ಮಾಹಿತಿ ನೀಡಲು ನಿರಾಕರಣೆ: ಮಹೇಶ್ ಜೋಶಿಗೆ 25 ಸಾವಿರ ರೂ. ದಂಡ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಮಾಹಿತಿ ನೀಡಲು ನಿರಾಕರಿಸಿದ ಕಾರಣಕ್ಕೆ ಮಾಹಿತಿ ಆಯೋಗ ವಿಧಿಸಿದ್ದ 25 ಸಾವಿರ ರೂ. ದಂಡದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆದಿದ್ದೂ, ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ. ಇದೀಗ ಜೋಶಿ 25 ಸಾವಿರ ರೂ. ದಂಡ ಪಾವತಿಸುವ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರು ದೂರದರ್ಶನಕ್ಕೆ ಸಂಬಂಧಿಸಿ ಕೆಲವು ಮಾಹಿತಿ ಕೋರಿ ಬಿ. ಅಶೋಕ್ ಮತ್ತು ಎನ್.ಕೆ. ಮೋಹನ್ ರಾಂ 2008-09ರ ಅವಧಿಯಲ್ಲಿ ದೂರದರ್ಶನ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ದೂರದರ್ಶನ ಮಾಹಿತಿ ಅಧಿಕಾರಿ ಹಾಗೂ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ್ ಜೋಶಿ ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ, ಮಾಹಿತಿ ಒದಗಿಸಲು 50,160 ರೂ. ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿಸಿದ್ದ ಕೇಂದ್ರ ಮಾಹಿತಿ ಹಕ್ಕು ಆಯೋಗ, ಮಾಹಿತಿ ನೀಡದ ಮಹೇಶ ಜೋಶಿ ಕ್ರಮ ಸರಿಯಲ್ಲ ಹಾಗೂ ಮಾಹಿತಿ ನಿರಾಕರಿಸುವ ಮೂಲಕ ಅವರು ದಂಡಕ್ಕೆ ಅರ್ಹರು ಎಂದು ತೀರ್ಮಾನಿಸಿ 25 ಸಾವಿರ ರೂ. ದಂಡ ವಿಧಿಸಿ, ಅದನ್ನು ಅವರ ಸಂಬಳದಲ್ಲಿ ಕಡಿತಗೊಳಿಸಲು ಆದೇಶಿಸಿತ್ತು.

ಇದನ್ನೂ ಓದಿ: ಜಾತಿ ತಾರತಮ್ಯವನ್ನು ರಕ್ಷಿಸುವ ವ್ಯವಸ್ಥೆಯ ಈ ಪರಿ!

ಈ ಆದೇಶ ಪ್ರಶ್ನಿಸಿ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಜೋಶಿ ಮನವಿಯನ್ನು ವಜಾಗೊಳಿಸಿತ್ತು. ಜೋಶಿಯವರ ಧೋರಣೆ ಒಬ್ಬ ಸರಕಾರಿ ಅಧಿಕಾರಿಯ ಗುಣವಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೀಡಿರುವ ಆದೇಶ ಸಮಂಜಸವಾಗಿಯೇ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, 25 ಸಾವಿರ ರೂ. ದಂಡ ವಿಧಿಸಿದ್ದ ಆಯೋಗದ ಆದೇಶ ಎತ್ತಿ ಹಿಡಿದಿತ್ತು.

ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಜೋಶಿ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ನಿಮ್ಮ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ.

ಆದ್ದರಿಂದ, ಮೇಲ್ಮನವಿ ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ವಾದ ಮುಂದುವರಿಸಲು ಬಯಸಿದರೆ ಅವಕಾಶ ನೀಡುತ್ತೇವಾದರೂ, ಒಂದು ವೇಳೆ ತೀರ್ಪು ನಿಮ್ಮ ಪರವಾಗಿ ಬರದೇ ಹೋದಲ್ಲಿ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂಬ ಮೌಖಿಕ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ್ ಜೋಶಿ ಪರ ವಕೀಲರು ಮಂಗಳವಾರ ಮೇಲ್ಮನವಿ ಹಿಂಪಡೆದರು.

ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಏನು ಹೇಳುತ್ತದೆ? Janashakthi Media

Donate Janashakthi Media

Leave a Reply

Your email address will not be published. Required fields are marked *