ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನಹಾನಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ, ಕಾಂಗ್ರೆಸ್‌ ಜಾಹೀರಾತು ನೀಡಿದ್ದ ಪತ್ರಿಕೆಯ ಮುಖಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದದಲ್ಲಿ ಬಿಜೆಪಿ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಬಿಜೆಪಿ ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ಕಾಗ್ನಿಜೆನ್ಸ್ ಪಡೆದುಕೊಂಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ನ್ಯಾಯಪೀಠ ಇಂದು ಪ್ರಕಟಿಸಿತು. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಅರ್ಜಿಯ ಸಂಬಂಧ ಹಿಂದೆ ನಡೆದ ವಿಚಾರಣೆ ವೇಳೆ ಬಿಜೆಪಿ ಪರ ವಕೀಲರು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್‌ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹವಾದ ಜಾಹೀರಾತಿಗೂ ರಾಹುಲ್‌ ಗಾಂಧಿಗೂ ಸಂಬಂಧವಿದೆಯೇ? ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ ಎಂದರು.

ಇದನ್ನೂ ಓದಿ: ಶೋಷಿತರ ಬದುಕು ಹಸನುಗೊಳಿಸಲು ಲೇಖಕರು ಯತ್ನಿಸಲಿ! – ಚಿನ್ನಸ್ವಾಮಿ ಸೋಸಲೆ

ರಾಹುಲ್ ಗಾಂಧಿ ಮಾಡಿರುವ ಮರು ಟ್ವೀಟ್, ಕಡತದಲ್ಲಿದೆ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಟ್ವಿಟರ್‌ನಿಂದ ಕೆಲವು ದಾಖಲೆಗಳನ್ನು ತರಿಸಿಕೊಳ್ಳಬಹುದು ಮತ್ತು ಮಾರ್ಕ್‌ ಮಾಡಬಹುದು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮರು ಟ್ವೀಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಅಪರಾಧವಲ್ಲ ಎನ್ನುತ್ತಿದ್ದಾರೆ. ಇದನ್ನು ವಿಚಾರಣೆಯಲ್ಲಿ ಸಾಬೀತುಪಡಿಸಬೇಕಿದೆಯಷ್ಟೇ ಎಂದು ಪೀಠಕ್ಕೆ ತಿಳಿಸಿದರು.

ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ತನ್ನ ಖಾತೆಯಲ್ಲಿ ಮರುಟ್ವೀಟ್ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಮಾನಹಾನಿ ಮಾಡುವುದೂ ಅಪರಾಧ. ಸಂಜ್ಞೆ ಪರಿಗಣಿಸುವಾಗ ನ್ಯಾಯಾಲಯವು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಪರಿಶೀಲಿಸಿ, ಸಮನ್ಸ್‌ ಜಾರಿ ಮಾಡಿದೆ.

ಆಗ ನ್ಯಾಯಾಲಯವು ವಿವೇಚನೆ ಬಳಸಿದೆ. ದೂರಿನ ಸಂಬಂಧ ಕಾಗ್ನಿಜೆನ್ಸ್ ಪಡೆದುಕೊಳ್ಳುವ ಸಂದರ್ಭದಲ್ಲಿ ಸ್ವತಂತ್ರ ಸಾಕ್ಷಿಯೂ ಸೇರಿ ಐವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಈ ಹೇಳಿಕೆಗಳು ಮತ್ತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ನ್ಯಾಯಾಲಯವು ಮೇಲ್ನೋಟಕ್ಕೆ ಸಂಜ್ಞೆ ತೆಗೆದುಕೊಂಡಿದೆ. ಪತ್ರಿಕೆ ಖರೀದಿಸಿದವರು ಮಾತ್ರ ಜಾಹೀರಾತು ನೋಡಬಹುದು. ಆದರೆ, ಎಕ್ಸ್‌ನಲ್ಲಿ ಪ್ರತಿದಿನವೂ ನೋಡಬಹುದಾಗಿದೆ. ಹಂಚಿಕೊಳ್ಳಬಹುದಾಗಿದೆ. ಪತ್ರಿಕೆ ಬರುವ ವೇಳೆಗೆ ರಾಹುಲ್‌ ಗಾಂಧಿ ಅವರು ಆಕ್ಷೇಪಾರ್ಹವಾದ ಜಾಹೀರಾತನ್ನು ಮರು ಪೋಸ್ಟ್ ಮಾಡಿದ್ದರು ಎಂದರು.

