ಬೆಂಗಳೂರು: ಉಡುಪಿಯ ಕಾಲೇಜೊಂದರಲ್ಲಿ ಆರಂಭವಾಗಿ ಇಡೀ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಮುದಾಯಗಳಲ್ಲಿ ಕೋಮುವಿಭಜನೆ ಉಂಟು ಮಾಡಿರುವ ಹಿಜಾಬ್-ಕೇಸರಿ ಶಾಲು ಅನಗತ್ಯ ವಿವಾದವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಅನಗತ್ಯ ವಿವಾದವನ್ನು ಕೂಡಲೇ ನಿಲ್ಲಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಮಧ್ಯಪ್ರವೇಶಿಸಬೇಕೆಂದು ಪಕ್ಷವು ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ʻʻಇಡೀ ವಿವಾದಕ್ಕೆ ಮತ್ತು ರಾಜ್ಯದ ಈ ದುಸ್ಥಿತಿಗೆ ಸರಕಾರ ಮತ್ತು ಕೋಮುವಾದಿ ಸಂಘಟನೆಗಳು ಕಾರಣಗಳಾಗಿವೆ. ರಾಜ್ಯ ಸರ್ಕಾರವು ಇವುಗಳನ್ನು ಪೋಷಿಸುತ್ತಿರುವುದರಿಂದ ವಿದ್ಯಾರ್ಥಿಗಳ ನಡುವೆ ಉದ್ದೇಶಪೂರ್ವಕ ವಿಭಜನೆ ಸೃಷ್ಟಿಸಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.
ಕೆಲವು ವಿದ್ಯಾರ್ಥಿನಿಯರು ಹಿಜಾಬ್(ತಲೆವಸ್ತ್ರ) ಧರಿಸುವುದು ಹಲವಾರು ವರ್ಷಗಳಿಂದ ಸಮವಸ್ತ್ರದ ಭಾಗವಾಗಿಯೇ ಬಂದಿದೆ. ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೇ ಹಿಜಾಬ್(ತಲೆವಸ್ತ್ರ) ಧರಿಸುವ ಪರಂಪರೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಸಮವಸ್ತ್ರದ ಬಣ್ಣಕ್ಕೆ ಒಪ್ಪುವ ತಲೆವಸ್ತ್ರವನ್ನು ನಿಗದಿಪಡಿಸಿರುವುದೂ ಇದೆ. ಹೀಗಾಗಿ ಸಾಮಾನ್ಯ ಸಮವಸ್ತ್ರ ಸಂಹಿತೆಯನ್ನು ಇದು ಉಲ್ಲಂಘಿಸಿದಂತಾಗುವುದಿಲ್ಲ.
ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನಿರಾಕರಿಸುವ ಮತ್ತು ವಿದ್ಯಾರ್ಥಿ ಸಮುದಾಯವನ್ನು ಕೋಮುವಾದಿ ನೆಲೆಯಲ್ಲಿ ವಿಭಜಿಸುವ ದುರುದ್ದೇಶದಿಂದ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ತಲೆವಸ್ತ್ರಕ್ಕೆ ವಿರುದ್ಧವಾಗಿ ಕೇಸರಿ ಶಾಲನ್ನು ಧರಿಸುವಂತೆ ಹಿಂದೂ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಕೆಲಸ ಕೆಲವು ಹಿಂದುತ್ವ ಕೋಮುವಾದಿ ಸಂಘಟನೆಗಳು ಮಾಡುತ್ತಿವೆ.
ಇದೇ ಸಂದರ್ಭದಲ್ಲಿ, ಮುಸ್ಲಿಂ ಅಲ್ಪಸಂಖ್ಯಾತರಲ್ಲಿ, ಹಿಂದುತ್ವ ಕೋಮುವಾದಿಗಳು ಮತ್ತು ರಾಜ್ಯದ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಆತಂಕದ ಪರಿಸ್ಥಿತಿಯನ್ನು ಬಳಸಿಕೊಂಡು ಮುಸ್ಲಿಂ ವಿದ್ಯಾರ್ಥಿಗಳನ್ನು ಮತ್ತು ಮುಸ್ಲಿಂ ಜನತೆಯನ್ನು ಕೋಮುವಾದಿ ನೆಲೆಯಲ್ಲಿ ಕ್ರೋಢೀಕರಿಸಲು ಕೆಲವು ಮುಸ್ಲಿಂ ಮತಾಂಧ ಸಂಘಟನೆಗಳು ಪ್ರಯತ್ನಿಸುತ್ತಿವೆ.
