ಹಿಂಸಾತ್ಮಕ ಪ್ರಚೋದನೆಗಳಿಗೆ ಶಾಂತಿ ಸಂಯಮವೇ ಉತ್ತರ

ಎಸ್.ವೈ. ಗುರುಶಾಂತ್

ಪ್ರತಿ ದಿನವೂ ಒಂದಿಲ್ಲೊಂದು ವಿವಾದ. ವಿದ್ವೇಷ, ಆವೇಶ ಹೆಚ್ಚಿಸುವ ಸ್ಪೋಟಕ ಮಾತುಗಳು. ಒಮ್ಮೆ ಧಾರ್ಮಿಕ ಆಚರಣೆಗಳನ್ನು ಹೀಗಳೆದರೆ ಮತ್ತೊಮ್ಮೆ ಮತಧರ್ಮ ಹಾಗೂ ಅನುಯಾಯಿಗಳನ್ನು ಅವಹೇಳನ ಮಾಡಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ನ್ಯಾಯ ನಿರ್ಣಯಿಸಿ ದಂಡಿಸುವ ನಡೆಗಳು. ಪ್ರತಿಭಟಿಸಿದರೆ ಮನೆಗಳನ್ನೇ ನೆಲ ಸಮಗೊಳಿಸುವ ಕೃತ್ಯಗಳು. ಇವರ ವಿಷದ ನಾಲಿಗೆಗೆ ಉಣ್ಣುವ ಆಹಾರವೂ ತಪ್ಪಿಸಿಕೊಂಡಿಲ್ಲ. ವಿವಾದಕ್ಕೆ ಪೂಜಾ ಸ್ಥಳಗಳೂ ಹೊರತಾಗಲಿಲ್ಲ. ಇಷ್ಟಕ್ಕೆ ಕೋಮುವಾದಿ ಪಿಶಾಚಿಗಳಿಗೆ ತೃಪ್ತಿ ಇಲ್ಲ. ಇದೀಗ ಧರ್ಮ ಪ್ರವರ್ತಕ, ಪ್ರವಾದಿ ಮಹಮ್ಮದ್ ಪೈಗಂಬರ್ ರವರನ್ನೇ ಗುರಿಯಾಗಿಸಿ ನಿಂದಿಸಲಾಗಿದೆ. ಏನು ಮಾಡಿಯಾದರೂ ಜನರನ್ನು ಪ್ರಚೋದಿಸಬೇಕು. ಕೆರಳಿಸಬೇಕು. ಮೇಲಿಂದ ಮೇಲೆ ಬೀಳುವ ಪೆಟ್ಟು, ಅವಹೇಳನಗಳಿಂದ ಸಹಿಸಲು ಅಸಾಧ್ಯವೆಂದು ‘ನೀರೊಳಗಿರ್ದೂ ಬೆವರ ಬೇಕು’, ಬೀದಿಗಿಳಿಯಬೇಕು. ಏನೋ ಒಂದು ಅಚಾತುರ್ಯ ನಡೆದು ಗಲಭೆ ಸಿಡಿಯಬೇಕು. ಅವರನ್ನು ಹುಡುಕಿ, ಹುಡುಕಿ ಜೇಲಿಗಟ್ಟ ಬೇಕು. ’ನೋಡಿ ಅಪರಾಧಿಗಳೆಲ್ಲಾ ಇವರೇ. ಇವರ ಬಣ್ಣ ಎಲ್ಲಾ ಒಂದೇ. ಇದಕ್ಕೆಲ್ಲಾ ಅವರ ಧರ್ಮವೇ ಮೂಲ, ನಮ್ಮ ಧರ್ಮ ಅಪಾಯದಲ್ಲಿದೆ. ಬನ್ನಿ, ಒಂದಾಗಿ ದೇಶ ಉಳಿಸೋಣ’ ಎಂದೆಲ್ಲಾ ಪ್ರವಚನಗಳು ನೀಡಬೇಕು. ಅದನ್ನೇ ಜಗದ ಮುಂದೆ ಚಾಚಿ ಪ್ರಜಾಪ್ರಭುತ್ವ, ಮತ ನಿರಪೇಕ್ಷತೆಯ ಮೌಲ್ಯಗಳೇ ಇಷ್ಟೆಲ್ಲವಕ್ಕೂ ಕಾರಣವಾಗಿ ಇರುವುದರಿಂದ ಅಂತಹದ್ದನ್ನು ರಕ್ಷಿಸುವ ಈ ಸಂವಿಧಾನವನ್ನು ಕಿತ್ತೆಸೆದು ಹಿಂದುತ್ವ ಆಧಾರಿತ ವ್ಯವಸ್ಥೆ ಜಾರಿಯಾಗಬೇಕು.

ಎಲ್ಲಿಂದಲೋ ಆರಂಭಗೊಂಡು ಇನ್ನೆಲ್ಲಿಗೋ ಮುಟ್ಟಿಸುತ್ತಾರೆ ಕುತರ್ಕಿಗಳು. ಪಠ್ಯಗಳ ವಿಕೃತಿಯೂ ನಡೆಯಿತು. ಹಿಜಾಬ್ ನಿಂದ ಹಲಾಲ್, ಆಜಾನ್ ದಾಟಿ ಮಸೀದಿ-ದರ್ಗಾಗಳೊಳಗೆ ಶಿವಲಿಂಗದ ಹುಡುಕಾಟವೂ ಮುಗಿಯಿತು ಇಂತಹವು ಒಂದೆರಡಲ್ಲ, ಕೆ.ಎಸ್. ಈಶ್ವರಪ್ಪನವರ ಪ್ರಕಾರ ಭಾರತದಲ್ಲಿ ಬರೋಬ್ಬರಿ 36000 ಇವೆಯಂತೆ. ಅವುಗಳ ವಿಮೋಚನೆ ಆಗಬೇಕಂತೆ. ಅದರಲ್ಲಿ ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ ಹನುಮನ ಆವಾಸ ಸ್ಥಾನವಂತೆ. ಬಜರಂಗದಳದ ಕಾರ್ಯಕರ್ತರು ಪ್ರವಾಸಿಗಳಂತೆ ನುಸುಳಿ ಮಸೀದಿಯೊಳಗೆ ಕೂತು ಹನುಮಾನ್ ಚಾಲೀಸ್ ಪಠಣ ಮಾಡಿ ಅಸಹ್ಯ, ಅಸಭ್ಯತೆ ಮೆರೆದಿದ್ದಾರೆ. ಮತ್ತೇ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ತಾವು ಹಾರಿಸಬೇಕೆಂದೂ, ಗಣೇಶೋತ್ಸವವನ್ನೂ ಅಲ್ಲೇ ಮಾಡಬೇಕೆಂದೂ ವಿವಾದ ಹುಟ್ಟು ಹಾಕಿ ಗಲಾಟೆ ಎಬ್ಬಿಸಿದ್ದಾರೆ. ಇಂತಹವುಗಳಿಗೆ ಕುಮ್ಮಕ್ಕು ಕೊಡುವಂತೆ ಬಿ.ಬಿ.ಎಂ.ಪಿ ಮತ್ತು ಸರಕಾರದ ಇಲಾಖೆಗಳು ನಡೆದುಕೊಳ್ಳುತ್ತಿವೆ. ಈದ್ಗಾ ಮೈದಾನದ ವಿವಾದ ಸುಪ್ರಿಂ ಕೋರ್ಟ್ ಮೆಟ್ಟಿಲೇರಿ ಇತ್ಯರ್ಥವಾಗಿದೆ. ಅದು ವಕ್ಫ ಬೋರ್ಡ್ ಆಸ್ತಿ ಎಂದಾಗಿದೆ. ಅದರ ತೀರ್ಪು, ಕಾನೂನು ಆಧರಿಸಿ ಕ್ರಮ ವಹಿಸಿ ಎಂದು ಸಮುದಾಯದ ಮುಖಂಡರು ವಕ್ಫ್ ಬೋರ್ಡ್ ಅದ್ಯಕ್ಷರು ಹೇಳಿದರೂ ಅತ್ತ ಕಿವಿಗೊಡುವವರಿಲ್ಲ. ಸರಕಾರದ ಗೃಹ ಇಲಾಖೆಯ ಕತ್ತಿ ಅಲ್ಪಸಂಖ್ಯಾತರತ್ತಲೇ ಝಳಪಿಸುತ್ತಿದೆ. ಸಂಘಪರಿವಾರ ಸುಮ್ಮನಿದ್ದವರ ಕಾಲು ತುಳಿದು ಕೆರಳಿಸಲು ನೋಡುತ್ತಿದೆ.

ನೋಡಿ, ಪ್ರವಾದಿಗಳನ್ನು ಏನಕೇನಾ ನಿಂದಿಸಿದ ಶ್ರೀಮತಿ ನೂಪುರ್ ಶರ್ಮಾ ರ ಮೆಲೆ ಕ್ರಮವಿಲ್ಲ. ಬಂಧನವನ್ನೂ ಮಾಡಿಲ್ಲ. ಬದಲಾಗಿ ಬಿಗಿ ಭದ್ರತೆ! ಆದರೆ ಪ್ರತಿಭಟಿಸಿದವರ ಮೇಲೆ ಹಲ್ಲೆ, ಪ್ರಚೋದನೆ, ಆಸ್ತಿ ನಾಶ, ಹಲವು ಕ್ರಿಮಿನಲ್ ಕೇಸ್ ಗಳ ದಾಖಲು. ಇದರರ್ಥ ಕಾನೂನು ಮೀರಿ ಗಲಭೆ ಎಬ್ಬಿಸಿದ ವರನ್ನು ರಕ್ಷಿಸಬೇಕೆಂದರೆ ಹೇಗೆ ಅಂತಹ ಕೃತ್ಯಗಳು ಅಪರಾಧವೋ ನೂಪುರ್ ಶರ್ಮರವರ ಕೃತ್ಯವೂ ಮಹಾಪರಾಧ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರು ವಹಿಸಿದ ಘೋರ ಮೌನವು ಸಂದೇಶವನ್ನು ನೀಡುತ್ತಿದೆ? ನೂಪುರ್ ಶರ್ಮ ರವರ ಪ್ರಚೋದನಾತ್ಮಕ ಅವಹೇಳನ ಪ್ರಕರಣ ಹೊರ ಬಂದ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿ ಬಂಧಿಸಿದ್ದರೆ ಮುಂದೆ ನಡೆಯಬಹುದಾದ ಪ್ರತಿಭಟನೆಗಳನ್ನು ತಡೆಯಬಹುದಿತ್ತು. ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ತೀವ್ರತರ ಟೀಕೆಗೆ ಮತ್ತು ಒತ್ತಡಗಳಿಗೆ ಸಿಲುಕುವ ಒಂದು ಅವಮಾನಕಾರಿ ಪ್ರಸಂಗವನ್ನು ತಪ್ಪಿಸಬಹುದಿತ್ತು. ತನ್ನ ಶಾಮೀಲುತನ ಮತ್ತು ವೈಫಲ್ಯದ ಬಗ್ಗೆ ಇದರತ್ತ ಕೇಂದ್ರ ಮತ್ತು ರಾಜ್ಯದಲ್ಲಿನ ಸರಕಾರಗಳು ಚಕಾರವನ್ನೇ ಎತ್ತದಿರುವುದು ಆಶ್ಚರ್ಯ!

ಬೆಳಗಾವಿಯಲ್ಲಿ ಯಾರೋ ಕಿಡಿಗೇಡಿಗಳು ಶರ್ಮಾರ ಪ್ರತಿಕೃತಿಗೆ ನೇಣು ಹಾಕಿ ವಿಕೃತಿ ತೋರಿದರೆ ತನಿಖೆ ಆರಂಭಗೊಳ್ಳುವ ಮೊದಲೇ ಕೆಲವರನ್ನು ಅಪರಾಧಿ ಕಟೆಕಟೆಯಲ್ಲಿ ನಿಲ್ಲಿಸಿದ್ದಾಯ್ತು. ಮೇಲಾಗಿ ಗೃಹ ಸಚಿವ ಆರಗ ರವರ ಉಗ್ರ ಎಚ್ಚರಿಕೆಯ ಡ್ಯೂಟಿ!

ಇಲ್ಲಿ ಒಂದು ಮಾತನ್ನು ನೆನಪಿಡಬೇಕು. ಸಂಘಪರಿವಾರ ಮತ್ತು ಸರಕಾರ ಸಂಯೋಜಿತವಾದ ಪಾತ್ರವನ್ನು ನಿರ್ವಹಿಸುತ್ತಿವೆ ಎಂಬುದು ಎದ್ದುಕಾಣುತ್ತದೆ. ಸಂಘಪರಿವಾರ ಏನಾದರೂ ಮಾಡಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಪ್ರಚೋದಿಸಿ ಅವರು ಆಕ್ರೋಶ ಗೊಳ್ಳುವಂತೆ ಮಾಡಬೇಕೆಂದು ಸತತ ಪ್ರಯತ್ನಿಸುತ್ತದೆ. ಹೀಗೆ ಆದಲ್ಲಿ ಬಹಳ ಸುಲಭವಾಗಿ ಅವರನ್ನು ತೋರಿಸಿ ಹಿಂದುತ್ವದ ಕಡೆಗೆ ಸಾಮಾನ್ಯ ಹಿಂದುಗಳನ್ನು, ಜನಸಾಮಾನ್ಯರನ್ನು ಸೆಳೆದು ಕೋಮು ಆಧಾರದಲ್ಲಿ ದೃವೀಕರಿಸಿಕೊಳ್ಳುವ ಯೋಜನೆಯನ್ನು ಅದು ಹೊಂದಿದೆ. ಇನ್ನೊಂದು ಕಡೆ ಅಲ್ಪಸಂಖ್ಯಾತರು ಕೆರಳಿ ಕೆಂಡವಾದರೆ ಅವರನ್ನು ಜೈಲಿಗಟ್ಟಿ ದಂಡಿಸಿ ಶಾಶ್ವತ ಅಪರಾಧಿಗಳನ್ನಾಗಿ ಮಾಡಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು. ಅತ್ಯಂತ ಶಾಂತಿ, ಸಂಯಮದಿಂದ ಇದನ್ನು ಎದುರಿಸಬೇಕು. ಇದೇ ಹೊತ್ತಿನಲ್ಲಿ ಸಂಘಪರಿವಾರದ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸಬೇಕು. ಆದರೆ ಭಾರತ ದೇಶದ ಹಲವು ಕಡೆಗಳಲ್ಲಿ ಆತಂಕಿತರಾದ ಅಲ್ಪಸಂಖ್ಯಾತ ಸಮುದಾಯವನ್ನು ಪ್ರಚೋದಿಸಿ ಸಂಘ ಪರಿವಾರದ ಬಲೆಗೆ ಜನರನ್ನು ಕೆಡಹುವ ಪ್ರಯತ್ನಗಳು ನಡೆದಿವೆ. ಅಂತಹುದಕ್ಕೆ ಕರ್ನಾಟಕ ರಾಜ್ಯದ ಜನ ಕಿವಿಗೊಡಬಾರದು ಮತ್ತು ಹಿಂದಿನಂತೆ ಸಂಯಮ ದೃಢತೆಯಿಂದ ಅವನ್ನು ತಿರಸ್ಕರಿಸಿ, ಸೋಲಿಸಬೇಕು.

Donate Janashakthi Media

Leave a Reply

Your email address will not be published. Required fields are marked *