ವಿಜಯಪುರ: ಹಿಜಾಬ್-ಕೇಸರಿ ಶಾಲು ವಿವಾದ ತಲೆನೋವಾಗಿ ಪರಿಣಮಿಸಿರುವ ನಡುವೆ ಒಂದು ಆಶಾದಾಯಕವಾದ ಬೆಳವಣಿಗೆಯು ವಿಜಯಪುರ ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆದಿದೆ. ಎರಡೂ ಸಮುದಾಯಗಳ ವಿದ್ಯಾರ್ಥಿನಿಯರು ಅಪ್ಪಟ ಭಾವೈಕ್ಯತೆ ಮೆರೆದಿದ್ದಾರೆ. ಪರಸ್ಪರ ಆಲಿಂಗಸಿ, ಹಸ್ತಲಾಘವ ಮಾಡಿಕೊಂಡಿದ್ದಾರೆ.
ಶಾಲೆಯ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ ಪ್ರವೇಶಕ್ಕೂ ಮುನ್ನ ಭಾವೈಕ್ಯತೆ ಮೆರೆದು ನಮಗೆ ಹಿಜಾಬ್ ಕೇಸರಿ ಶಾಲಿಗಿಂತ ಶಾಲೆಗಳು ಕಾಲೇಜುಗಳು ಆರಂಭವಾಗಬೇಕೆಂದು ಹೇಳಿದರು. ಹಿಜಾಬ್-ಕೇಸರಿ ಶಾಲಿನಿಂದ ನಮ್ಮಲ್ಲಿ ಒಡಕಾಗಬಾರದು. ನಾವೆಲ್ಲಾ ಭಾರತಾಂಬೆಯ ಮಕ್ಕಳು. ನಮಗೆ ಹಿಜಾಬ್-ಕೇಸರಿ ಶಾಲು ಬೇಡಾ. ನಾವೆಲ್ಲಾ ಒಂದೇ, ನಾವು ಬೇರೆ ಬೇರೆಯಾಗಿದ್ದರೆ ಎಂದೋ ಬೇರೆ ದೂರವಾಗುತ್ತಿದ್ದೆವು. ನಾವು ಒಂದೇ ತಾಯಿ ಮಕ್ಕಳು. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ ಎಂದಿದ್ದಾರೆ.
ಹಿಜಾಬ್ ನಮ್ಮ ರಕ್ಷಣೆಗಾಗಿ ಹಾಕಿಕೊಂಡಿದ್ದು, ಅದು ನಮ್ಮ ಧಾರ್ಮಿಕ ಹಕ್ಕು. ಶಾಲಾ ತರಗತಿಯಲ್ಲಿ ನಾವು ಹಿಜಾಬ್ ಹಾಕಲ್ಲಾ ಎಂದು ವಿದ್ಯಾರ್ಥಿನಿಯರು ಒಡಕು ಇಲ್ಲದ ದನಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಹಿಂದೂ ಮತ್ತು ಮುಸ್ಲಿಂ ಬೇರೆಬೇರೆಯಲ್ಲಾ. ನಾವೆಲ್ಲಾ ಒಂದೇ. ಕೆಲವರಿಂದ ಮಾತ್ರ ಹೀಗಾಗಿದೆ ಎಂದು ವಿದ್ಯಾರ್ಥಿನಿಯರು ಬೇಸರದ ದನಿಯಲ್ಲಿ ಹೇಳಿದರು.
ಹೈಕೋರ್ಟ್ನಲ್ಲಿಂದು ವಿಚಾರಣೆ ಮುಂದುವರಿಕೆ
ಮುಸ್ಲಿಂ ವಿದ್ಯಾರ್ಥಿನೀಯರ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಪೀಠದಲ್ಲಿ 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ಆಗಲಿದೆ. ಇಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡುವ ಸಾಧ್ಯತೆಯೂ ಇದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ, ದೇವದತ್ ಕಾಮತ್ ವಾದ ಮುಂದುವರಿಸಲಿದ್ದಾರೆ.