ಹಿಜಾಬ್‌ ವಿವಾದ: ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿ ಕುಟುಂಬದವರ ಮೇಲೆ ಹಲ್ಲೆ

ಉಡುಪಿ: ತರಗತಿ ಸಮಯದಲ್ಲಿ ಹಿಜಾಬ್ ನಿಷೇಧಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರೆದಿದ್ದು, ಈ ನಡುವೆ ನ್ಯಾಯಾಲಯದ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೊಟೇಲಿನ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿಯ ಸಹೋದರ ಗಾಯಗೊಂಡಿದ್ದಾನೆ.

ಸೋಮವಾರ ರಾತ್ರಿ ಸುಮಾರು 9.30ರ ಸಮಯದಲ್ಲಿ ಮಲ್ಪೆಯಲ್ಲಿ ಈ ದುರ್ಘಟನೆ ನಡೆದಿದೆ. ಉಡುಪಿಯ ಮಲ್ಪೆಯಲ್ಲಿರುವ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಜ್ರಾ ಶಿಫಾ ಯುವತಿ ದ್ವಿತೀಯ ಪಿಯುಸಿ ಓದುತ್ತಿದ್ದು, ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶಿಫಾ ಅವರ ತಂದೆ ಹೈದರ್ ಅಲಿ ಮಲ್ಪೆ ಪೇಟೆಯಲ್ಲಿ ಬಿಸ್ಮಿಲ್ಲಾ ಹೋಟೆಲ್ ನಡೆಸುತ್ತಿದ್ದಾರೆ. ಈ ಹೋಟೆಲಿಗೆ ನುಗ್ಗಿದ ಸುಮಾರು 100 -150 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ. ಘಟನೆ ವೇಳೆ ಶಿಫಾ ಅವರ ಸಲಹೋದರ ಸೈಫ್ (20) ಗಾಯಗೊಂಡಿರುವುದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಆಗಮಿಸಿದ ಮಲ್ಪೆ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಜನರನ್ನು ಚದುರಿಸಿದ್ದಾರೆ.

ಇನ್ನು ಘಟನೆ ಸಂಬಂಧ ಶಿಫಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಪೊಂದು ತನ್ನ ಸಹೋದರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ನನ್ನ ಹಕ್ಕಾಗಿರುವ ಹಿಜಾಬ್ ಪರವಾಗಿ ನಾನು ನಿಂತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ನಮ್ಮ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ನಾನೇಕೆ ನನ್ನ ಹಕ್ಕನ್ನು ಕೇಳಬಾರದು? ಮುಂದಿನ ಬಲಿಪಶು ಯಾರಾಗಲಿದ್ದಾರೆ? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ನಾನು ಆಗ್ರಹಿಸುತ್ತೇನೆಂದು ಹೇಳಿದ್ದಾರೆ.

ಶಿಫಾ ಅವರ ಸಹೋದರ ಸೈಫ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನಾ ಅವರು, ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *