ಹಿಜಾಬ್‌ ರೀತಿ ಬಿಂದಿಗೂ, ತಿಲಕಕ್ಕೂ ನಿಷೇಧ ಹೇರುತ್ತೀರಾ? ಸುಪ್ರೀಂ ಪ್ರಶ್ನೆ

ನವದೆಹಲಿ :ಕಾಲೇಜು ಕ್ಯಾಂಪಸ್‌ನೊಳಗೆ ಹಿಜಾಬ್‌, ಬುರ್ಖಾ, ಟೋಪಿ ಹಾಗೂ ನಖಾಬ್‌ (ಮುಖ ಪರದೆ) ಧರಿಸುವುದನ್ನು ನಿಷೇಧಿಸಿ ಮುಂಬೈನ ಕಾಲೇಜೊಂದು ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆ ನೀಡಿದ್ದು, ಕಾಲೇಜು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

ತಾವು ಬಯಸಿದ್ದನ್ನು ಧರಿಸಲು ವಿದ್ಯಾರ್ಥಿನಿಯರಿಗೆ ಸ್ವಾತಂತ್ರ್ಯವಿದೆ. ಕಾಲೇಜುಗಳು ತಮ್ಮ ಆಯ್ಕೆಯನ್ನು ವಿದ್ಯಾರ್ಥಿನಿಯರ ಮೇಲೆ ಹೇರಬಾರದು. ದೇಶದಲ್ಲಿ ಇಷ್ಟೊಂದು ಧರ್ಮಗಳು ಇವೆ ಎಂದು ಈಗ ನಿಮಗೆ ತಕ್ಷಣ ಜ್ಞಾನೋದಯವಾಗಿದೆ. ಹಿಜಾಬ್‌, ಬುರ್ಖಾ ಧರಿಸಿದರೆ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ ಬಯಲಾಗುತ್ತದೆ ಎಂದು ಭಾವಿಸಿದ್ದರೆ, ತಿಲಕ ಹಾಗೂ ಬಿಂದಿಯನ್ನೇಕೆ ಕಾಲೇಜು ನಿಷೇಧಿಸಿಲ್ಲ. ವಿದ್ಯಾರ್ಥಿಗಳ ಹೆಸರುಗಳು ಅವರ ಧಾರ್ಮಿಕ ಗುರುತನ್ನು ಬಯಲು ಮಾಡುವುದಿಲ್ಲವೇ? ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಸಂಜಯ ಕುಮಾರ್‌ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು. ಈ ಸಂಬಂಧ ಎನ್‌.ಜಿ. ಆಚಾರ್ಯ ಹಾಗೂ ಡಿ.ಕೆ. ಮರಾಠೆ ಕಾಲೇಜನ್ನು ನಡೆಸುತ್ತಿರುವ ಚೆಂಬೂರ್‌ ಟ್ರಾಂಬೆ ಶಿಕ್ಷಣ ಸಂಸ್ಥೆಗೆ ನೋಟಿಸ್‌ ನೀಡಿ ನ.18ರೊಳಗೆ ಉತ್ತರ ನೀಡುವಂತೆ ನಿರ್ದೇಶನ ನೀಡಿತು.

ಏನಿದು ಪ್ರಕರಣ?:

ಕ್ಯಾಂಪಸ್‌ನೊಳಗೆ ಹಿಜಾಬ್‌, ಬುರ್ಖಾ, ನಖಾಬ್‌ ನಿಷೇಧಿಸಿ ಕಾಲೇಜು ಸುತ್ತೋಲೆ ಹೊರಡಿಸಿದ್ದು, ವಿವಾದಕ್ಕೀಡಾಗಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಕಾಲೇಜಿನ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

2 ವರ್ಷಗಳ ಹಿಂದೆ ಕರ್ನಾಟಕದಲ್ಲೂ ಹಿಜಾಬ್‌ ವಿವಾದ ಭಾರಿ ಗದ್ದಲ ಸೃಷ್ಟಿಸಿತ್ತು. ಅದು ಸುಪ್ರೀಂಕೋರ್ಟ್‌ ಮೆಟ್ಟಿಲನ್ನೂ ಏರಿತ್ತು.

Donate Janashakthi Media

Leave a Reply

Your email address will not be published. Required fields are marked *