ಹಿಜಾಬ್‌ ಕುರಿತ ವಿವಾದ: ಹೈಕೋರ್ಟ್‌ ನ್ಯಾಯಮೂರ್ತಿ ತೀರ್ಪಿಗೆ ಕಾತುರರಾಗಿರುವ ರಾಜ್ಯ!

ಬೆಂಗಳೂರು:  ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ಪ್ರತಿಬಂಧಿಸಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಹೊರಡಿಸಿರುವ ಆದೇಶ ಸೇರಿದಂತೆ ಹಿಜಾಬ್ ಕುರಿತಾದ ಎಲ್ಲ ರಿಟ್ ಅರ್ಜಿಗಳನ್ನು‌ ವಿಚಾರಣೆಯು ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ಹಿಜಾಬ್​ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಈ ಹಿಜಾಬ್​ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಉಡುಪಿ, ಕುಂದಾಪುರ, ಭದ್ರಾವತಿ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ. ಹೀಗಿರುವಾಗಲೇ ಹಿಜಾಬ್​ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.

ಇದುವರೆಗೆ, ನಾಲ್ಕಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ಧು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸುತ್ತಿದೆ.

ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಸರ್ಕಾರದ ಆದೇಶ ಪ್ರಶ್ನಿಸಲಾದ ಅರ್ಜಿದಾರರ ಪರ ಹೈಕೋರ್ಟ್ ನ ಹಿರಿಯ ವಕೀಲ ದೇವದತ್ತ ಕಾಮತ್ ವಾದ ಮಂಡಿಸುತ್ತಿದ್ದಾರೆ.

ಊಟದ ವಿರಾಮದ ನಂತರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದ ನ್ಯಾಯಪೀಠ ಕಲಾಪವನ್ನು ಮುಂದೂಡಿದ್ದರು. ಅರ್ಜಿದಾರರ ಪರ ವಕೀಲರಾದ ರಹಮತ್ ಉಲ್ಲಾ ಕೊತ್ವಾಲ್ ಹಾಗೂ ಮೊಹಮದ್ ತಾಹಿರ್ ನ್ಯಾಯಾಲಯದಲ್ಲಿ ಹಾಜರಿದ್ದಾರೆ.

ಮತ್ತಷ್ಟು ಅರ್ಜಿಗಳ ಮಹಾಪೂರ

ಕಲಾಪ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಪರ ವಕೀಲರೊಬ್ಬರು, ಸ್ವಾಮಿ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅರ್ಜಿಗಳು ದಾಖಲಾಗುತ್ತಿವೆ. ಆದ್ದರಿಂದ, ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, “ಇದು ಕೆ.ಆರ್.ಮಾರ್ಕೆಟ್ ಅಲ್ಲ. ಹೈಕೋರ್ಟ್. ಅರ್ಜಿಗಳ ಸಂಖ್ಯೆ ಎಷ್ಟೇ ಇದ್ದರೂ ತೀರ್ಪು ಎಲ್ಲವಕ್ಕೂ ಅನ್ವಯವಾಗುತ್ತದೆ ಅಲ್ಲವೇ” ಎಂದು ಪ್ರಶ್ನಿಸಿ ಶೀಘ್ರವೇ ವಿಚಾರಣೆಯನ್ನು ಮುಗಿಸೋಣ ಎಂದು ಮೌಖಿಕ ತಿಳಿಸಿದರು.

ನ್ಯಾಯಮೂರ್ತಿಗಳಿಗೆ ವಾಟ್ಸಪ್‌ ಸಂದೇಶ

ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿಗೆ ವಾಟ್ಸಪ್ ನಲ್ಲಿ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆಯಂತೆ. ಇಂದು ವಿಚಾರಣೆ ವೇಳೆ ಸ್ವತಃ ಈ ವಿಷಯವನ್ನು ತಿಳಿಸಿದ ನ್ಯಾಯಮೂರ್ತಿ, ಎಷ್ಟು ಸಂದೇಶಗಳು ಬರುತ್ತಿವೆ ಎಂದರೆ, ಫೋನ್ ಬ್ಲಾಸ್ಟ್ ಆಗೋದು ಬಾಕಿ ಅಷ್ಟೇ ಎಂದರು. ಬೆಳಿಗ್ಗೆ ಫೋನ್ ಆನ್ ಮಾಡುತ್ತಿದ್ದಂತೆಯೇ ಅನಾಮಧೇಯ ವ್ಯಕ್ತಿಗಳಿಂದ ನೂರಾರು ಸಂದೇಶಗಳು ಹಿಜಾಬ್ ಕುರಿತು ಬರುತ್ತಿವೆ, ಯಾವುದನ್ನು ನೋಡುವುದು ಯಾವುದನ್ನು ಬಿಡುವುದು, ಇಂತಹದು ನಡೆಯಬಾರದು, ಇದು ಸರಿಯಲ್ಲ ಎಂದು ಹೇಳಿದರು.

ಆಗ ಅರ್ಜಿದಾರರ ಪರ ವಕೀಲರು ಮತ್ತು ಎಜಿ ಇಂತಹ ನಡೆ ಸರಿಯಲ್ಲ ಎಂದು ಹೇಳಿರಲ್ಲದೆ, ನಿಮ್ಮ ಬಗ್ಗೆ ವಿಶ್ವಾಸವಿದೆ ಮೈ ಲಾರ್ಡ್, ನೀವು ವಿಚಾರಣೆ ಮುಂದುವರಿಸಿ ಎಂದು ಕೋರಿದರು.

ರಾಜ್ಯ ಹೊತ್ತಿ ಉರಿಯುತ್ತಿದೆ

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಇತರೆ ಎಲ್ಲ ಪ್ರಕರಣಗಳಿಗೆ ನ್ಯಾಯಪೀಠ ಮುದ್ದತ್ತು ನೀಡಿ ವಿಚಾರಣೆ ಮುಂದೂಡಿತು.

ಕೆಲವು ಪ್ರಕರಣಗಳ ಪರ ವಕೀಲರು ತಮ್ಮ ಅರ್ಜಿಗಳ ತುರ್ತು ವಿಚಾರಣೆ ಅಗತ್ಯವಿದೆ ಎಂಬ ಮನವಿಗೆ ನ್ಯಾಯಪೀಠ, ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಮುಗ್ಧ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಬಹಳಷ್ಟು ಕಡೆ ಅಡಚಣೆಯಾಗಿದೆ. ಅವರೆಲ್ಲಾ ರಸ್ತೆಗೆ ಇಳಿದಿದ್ದಾರೆ. ಇದ್ಯಾವುದೂ ಸಂತೋಷದ ವಿಷಯವಲ್ಲ.  ಹಾಗಾಗಿ ಹಿಜಾಬ್ ಪ್ರಕರಣಕ್ಕೆ ಅದ್ಯತೆ ನೀಡಲಾಗುವುದು ಎಂದರು.

ಸಂಸ್ಕೃತಕ್ಕಿಂತ ಸುಂದರ ಕನ್ನಡ

ಸರ್ಕಾರದ ಸುತ್ತೋಲೆ ಆಕ್ಷೇಪಾರ್ಹವಾಗಿದೆ ಎಂಬ ಮನವಿಯನ್ನು ದೇವದತ್ತ ಕಾಮತ್ ನ್ಯಾಯಪೀಠಕ್ಕೆ ಅರುಹಿದರು.

ಆಗ ನ್ಯಾಯಪೀಠವು, “ಸರಿ, ಸರ್ಕಾರದ ಆದೇಶವನ್ನು ಎಲ್ಲ ವಕೀಲರು ಮತ್ತು ಕಕ್ಷಿದಾರರಿಗೆ ಕೇಳುವಂತೆ ಗಟ್ಟಿಯಾಗಿ ಓದಿ ಎಂದು ನಿರ್ದೇಶಿಸಿತು.

