ಬೆಂಗಳೂರು : ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಡುವುನ್ನು ಕಡ್ಡಾಯಗೊಳಿಸಲು ಹೈಕೋರ್ಟ್ ತೀರ್ಮಾನ ಕೈಗೊಂಡಿದೆ.
ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅಪಮಾನ ಮಾಡಿದರು ಎಂಬ ವರದಿಗಳ ಬೆನ್ನೆಲ್ಲೆ ಇಂತಹ ಮಹತ್ವದ ತೀರ್ಮಾನವನ್ನು ಹೈಕೋರ್ಟ್ ಕೈಗೊಂಡಿದೆ.
ಗಾಂಧೀಜಿಯ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿಡುವ ಸಂಬಂಧ ಪೂರ್ಣಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿತ್ತು, ಆದರೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಸುಮಾರು 2 ವರ್ಷದಿಂದ ಪೂರ್ಣಪೀಠದ ಮುಂದೆ ಪರಿಶೀಲನೆಗೆ ಬಾಕಿ ಇತ್ತು. ಇದೀಗ ಪೂರ್ಣಪೀಠ ಒಪ್ಪಿಗೆ ನೀಡಿರುವುದರಿಂದ ಅಂಬೇಡ್ಕರ್ ಭಾವಿಚಿತ್ರ ಇಡಲು ಇದ್ದ ಅಡ್ಡಿ ನಿವಾರಣೆಯಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಿಜೆ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ? : ಜ.26ರಂದು ಗಣರಾಜ್ಯೋತ್ಸವ, ಆ.15ರಂದು ಸ್ವಾತಂತ್ರ್ಯೋತ್ಸವ ಹಾಗೂ ನ.26ರಂದು ಸಂವಿಧಾನ ದಿನದ ಅಂಗವಾಗಿ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳು ಹಾಗೂ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ವಿವಾದವೇನು? : ರಾಯಚೂರಿನಲ್ಲಿ ಜನವರಿ 26ಕ್ಕೆ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ನ್ಯಾಯಧೀಶರು ಬಿಆರ್ ಅಂಬೇಡ್ಕರ್ ಫೋಟೋ ತೆಗೆಸಿ ಅಪಮಾನ ಮಾಡಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಈ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಕೋರ್ಟ್ನ ಅಧಿಕೃತ ಸಮಾರಂಭಗಳಲ್ಲಿ ಫೋಟೋ ಇಡಲು ಹೈಕೋರ್ಟ್ ತೀರ್ಮಾನಿಸಿದೆ.
ರಾಯಚೂರು ಜಿಲ್ಲಾ ನ್ಯಾಯಧೀಶರು ಗಣರಾಜ್ಯೋತ್ಸವದ ದಿನದಂದು ಧ್ರಜಾರೋಹಣ ಮಾಡುವ ವೇಳೆ ಬಿ ಆರ್ ಅಂಬೇಡ್ಕರ್ ಪೋಟೋ ತೆಗೆಸಿದ್ದಾರೆ ಎಂದು ಹಲವು ದೂರುಗಳು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು. ದೂರಿನನ್ವಯ ಹೈಕೊರ್ಟ್ ಇದೀಗ ಗಣರಾಜ್ಯ ದಿನಾಚರಣೆ, ಆ.15ರ ಸ್ವಾತಂತ್ರ್ಯ ದಿನಾಚರಣೆ, ನ.26ರ ಸಂವಿಧಾನ ದಿನದಂದು ಫೋಟೋ ಇಡಲು ಜಿಲ್ಲಾ, ತಾಲೂಕು ಕೋರ್ಟ್ಗಳಿಗೆ ಸೂಚನೆ ನೀಡಿದೆ.