ರಾಹುಲ್ ಗಾಂಧಿ ಪರ ವಕೀಲರು, ಅರ್ಜಿದಾರರು ಮಾಡಿರುವ ಮರು ಪೋಸ್ಟ್ ಸಂಬಂಧ ಯಾವುದೇ ದಾಖಲೆಯನ್ನು ಬಿಜೆಪಿ ಸಲ್ಲಿಸಿಲ್ಲ. ಅದನ್ನು ಎಷ್ಟು ಜನ ನೋಡಿದ್ದಾರೆ ಮತ್ತು ಅದರಿಂದ ಮಾನಹಾನಿಯಾಗಿದೆಯೇ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲಿ 40 ಮಂದಿ ಇದ್ದರು ಎಂದು ಹೇಳುವ ಬಿಜೆಪಿಯು ಅವರನ್ನೆಲ್ಲಾ ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ? ರಾಹುಲ್‌ ಉಪಾಧ್ಯಕ್ಷರಾಗಿದ್ದಾರೆ ಎಂಬುದರ ಮೇಲೆ ಇಡೀ ದೂರು ನಿಂತಿದೆ.

ಆದರೆ, ಆ ಸಂದರ್ಭದಲ್ಲಿ ರಾಹುಲ್‌ ಉಪಾಧ್ಯಕ್ಷರಾಗಿರಲೇ ಇಲ್ಲ. ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಆಗಿ ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಪರಾಧವಾಗಲಿದೆ ಎಂದು ಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತ, ಅತಾರ್ಕಿಕ ಮತ್ತು ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡಿದ್ದಾರೆ. ಜಾಹೀರಾತಿನಲ್ಲಿ ಭ್ರಷ್ಟಾಚಾರ ದರ ಪಟ್ಟಿ ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ.

ಅಲ್ಲದೆ, ಕೆಎಸ್ಡಿಎಲ್ನಲ್ಲಿ ಹುದ್ದೆಗೆ 5 ರಿಂದ 15 ಕೋಟಿ ರೂಪಾಯಿ, ಎಂಜಿನಿಯರ್ ಹುದ್ದೆಗೆ 1 ರಿಂದ 5 ಕೋಟಿ, ಉಪ ನೋಂದಣಾಧಿಕಾರಿ ಹುದ್ದೆಗೆ 50 ಲಕ್ಷದಿಂದ 5 ಕೋಟಿ, ಬೆಸ್ಕಾಂನಲ್ಲಿನ ಹುದ್ದೆಗೆ 1 ಕೋಟಿ, ಪಿಎಸ್ ಹುದ್ದೆಗೆ 80 ಲಕ್ಷ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 50 ರಿಂದ 70 ಲಕ್ಷ, ಪ್ರಾಧ್ಯಾಪಕರ ಹುದ್ದೆಗೆ 30 ರಿಂದ 50 ಲಕ್ಷ, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 30 ಲಕ್ಷ, ಅಂತೆಯೇ ಕಿರಿಯ ಇಂಜಿನಿಯರ್, ಬಮೂಲ್, ಲೋಕೋಪಯೋಗಿ ಕಿರಿಯ ಇಂಜಿನಿಯರ್, ಕಾನ್​ಸ್ಟೆಬಲ್​ ಹುದ್ದೆಗೆ ಲಂಚ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿತ್ತು.

ಬಿಡಿಎ ಆಯುಕ್ತರು, ಕೆಪಿಎಸ್ಸಿ ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ, ಕುಲಪತಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಹುದ್ದೆಗಳಿಗೂ ಲಂಚದ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಬಹಿರಂಗವಾಗಿ ಜಾಹೀರಾತಿನ ಮೂಲಕ ಹೇಳಿರುವುದರಿಂದ, ಇದು ಕ್ರಿಮಿನಲ್ ಮಾನಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಕೋವಿಡ್ ಸಂಬಂಧಿತ ಸಾಮಗ್ರಿಗಳ ಪೂರೈಕೆ ಮತ್ತು ಖರೀದಿಯಲ್ಲಿ ಶೇ.70ರಷ್ಟು ಕಮಿಷನ್ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ, ರಸ್ತೆ ನಿರ್ಮಾಣದಲ್ಲಿ 70:30ರಷ್ಟು ಲಂಚ ಪಡೆಯಲಾಗಿದೆ ಎಂದು ಜಾಹೀರಾತಿನಲ್ಲಿ ದೂರಿದ್ದಾರೆ. ಅಲ್ಲದೇ, ಶೇ. 40ರ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿ, ರಾಹುಲ್ ಮತ್ತಿತರರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು. ಈ ದೂರನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್‌ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ನೋಡಿ: ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media

Donate Janashakthi Media

Leave a Reply

Your email address will not be published. Required fields are marked *