- ಸರ್ಕಾರಕ್ಕೆ ಕೆಪಿಸಿಸಿಗೆ ಹೈಕೋರ್ಟ್ ತರಾಟೆ.
- ಪಾದಯಾತ್ರೆ ತಡೆಯಲು ಸರ್ಕಾರ ಅಸಮರ್ಥವೇ?
- ಉತ್ತರಿಸಲು ಒಂದು ದಿನ ಗಡುವು ಕೊಟ್ಟ ಕೋರ್ಟ್
- ವಿಚಾರಣೆ ಜ. 14 ಕಕ್ಕೆ ಮುಂದೂಡಿಕೆ
ಬೆಂಗಳೂರು : ಮೇಕೆದಾಟು ಪಾದಯಾತ್ರೆ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯ ಕೆಂಡ ಕಾರಿದ್ದು, ಪಾದಯಾತ್ರೆ ಸಂಬಂಧ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಛಾಟಿ ಬೀಸಿ ಅನುಮತಿ ಪಡೆದು ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿರುವ ಹೈಕೋರ್ಟ್ ಪಾದಯಾತ್ರೆಯನ್ನು ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ ಎಂದು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಪಕ್ಷ ನಡೆಸಿರುವ ಮೇಕೆದಾಟು ಪಾದಯಾತ್ರೆಯನ್ನು ಪ್ರಶ್ನಿಸಿ, ಬೆಂಗಳೂರಿನ ತಿಂಡ್ಲು ನಿವಾಸಿ ಎ.ವಿ ನಾಗೇಂದ್ರ ಪ್ರಸಾದ್ ಎಂಬುವರು ನಿನ್ನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠ ಕೋವಿಡ್ ಸೋಂಕು ಹೆಚ್ಚಳದ ವೇಳೆ ಪಾದಯಾತ್ರೆ ನಡೆಸುತ್ತಿದ್ದಿರಾ, ಪಾದಯಾತ್ರೆಗೆ ಅನುಮತಿ ಪಡೆದಿದ್ದಿರಾ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿತು. ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜರ್ನಲ್‌ರವರು ಮೇಕೆದಾಟು ಪಾದಯಾತ್ರೆ ನಡೆಸಿರುವವರ ವಿರುದ್ಧ 3 ಎಫ್‌ಐಆರ್ ದಾಖಲಾಗಿದೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದರು.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆಘಾತ : ದೇಶವ್ಯಾಪಿ 7 ಮಂದಿ ಬಿಜೆಪಿ ಶಾಸಕರ ರಾಜೀನಾಮೆ!
ಹೆಚ್ಚುವರಿ ಅಡ್ವೋಕೇಟ್ ಜರ್ನಲ್‌ರವರ ಮಾಹಿತಿ ನೀಡಿದ ನಂತರ ಸಾರ್ವಜನಿಕ ಹಿತಾಸಕ್ತಿ ವಿರುದ್ಧ ಅನುಮತಿ ಇಲ್ಲದಿದ್ದರೂ ರ್‍ಯಾಲಿ ಮಾಡುತ್ತಿರುವವರ ವಿರುದ್ಧ ಸರ್ಕಾರ ಏಕೆ ಕ್ರಮಕೈಗೊಂಡಿಲ್ಲ. ಅನುಮತಿ ಕೊಟ್ಟಿಲ್ಲದಿದ್ದರೂ ಯಾರಿಗಾಗಿ
ಕಾಯುತ್ತಿದ್ದೀರಿ. ನ್ಯಾಯಾಲಯದ ಆದೇಶ ಬೇಕೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪಾದಯಾತ್ರೆ ತಡೆಯಲು ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ ಎಂದು ಪ್ರಶ್ನಿಸಿತು.
ಪಾದಯಾತ್ರೆಗೆ ಅನುಮತಿ ಪಡೆದಿದ್ದೀರಾ ಇಲ್ಲವೇ ಎಂಬ ಬಗ್ಗೆ ನಾಳೆಯೊಳಗೆ ವಿವರ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೂ ಸೂಚಿಸಿದ ಹೈಕೋರ್ಟ್, ಎಲ್ಲದರ ಬಗ್ಗೆಯೂ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೇಳಿ ವಿಚಾರಣೆಯನ್ನು ಜ. 14ಕ್ಕೆ ಮುಂದೂಡಿದೆ.
ಕರ್ನಾಟಕ ಈಗಾಗಲೇ ಕೋವಿಡ್‌ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಅನುಮತಿ ನೀಡಿದ್ದೀರಾ ಎಂದು ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿ ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿ ಎಲ್ಲದಕ್ಕೂ ಉತ್ತರಿಸಲು ಒಂದು ದಿನದ ಗಡುವು ನೀಡಿದೆ.