಿಂದೂ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಮುಖ್ಯಮಂತ್ರಿಗಳ ವಜಾಕ್ಕೆ ಸಿಪಿಐ(ಎಂ) ಒತ್ತಾಯ

ಬೆಂಗಳೂರು: ಹಿಂದೂ ಮತಾಂಧ ಶಕ್ತಿಗಳು ಅಂತರ್ಜಾತೀಯ ವಿವಾಹಿತರ ಹಾಗೂ ಅಂತರ್ಧಮೀಯ ಯುವಕ ಯುವತಿಯರು ಒಂದೆಡೆ ಸೇರುತ್ತಿರುವುದನ್ನು ವಿರೋಧಿಸಿ ಧಾಳಿ ನಡೆಸುತ್ತಿರುವುದು ಮತ್ತು ಕಗ್ಗೊಲೆಗೆ ಮುಂದಾಗುತ್ತಿರುವುದನ್ನು ರಾಜ್ಯದ ಮುಖ್ಯಮಂತ್ರಿ ಅಂತಹ ಶಕ್ತಿಗಳ ಕೆಲಸವನ್ನು ಕ್ರಿಯೆಗೆ-ಪ್ರತಿಕ್ರಿಯೆ ಮತ್ತು ಭಾವನಾತ್ಮಕ ವಿಚಾರವಾಗಿದೆಯೆಂದು ಬಹಿರಂಗವಾಗಿ ಸಮರ್ಥಿಸುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಹೇಳಿದೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂತಹ ಬಹಿರಂಗ ಹೇಳಿಕೆಗಳು ಭಾರತದ ಸಂವಿಧಾನದ ವಿರೋಧಿ ಹೇಳಿಕೆಗಳಾಗಿವೆ. ಈ ಕೂಡಲೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ರಾಜ್ಯಪಾಲರನ್ನು ಬಲವಾಗಿ ಒತ್ತಾಯಿಸಿದ್ದಾರೆ. ಇದೇ ಮುಖ್ಯಮಂತ್ರಿಗಳು ರೈತ ವಿರೋಧಿಯಾದ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರನ್ನು ನಕಲಿ ರೈತರೆಂದು ಜರೆಯುವ ಉದ್ಧಟತನವನ್ನು ಮೆರೆದಿದ್ದರು ಎಂದು ಸಹ ಹೇಳಿದ್ದಾರೆ.

ಇದನ್ನು ಓದಿ: ನೈತಿಕ ಪೊಲೀಸ್‌ಗಿರಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಸಂವಿಧಾನ ಜನತೆಗೆ ನೀಡಿದ ಪ್ರಜಾಸತ್ತಾತ್ಮಕ ಹಕ್ಕುಗಳಾದ, ಯುವಜನರು ಪರಸ್ಪರ ಒಪ್ಪಿ ಪ್ರೀತಿಸುವ ಮತ್ತು ವಿವಾಹವಾಗುವ ಹಕ್ಕು, ಮತಾಂತರದ ಹಕ್ಕು, ಆಹಾರದ ಹಕ್ಕು, ಬದುಕುವ ಹಕ್ಕುಗಳು ಮತ್ತು ದೇಶದ ಜಾತ್ಯಾತೀತ ಸ್ವರೂಪ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಕೋಮುವಾದಿಗಳ ಮತ್ತು ಜಾತಿವಾದಿಗಳ ಧಾಳಿಗಳನ್ನು ಸಮರ್ಥಿಸುವ ಇಂತಹ ಸಂಚಿನ ಹೇಳಿಕೆಗಳು ಕೋಮುವಾದಿ ಹಾಗೂ ಜಾತಿವಾದಿ ಪುಂಡರ ಪುಂಡಾಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆಯೆಂದು ಸಿಪಿಐ(ಎಂ) ಎಚ್ಚರಿಸಿದೆ.