ಬಿಜೆಪಿ ರಾಜ್ಯ ಸರ್ಕಾರವೇ ಸಂವಿಧಾನ ವಿರೋಧಿಯಾದ ಮತಾಂಧತೆಗೆ ಕುಮ್ಮಕ್ಕು ನೀಡುವ ಕಾಯ್ದೆಗಳಿಗೆ ಕ್ರಮವಹಿಸುವ ಮೂಲಕ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮಾತ್ರವಲ್ಲಾ, ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಕೆಲವು ಸಚಿವರು ಮತ್ತು ಶಾಸಕರು ಸೌಹಾರ್ಧತೆಗೆ ಭಂಗ ತರುವಂತಹ ಖಂಡನಾರ್ಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಎಲ್ಲಾ ಪ್ರಯತ್ನಗಳನ್ನು ಕೂಡಲೇ ತಡೆಯಬೇಕು.
ಸಾಮಾನ್ಯವಾಗಿ ದುರ್ಬಲ ವರ್ಗದ ಹೆಣ್ಣು ಮಕ್ಕಳು, ಅದರಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ಹೊಂದುವುದೇ ಕಷ್ಟಕರವಾಗಿರುವಾಗ, ಕೆಲವು ಚೌಕಟ್ಟುಗಳಿಗೆ ಒಳಪಟ್ಟು ಶಾಲಾ ಕಾಲೇಜಿಗೆ ಬರುತ್ತಾರೆ. ಅವರ ಶಿಕ್ಷಣಾಸಕ್ತಿಯನ್ನು ಬೆಂಬಲಿಸುವ ಮನೋಭಾವವನ್ನು ಎಲ್ಲಾ ವಿದ್ಯಾರ್ಥಿಗಳಲ್ಲೂ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ಹಿಜಾಬ್ ಪ್ರಶ್ನೆಯನ್ನು ಕೋಮು ಪ್ರಶ್ನೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳನ್ನು ಸೋಲಿಸಬೇಕು.
ʻಭೇಟಿ ಬಚಾವ್ ಭೇಟಿ ಪಡಾವ್ʼ ಘೋಷಣೆ ನೀಡುವ ಬಿಜೆಪಿ ಸರ್ಕಾರ, ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕು ಮಾಡುವ ಇಂತಹ ಸಂಚುಗಳನ್ನು ನಿಲ್ಲಿಸಬೇಕು.
ಕೇಂದ್ರ-ರಾಜ್ಯ ಸರ್ಕಾರಗಳ ನೀತಿಗಳು ಜನತೆಯಲ್ಲಿ ತೀವ್ರವಾದ ಅತೃಪ್ತಿಯನ್ನು ಸೃಷ್ಟಿಸುತ್ತಿವೆ. ಲೂಟಿಕೋರ ಕಾರ್ಪೊರೇಟ್ ಪರವಾದ ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್ ಹಾಗೂ ರೈತ ಮತ್ತು ಕೃಷಿ ವಿರೋಧಿ ಕಾಯ್ದೆಗಳು, ಕಾರ್ಮಿಕ ವಿರೋಧಿ ಸಂಹಿತೆಗಳು, ದಲಿತರು, ದುರ್ಬಲರು ಮತ್ತು ಜನಸಂಸ್ಕೃತಿಯ ವಿರೋಧಿಯಾದ ನೂತನ ಶಿಕ್ಷಣ ನೀತಿಯ ಜಾರಿ, ಮತಾಂಧ ಶಕ್ತಿಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಜನರ ಭೂ ಸಂಪನ್ಮೂಲಗಳ ವರ್ಗಾವಣೆ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ನಾರಾಯಣ ಗುರುಗಳ ಸ್ತಬ್ದಚಿತ್ರ ನಿರಾಕರಣೆ, ಮುಂತಾದ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು, ರಾಜ್ಯದ ಜನತೆಯ ಬೇರೆಡೆ ಸೆಳೆಯುವ ತಂತ್ರದ ಮುಂದುವರಿಕೆಯ ಭಾಗವಾಗಿ ಮುಂಬರುವ ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು, ಹಿಜಾಬ್-ಕೇಸರಿ ಶಾಲು ವಿವಾದವನ್ನು ಅನಗತ್ಯವಾಗಿ ಸೃಷ್ಟಿಸಲಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ವಿಭಜನಕಾರಿ ಕೋಮುವಾದಿ ಆಡಳಿತದಿಂದಾಗಿ ರಾಜ್ಯದಲ್ಲಿ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಕೋಮುವಾದಿ ಸಂಘಟನೆಗಳು ವಿದ್ಯಾರ್ಥಿಗಳನ್ನು ಹಿಂಸಾಚಾರದಲ್ಲಿ ತೊಡಗಿಸಿ, ಅವರ ಶೈಕ್ಷಣಿಕ ಭವಿಷ್ಯವನ್ನು ಮುಂದಿನ ಜೀವನವನ್ನು ವಿನಾಶದತ್ತ ನೂಕುತ್ತಿವೆ. ಮಾತ್ರವಲ್ಲಾ ಕಾನೂನು ಸುವ್ಯವಸ್ಥೆಯನ್ನು ಹಾಳು ಗೆಡವಲಾಗುತ್ತಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ತನ್ನ ಕೋಮುವಾದಿ ಮತ್ತು ವಿಭಜನಕಾರಿ ನೀತಿಯನ್ನು ಕೈಬಿಟ್ಟು, ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ರಾಜ್ಯದ ಜನತೆಯ ನಡುವೆ ಸಾಮರಸ್ಯವನ್ನು ಮೂಡಿಸಲು ಮುಂದಾಗಬೇಕು. ವಿದ್ಯಾರ್ಥಿಗಳನ್ನು ಹಿಂಸಾಚಾರಕ್ಕೆ ನೂಕಲು ನೇರವಾಗಿ ಕುಮ್ಮಕ್ಕು ನೀಡಿರುವ ಬಜರಂಗದಳ ಮುಂತಾದ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ರಕ್ಷಣೆ ನೀಡದೆ ದಾಳಿಯನ್ನು ಬೆಂಬಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ವಿದ್ಯಾರ್ಥಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸಬೇಕು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಅದರ ನೇರ ಹೊಣೆಗಾರಿಕೆ ರಾಜ್ಯ ಗೃಹ ಸಚಿವರದಾಗಿದ್ದು ಅವರು ಕೂಡಲೆ ರಾಜೀನಾಮೆ ನೀಡಬೇಕೆಂದು ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆಗ್ರಹಿಸಿದೆ.
ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ನಾಗರಿಕರು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕೋಮುವಾದಿ ಶಕ್ತಿಗಳನ್ನು ಜನಮನದಿಂದ ದೂರ ತಳ್ಳಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮನವಿ ಮಾಡಿದೆ.
ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಮತ್ತು ಸೌಹಾರ್ಧತೆ ಸಂರಕ್ಷಣೆಗಾಗಿ ಪ್ರತಿಭಟನೆಗೆ ಕರೆ
ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲುಗಳ ಅನಗತ್ಯ ವಿವಾದದ ಮೂಲಕ ಸೌಹಾರ್ಧತೆಯನ್ನು ಕದಡುವುದನ್ನು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ಹೊಣೆಗೇಡಿತನ ಮತ್ತು ವಿಭಜನಕಾರಿ ಕೋಮುವಾದಿ ನೀತಿಗಳನ್ನು ತೀವ್ರವಾಗಿ ಪ್ರತಿರೋಧಿಸಿ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮತ್ತು ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಮತ್ತು ಜನ ಸಮುದಾಯಗಳಲ್ಲಿ ಸೌಹಾರ್ಧತೆ ಸಂರಕ್ಷಣೆಗಾಗಿ ಅಗತ್ಯ ಕ್ರಮವಹಿಸಲು ಒತ್ತಾಯಿಸಿ ರಾಜ್ಯದಾದ್ಯಂತ ನಾಳೆ (11.02.2022ರಂದು) ಎಲ್ಲಾ ಜಿಲ್ಲಾ/ ತಾಲೂಕ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ನಡೆಸಲು ಸಿಪಿಐ(ಎಂ) ರಾಜ್ಯ ಸಮಿತಿ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.