ಮಂಗಳೂರು: ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಮನೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನೊಬ್ಬನನ್ನು ಸ್ಥಳೀಯರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ನಡೆದಿದೆ.
ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಬಂಧಿತ ಆರೋಪಿ. ಈತ ಹಿಂದು ಜಾಗರಣ ವೇದಿಕೆ ಪಕ್ಷಿಕೆರೆ ಘಟಕದ ಸಕ್ರೀಯ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮೆರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ನೆರೆಮನೆಯವರು ಸುಮಂತ್ನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಠಾಣೆಯ ಮುಂದೆ ಆರ್ ಎಸ್ ಎಸ್ ನವರು ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರ್ ಎಸ್ ಎಸ್ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿದೆ.
ಈ ಮಧ್ಯೆ ಗುರುವಾರ ಆರೋಪಿಯ ಮಾವ ಠಾಣೆಗೆ ಬಂದು 50 ಸಾವಿರ ರೂ. ಮೌಲ್ಯದ ಬಾಂಡ್ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಆರೋಪಿ ಸುಮಂತ್ನನ್ನು ವಶಕ್ಕೆ ಪಡೆದುಕೊಳ್ಳುವ ಸಂದರ್ಭ ಆತ ವೀಡಿಯೊ ಚಿತ್ರೀಕರಿಸಿದ್ದ ಮೊಬೈಲ್ ಫೊನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸರ ವಿಚಾರಣೆಯ ವೇಳೆ ಮೊಬೈಲ್ ನಲ್ಲಿ ಇಂತಹ ಹಲವು ನಗ್ನ ಚಿತ್ರಗಳು ಇದ್ದವು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.