ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ಕುರಿತು ಇಂದು ಸುದೀರ್ಘ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟಿನ ತ್ರಿಸದಸ್ಯ ವಿಸ್ತ್ರತ ಪೀಠ ವಿಚಾರಣೆಯನ್ನು ನಾಳೆ(ಫೆ.15) ಮಧಾಹ್ನ 2.30ಕ್ಕೆ ಮುಂದೂಡಿದೆ.
ಹೈಕೋರ್ಟ್‌ನಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಆರಂಭವಾದ ಹಿಜಾಬ್ ಅರ್ಜಿ ವಿಚಾರಣೆಯಲ್ಲಿ ಅನೇಕ ಸಾಂವಿಧಾನಿಕ ಅಂಶಗಳಿವೆ ಎಂದಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಧ್ಯಂತರ ಆದೇಶವನ್ನು ಪಾಲಿಸಬೇಕು ಎಂದು ತಿಳಿಸಿದೆ.
ಆರ್ಟಿಕಲ್ 25 ಪ್ರಕಾರ ಶಿರವಸ್ತ್ರ ಧರಿಸುವುದು ತಪ್ಪಲ್ಲ ಎಂದು ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಉಡುಪಿನ ಬಣ್ಣ ಹೋಲುವ ಹಿಜಾಬ್ ಧರಿಸಲು ಅವಕಾಶವಿದೆ. ಕಾಲೇಜ್ ಅಭಿವೃದ್ಧಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ, ಕೇಂದ್ರೀಯ ವಿವಿಗಳಲ್ಲಿ ಈಗಲೂ ಹಿಜಾಬ್‌ಗೆ ಅವಕಾಶವಿದೆ ಎಂದು ಹಲವು ವಿಚಾರಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಕಾಲೇಜಿಗೆ ದಾಖಲಾದಾಗಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಸಮವಸ್ತ್ರ, ಹಿಜಾಬ್ ಧರಿಸುವ ಬಗ್ಗೆ ಸರ್ಕಾರದ ಆದೇಶಗಳು, ಶಾಸಕರ ಆದೇಶಗಳು, ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ ಎಂಬ ಬಗ್ಗೆ ಇಂದು ವಾದ ಮಾಡಲಾಗಿದೆ. ಶಾಸಕರಿಗೇ ಸಮವಸ್ತ್ರ ಅಧಿಕಾರ ನೀಡಿದ್ದು ಸರಿಯಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿಗಳ ಸಾಲು ಸಾಲು ಪ್ರಶ್ನೆಗಳಿಗೆ ಹೈಕೋರ್ಟ್ಗಳ ತೀರ್ಪು ಉಲ್ಲೇಖಿಸಿದ ದೇವದತ್ ಕಾಮತ್, ಮೆಡಿಕಲ್ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿನಿ ತೆರಳುತ್ತಿದ್ದರು. ಹಿಜಾಬ್ ಧರಿಸಲು ಅನುಮತಿ ನೀಡಿರಲಿಲ್ಲ. ಆಗ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಗ ತೀರ್ಪು ನೀಡಿದೆ. ಅತ್ಯಗತ್ಯವಾದ ಧಾರ್ಮಿಕ ಆಚರಣೆಗಳಿಗೂ ಮಾನದಂಡಗಳಿವೆ. ಷರಿಯಾ ಕಾನೂನಿನ ಬಗ್ಗೆಯೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ತೀರ್ಪಿನಲ್ಲಿರುವ ಹದೀತ್, ಖುರಾನ್ ಉಲ್ಲೇಖವನ್ನು ವಕೀಲರು ಓದಿದರು.
ಪುಟ 30ರಲ್ಲಿರುವ ಪ್ಯಾರಾ 20ರಲ್ಲಿ ಧಾರ್ಮಿಕ ಗ್ರಂಥ ಉಲ್ಲೇಖಿಸಲಾಗಿದೆ ಎಂದು ದೇವದತ್ ಕಾಮತ್ ವಾದ ಮಂಡಿಸಿದರು.
ಸಂವಿಧಾನದ 30 ನೇ ವಿಧಿಯಡಿ ಹೆಚ್ಚಿನ ಹಕ್ಕಿದೆ. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಸಂವಿಧಾನದತ್ತ ಹಕ್ಕಿದೆ. ಆದರೆ ಇದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲ್ಲ. ಹಿಜಾಬ್ ಧರಿಸಿ ಬರಬೇಕೇ ಬೇಡವೆ ಎಂದು ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು ಎಂದು ದೇವದತ್ ಕಾಮತ್ ಹೇಳಿದ್ದಾರೆ.