ಆಗ ದೇವದತ್ತ ಕಾಮತ್, “ಸ್ವಾಮಿ, ನನಗೆ ಕನ್ನಡ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ. ಕ್ಷಮಿಸಬೇಕು” ಎಂದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಕಾಮತ್ ನೀವು ಕನ್ನಡಿಗರು. ನಿಮಗೆ ಗೊತ್ತೇ, ಸಂಸ್ಕೃತಕ್ಕಿಂತಲೂ ಕನ್ನಡ ಅತ್ಯಂತ ಸುಂದರವಾದದ್ದು ಈ ಮಾತನ್ನು ಡಿ.ವಿ. ಗುಂಡಪ್ಪನವರು ತಮ್ಮ, “ಸಾಹಿತ್ಯ ಮತ್ತು ಜೀವನ ಸೌಂದರ್ಯ”ದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗಮನ ಸೆಳೆದರು.

ಕುರಾನ್ ತರಿಸಿದ ನ್ಯಾಯಪೀಠ

ದೇವದತ್ತ ಕಾಮತ್ ವಿಚಾರಣೆ ಆರಂಭಿಸಿ ವಾದದ ಮಧ್ಯೆ ಕುರಾನ್ ಸಾಲುಗಳನ್ನು ಉಲ್ಲೇಖಿಸಿದರು.‌ ಕೂಡಲೇ ನ್ಯಾಯಪೀಠ ಕೋರ್ಟ್ ಅಧಿಕಾರಿಗೆ ಹೈಕೋರ್ಟ್ ಗ್ರಂಥಾಲಯದಲ್ಲಿರುವ ಕುರಾನ್ ಪ್ರತಿಯನ್ನು ತರಿಸುವಂತೆ ಅದೇಶಿಸಿತು. ಅದಾಗಲೇ ಸಿದ್ಧವಾಗಿರಿಸಿದ್ದ ಪ್ರತಿಯನ್ನು ಕೋರ್ಟ್ ಅಧಿಕಾರಿ ರಾಘವೇಂದ್ರ ನ್ಯಾಯಪೀಠಕ್ಕೆ ಪ್ರತಿಯನ್ನು ನೀಡಿದರು.

ಪ್ರತಿಯನ್ನು ಹಿಂದುಮುಂದು ಮಾಡಿ ಪುಟ ತಿರುಗಿಸಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ದೇವದತ್ತ ಕಾಮತ್, ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿ, ಈ ಪ್ರತಿಯು ಸರ್ವಸಮ್ಮತ ಮತ್ತು ಅಧಿಕೃತ ಎಂದು ನ್ಯಾಯಪೀಠ ಒಪ್ಪಬಹುದೇ ಎಂದು ಕೇಳಿತು. ಇದಕ್ಕೆ ಇಬ್ಬರೂ ಸಮ್ಮತಿ ನೀಡಿದ ನಂತರ ಕುರಾನ್ ಭಾಗಗಳ ವಿಶ್ಲೇಷಣೆಗೆ ನ್ಯಾಯಮೂರ್ತಿ ಅವಕಾಶ ನೀಡಿದರು.

ದೇವಾಲಯ, ಚರ್ಚ್, ಮಸೀದಿಗೆ ಹಂದಿ ಕೊಂಡೊಯ್ದರೆ ಸಮಸ್ಯೆ

ಹಿಜಾಬ್ ಕೂಡಾ ಅತ್ಯಗತ್ಯ ಧಾರ್ಮಿಕ ಆಚರಣೆ. ಸಾರ್ವಜನಿಕ ಸುವ್ಯವಸ್ಥೆಯ ನೆಪದಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಹಿಜಾಬ್ ಧರಿಸಿ ಹೋದರೆ ಯಾರಿಗೂ ತೊಂದರೆ ಇಲ್ಲ. ಹಂದಿಮರಿಯೊಂದಿಗೆ ಮಾರುಕಟ್ಟೆಗೆ ಹೋದರೆ ಸಮಸ್ಯೆ ಇಲ್ಲ. ಹೆಚ್ಚೆಂದರೆ ಕೆಲವರು ನಗಬಹುದು. ಆದರೆ ದೇವಾಲಯ, ಚರ್ಚ್, ಮಸೀದಿಗೆ ಕೊಂಡೊಯ್ದರೆ ಸಮಸ್ಯೆ ಎಂದು ಲಘುದಾಟಿಯಲ್ಲಿ ಹೈಕೋರ್ಟ್​ ನ್ಯಾ.ಕೃಷ್ಣ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ

