ನವದೆಹಲಿ: ಕರ್ನಾಟಕ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (ಶಿರವಸ್ತ್ರ) ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯು ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸತತ 10 ದಿನಗಳಿಂದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ನಡೆಸಿತು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್, ಹಿರಿಯ ವಕೀಲರಾದ ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ಸಂಜಯ್ ಹೆಗ್ಡೆ, ಹುಝೇಫಾ ಅಹ್ಮದಿ, ದೇವದತ್ ಕಾಮತ್, ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ ಮತ್ತಿತರರು ವಾದ ಮಂಡಿಸಿದರು.
‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಎಲ್ಲಾ ಅರ್ಜಿಗಳನ್ನು ಹಾಗೂ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ತಂಡ, ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿತು. ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಹಿಜಾಬ್ ನಿಷೇಧದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ, ‘ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ಕರ್ನಾಟಕ ಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶಿಸಿರುವುದು ಸರಿಯಲ್ಲ. ಹಿಜಾಬ್ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೋಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್ ಪ್ರಮಾದವೆಸಗಿದೆ’ ಎಂದು ತಿಳಿಸಿದ್ದರು.
ರಾಜ್ಯ ಸರ್ಕಾರ ಫೆಬ್ರವರಿ 5, 2022 ರಂದು ಹೊರಡಿಸಿದ ತನ್ನ ಆದೇಶದಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆ ಧರಿಸುವುದನ್ನು ನಿಷೇಧಿಸಿದೆ ಎಂದು ಉಲ್ಲೇಖಿಸಿತು.