ಹೈನುಗಾರರು, ಸಾರ್ವಜನಿಕ ಹೈನೋದ್ಯಮದ, ಅಲ್ಪಸಂಖ್ಯಾತರು ಹಾಗೂ ದಲಿತರ ಅಸಹಾರದ ಮತ್ತು ಬದುಕುವ ಹಕ್ಕಿನ ವಿರುದ್ದ, ಈಗಾಗಲೇ ಸಂವಿಧಾನ ಬಾಹಿರವಾಗಿ, ಜಾನುವಾರು ಹತ್ಯಾ ನಿಷೇಧ ಕಾಯ್ದೆ – 2020ನ್ನು ಅಂಗೀಕರಿಸಲಾಗಿದೆ. ಮತಾಂತರ ನಿಷೇದ ಕಾಯ್ದೆಗೆ ಕ್ರಮವಹಿಸಲಾಗಿದೆ. ರಾಜ್ಯದ ರೈತಾಪಿ ಜನತೆ ಹಾಗೂ ಎಲ್ಲಾ ಬಾಧಿತರು ಪ್ರಗತಿಪರ ಶಕ್ತಿಗಳು ಇವುಗಳ ವಿರುದ್ದ ಹೋರಾಟದಲ್ಲಿ ತೊಡಗಿದ್ದಾರೆ.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಇಂತಹ ಸಂವಿದಾನ ವಿರೋಧಿ ಮತ್ತು ಕೋಮು ಹಾಗೂ ಜಾತಿ ದ್ವೇಷದ ಪರವಾದ ಹೇಳಿಕೆಯಿಂದ ಉತ್ತೇಜಿತರಾದ ಹಿಂದೂ ಮತಾಂಧರು ಯುವಜನರಿಗೆ ಸ್ವರಕ್ಷಣೆಯ ಹೆಸರಿನಲ್ಲಿ ತಲವಾರುಗಳನ್ನು ಹಂಚಲು ಮುಂದಾದ ದುಷ್ಕೃತ್ಯವು ನಡೆದಿದೆ.

ಇದನ್ನು ಓದಿ: ಮತೀಯ ಗೂಂಡಾಗಿರಿ ಸಮರ್ಥನೆ : ಸಿಎಂ ಬೊಮ್ಮಾಯಿಗೆ ಲಾಯರ್ಸ್‌ ಅಸೋಸಿಯೇಷನ್‌ ನಿಂದ ನೋಟಿಸ್

ವಿಜಯದಶಮಿ ದಿನದಂದು ಕಾನೂನು  ಹಾಗು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಠಾಣೆಗಳು, ಪೊಲೀಸರು ಕೇಸರಿ ಶಾಲುಗಳನ್ನು ಸಾಮೂಹಿಕವಾಗಿ ಹೊದ್ದು ಜಿಲ್ಲೆಯ ಉನ್ನತ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಫೋಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಹಿಂದೂ ಮತಾಂಧತೆ ಪೋಲೀಸ್ ಇಲಾಖೆಯಲ್ಲಿ ನುಸುಳಿರುವುದನ್ನು ತೋರಿಸುತ್ತದೆ ಆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಇಲಾಖೆ ಅದರ ವಿರುದ್ದ ಮುಖ ಮಾಡಿರುವುದನ್ನು ತೋರುತ್ತಿದೆ. ಇದೊಂದು ಗಂಭೀರ ಅಪಾಯಕಾರಿ ಬೆಳವಣಿಗೆಯಾಗಿದೆ.

ಇಂತಹ ವಿಚಾರದಲ್ಲಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಮೌನವಾಗಿರುವುದು ತೀವ್ರ ಖಂಡನೀಯವಾಗಿದೆ. ಇದನ್ನು ಯಾರು? ಹೇಗೆ ಬೇಕಾದರೂ ಸಮರ್ಥಿಸಿಕೊಳ್ಳಬಹುದು ಆದರೆ ವಾಸ್ತವ ಮಾತ್ರ ಅದುವೇ ಆಗಿದೆ. ಈ ಎಲ್ಲ ಪ್ರಕರಣಗಳನ್ನು ಉಚ್ಚ ನ್ಯಾಯಾಲಯದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆಗೊಳಪಡಿಸಿ ಸಂವಿಧಾನ ರಕ್ಷಣೆಗೆ ಮತ್ತು ಕಾನೂನು ಸುವ್ಯವಸ್ಥೆಯ ಸಂರಕ್ಷಣೆಗೆ ಅಗತ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *