ರಾಂಪುರ: ನೆನ್ನೆಯಷ್ಟೇ ಜರುಗಿನ ಹಿಮಾಚಲ ಪ್ರದೇಶ ವಿಧಾನಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಶಿಮ್ಲಾ ಜಿಲ್ಲೆಯ ರಾಮ್‌ಪುರ ಕ್ಷೇತ್ರದ ಮತಗಟ್ಟೆಯೊಂದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಖಾಸಗಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದೆ.
ದತ್ತನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಯಲ್ಲಿ ಮತದಾನ ಮುಗಿದ ಬಳಿಕ ಖಾಸಗಿ ವಾಹನದ ಮೂಲಕ ಇವಿಎಂ ಯಂತ್ರಗಳನ್ನು ರಾಂಪುರ ಸ್ಟ್ರಾಂಗ್ ರೂಂಗೆ ತರಲಾಗುತ್ತಿತ್ತು.
ಅಷ್ಟರಲ್ಲಿ ಈ ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ರಾಷ್ಟ್ರೀಯ ಹೆದ್ದಾರಿ-5ರಲ್ಲಿ ವಾಹನ ನಿಲ್ಲಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಾಹನ ತಡೆದರು. ಈ ವೇಳೆ ರಾಂಪುರ ಬುಶಹರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಕಾಂಗ್ರೆಸ್ ಸದಸ್ಯೆ ಅಲ್ಕಾ ಲಂಬಾ ಟ್ವೀಟ್ ಮಾಡಿದಾಗ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೂರನ್ನು ಸ್ವೀಕರಿಸಿದ ರಾಂಪುರದ ಎಸ್‌ಡಿಎಂ ಮತ್ತು ಡಿಎಸ್‌ಪಿ ಅವರು, 6 ಮಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಘಟನೆ ಬಗ್ಗೆ ಕಾಂಗ್ರೆಸ್ ಸದಸ್ಯೆ ಅಲ್ಕಾ ಲಂಬಾ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು, “ರಾಂಪುರದಲ್ಲಿ ಮತ್ತೊಮ್ಮೆ ಖಾಸಗಿ ವಾಹನದಲ್ಲಿ ಇವಿಎಂ ಯಂತ್ರಗಳು ಪತ್ತೆಯಾಗಿವೆ. ಜನರು ಇವಿಎಂ ಇದ್ದ ಖಾಸಗಿ ವಾಹನವನ್ನು ಸುತ್ತುವರೆದು ಪೊಲೀಸರ ಬರುವಿಕೆಗೆ ಕಾಯುತ್ತಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಆಡಳಿತಕ್ಕೆ ದೊಡ್ಡ ಸವಾಲು” ಎಂದಿದ್ದಾರೆ.
ಇದು”ಪ್ರಜಾಪ್ರಭುತ್ವದ ಕೊಲೆ” ಎಂದು ಬಣ್ಣಿಸಿರುವ ಅವರು, ಚುನಾವಣೆ ಆಯೋಗದ ನಿಷ್ಕ್ರಿಯತೆ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. “ಈಗ ತನ್ನ ವಿಶ್ವಾಸಾರ್ಹತೆ ಮತ್ತು ಆರೋಪಿಗಳನ್ನು ಉಳಿಸಲು ಚುನಾವಣಾ ಆಯೋಗವು ಈ ಬಗ್ಗೆ ಏನಾದರೂ ವಿವರಣೆಯನ್ನು ನೀಡುತ್ತದೆಯೇ?” ಎಂದು ಟ್ವಿಟ್ಟರ್ ನಲ್ಲಿ ಕೇಳಿದ್ದಾರೆ.