ಸರ್ಕಾರದ ಆದೇಶ ಬರೆದವರು ಸಂವಿಧಾನದ 25 ನೇ ವಿಧಿ ಓದಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಶಾಸಕ ನೇತೃತ್ವದ ಸಮಿತಿಗೆ ನೀಡಿದೆ. ಸಂವಿಧಾನ ಸರ್ಕಾರಕ್ಕೆ ನೀಡಿರುವ ಅಧಿಕಾರವನ್ನು ಸಮಿತಿ ನೀಡುವಂತಿಲ್ಲ ಎಂದು ಕಾಲೇಜು ಅಭಿವೃದ್ದಿ ಸಮಿತಿಯ ಅಧಿಕಾರವ್ಯಾಪ್ತಿಯನ್ನು ದೇವದತ್ ಪ್ರಶ್ನಿಸಿದ್ದಾರೆ.
25ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ, ಎಲ್ಲಾ ನಾಗರಿಕರಿಗೆ ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಪ್ರತಿ ಧಾರ್ಮಿಕ ಪಂಗಡವು ನೈತಿಕತೆ, ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟು ಹಕ್ಕುಗಳನ್ನು ಹೊಂದಿರುವ ಬಗೆಗಾಗಿದೆ. ಮಾತ್ರವಲ್ಲದೆ ಇಸ್ಲಾಂ ಶರಿಯಾ ಕಾನೂನುಗಳ ಡ್ರೆಸ್ ಕೋಡ್ ಕುರಿತು ಉಲ್ಲೇಖ ಮಾಡಲಾಗಿದೆ. ಈ ಹಿಂದೆ ವಿಚಾರಣೆಗೊಳಗಾದ ಹಲವು ಪ್ರಕರಣಗಳ ತೀರ್ಪಿನ ಬಗ್ಗೆ ಪ್ರಸ್ತಾವಿಸಲಾಗಿದೆ.
ಮಾಧ್ಯಮಗಳಿಗೆ ಸಲಹೆ
ನಾವು ಮಾಧ್ಯಮಗಳಿಗೆ ವಿನಂತಿಯನ್ನು ಮಾಡುತ್ತೇವೆ. ನಾವು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ನೀವು ನಾಲ್ಕನೆಯ ಸ್ತಂಭ. ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತರಲು ಪ್ರಯತ್ನ ಮಾಡೋಣ. ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಎಲ್ಲಾ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಬಹುದು
ಅರ್ಜಿದಾರರ ಪರವಾಗಿ ನಮ್ಮ ವಾದವೂ ಇದೆ ಎಂದು ಕೇರಳದ ಹಿರಿಯ ವಕೀಲ ಕಾಳೀಶ್ವರಮ್ ರಾಜ್ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾಪ ವರದಿಯಾಗುತ್ತಿದೆ. ಇದರಿಂದ ಬೇರೆ ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಸಾಧ್ಯತೆ ಇದೆ ಎನ್ನಲಾಗಿದೆ. ಅರ್ಜಿದಾರರ ಪರ ರವಿವರ್ಮಕುಮಾರ್ ವಾದ ಮಂಡಿಸಿದ್ದಾರೆ. ಎಲ್ಲ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ. ಹಲವು ವಕೀಲರಿಂದ ವಾದಿಸಲು ಹಕ್ಕುಮಂಡನೆ ಮಾಡಲಾಗಿದೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಂತ ಆರೋಪಿಸಿ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪ್ರಾರಂಭದಲ್ಲಿ ಹೈಕೋರ್ಟ್‌ನ ಏಕಸದ್ಯಸ ಪೀಠ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ತ್ರಿಸದಸ್ಯ ಪೀಠಕ್ಕೆ ವಿಚಾರಣೆಯನ್ನು ವರ್ಗಾವಣೆ ಮಾಡಿದ್ದರು.
ಇನ್ನಷ್ಟು ಸಾಂವಿಧಾನಿಕ ಅಂಶಗಳ ಅಧ್ಯಯನ ಇರುವ ಕಾರಣ ನಾಳೆಗೆ ವಿಚಾರಣೆಯನ್ನು ಮುಂದೂಡಲಾಯಿತು.