ಹಿಜಾಬ್ ವಿವಾದ ಸಂಬಂಧ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆಯಡಿ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧ ಯಾವುದೇ ನಿಯಮ ಮಾಡಿಲ್ಲ. ಆದರೂ ತರಗತಿಗಳಿಗೆ ನಿರ್ಬಂಧಿಸಿರುವುದು ಅರ್ಜಿದಾರರ ಶಿಕ್ಷಣದ ಹಕ್ಕು ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಿಜಾಬ್ ಧರಿಸಲು ಯಾವುದೇ ನಿರ್ಬಂಧ ವಿಧಿಸದಂತೆ ಭಂಡಾರ್ಕರ್ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶಿಸಲು ಮಂಗಳೂರು ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು ಎಂದು ಕೋರಿದ್ದಾರೆ.

ಬಲವಂತವಾಗಿ ತರಗತಿಯಿಂದ ದೂರ ಉಳಿಯುವಂತೆ ಮಾಡಿರುವ ದಿನಗಳಿಗೆ ಅಥವಾ ಅರ್ಜಿ ವಿಲೇವಾರಿಯಾಗುವವರೆಗೆ ಹಾಜರಾತಿ ನೀಡಲು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶಿಸುವಂತೆ ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಕೇವಲ ಸೀರೆ ಉಡಬಹುದೇ ಎಂಬ ಉಡುಪಿನ ವಿವಾದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್​ನಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಧಾರ್ಮಿಕ ವಿಚಾರದ ಬಗ್ಗೆ ಯಾವುದೇ ವಿಶ್ಲೇಷಣೆ ಆಗಿಲ್ಲ. ಹೀಗಾಗಿ ಸರ್ಕಾರದ ಸಮವಸ್ತ್ರ ಆದೇಶ ಸಮರ್ಪಕವಾಗಿಲ್ಲ ಎಂದು ವಾದ ಮಂಡಿಸಿದ್ದಾರೆ.

ಬಾಂಬೆಯ ಫಾತಿಮಾ ಹುಸೇನ್ ಕೇಸ್ ಉಲ್ಲೇಖ

ಬಾಂಬೆಯ ಫಾತಿಮಾ ಹುಸೇನ್ ಕೇಸ್ ಉಲ್ಲೇಖ ಮಾಡಿದ ವಕೀಲ ದೇವದತ್ ಕಾಮತ್, ಬಾಲಕಿಯರೇ ಓದುವ ಶಾಲೆಗೆ ಹಿಜಾಬ್ ನಿರ್ಬಂಧಿಸಲಾಗಿತ್ತು. ಇದನ್ನು ಫಾತಿಮಾ ಹುಸೇನ್ ಸೈಯದ್ ಪ್ರಶ್ನಿಸಿದ್ದರು. ಬಾಲಕಿಯರೇ ಇರುವ ಶಾಲೆಗೆ ಹಿಜಾಬ್ ಅಗತ್ಯವಿಲ್ಲ ಎಂದಿತ್ತು. ಆದರೆ ಕರ್ನಾಟಕದ ಆದೇಶ ಇದಕ್ಕೆ ವಿರುದ್ಧವಾಗಿದೆ. ಎಲ್ಲಾ ಶಾಲೆಗಳಲ್ಲೂ ಹಿಜಾಬ್ ನಿರ್ಬಂಧಿಸಲಾಗಿದೆ ಎಂದು ವಾದ ಮಂಡನೆ ಮಾಡಿದ್ದಾರೆ.

ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹಕ್ಕಿದೆ

ಕೇರಳ ಹೈಕೋರ್ಟ್​ನ ಮತ್ತೊಂದು ತೀರ್ಪಿನ ಉಲ್ಲೇಖ ಮಾಡಲಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹಿಜಾಬ್ ನಿರ್ಬಂಧಿಸಿತ್ತು. ಹಿಜಾಬ್ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹಕ್ಕಿದೆ. ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಅನುಕೂಲಕರವಾಗಿಲ್ಲ. ಸರ್ಕಾರ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ವ್ಯತ್ಯಾಸವಿದೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮುಂದುವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *