ಬೆಂಗಳೂರು: ಮೈಸೂರು-ಮಂಡ್ಯ ಪ್ರದೇಶದ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ 20 ಕಿಮೀ ವ್ಯಾಪ್ತಿಯೊಳಗೆ ಕಲ್ಲು ಗಣಿಗಾರಿಕೆಗಾಗಿ ಪಡೆದ ಎಲ್ಲಾ ಗಣಿಗಾರಿಕೆ ಪರವಾನಗಿಗಳನ್ನು ಅಣೆಕಟ್ಟು ಸುರಕ್ಷತಾ ಕಾಯಿದೆ-2021 ರ ನಿಬಂಧನೆಗಳ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ ಅಮಾನತುಗೊಳಿಸಿದೆ. ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾಧಿಕಾರಿಗಳು ತಮ್ಮ ಪರವಾನಗಿಯನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಗಣಿಗಾರಿಕೆ ಪರವಾನಗಿದಾರ ಸಿ.ಜಿ. ಕುಮಾರ್ ಅವರು ಅರ್ಜಿ ಅಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಪಿಐಎಲ್ ಆಗಿ ಪರಿವರ್ತಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ಈ ಆದೇಶ ನೀಡಿದೆ.
“ಅಣೆಕಟ್ಟು ಸುರಕ್ಷತಾ ಕಾಯಿದೆ-2021 ರ ನಿಬಂಧನೆಗಳ ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಯಾವುದೇ ವ್ಯಕ್ತಿ ಅಥವಾ ಏಜೆನ್ಸಿಯಿಂದ ಯಾವುದೇ ಗಣಿಗಾರಿಕೆ ಅಥವಾ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ ಅಥವಾ ಮುಂದುವರಿಸಲಾಗುವುದಿಲ್ಲ” ಎಂದು ಮುಖ್ಯ ಪೀಠವನ್ನು ಒಳಗೊಂಡಿರುವ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ
ಅಣೆಕಟ್ಟು ಸುರಕ್ಷತಾ ಕಾಯಿದೆ, 2021ರಲ್ಲಿ ಜಾರಿಗೆ ಬಂದಿತ್ತು. ಆದರೆ ಪ್ರಸ್ತುತ ಕೋರ್ಟ್ ಆದೇಶಿಸಿರುವ ಅಮಾನತು 2021ರ ಡಿಸೆಂಬರ್ 30 ಮೊದಲು ನೀಡಲಾದ ಎಲ್ಲಾ ಪರವಾನಗಿಗಳಿಗೆ ಅನ್ವಯಿಸಲಿದೆ. ಇಷ್ಟೆ ಅಲ್ಲದೆ ನ್ಯಾಯಾಲಯ ಅಥವಾ ನ್ಯಾಯವ್ಯಾಪ್ತಿಯ ಅಧಿಕಾರಿಗಳ ಆದೇಶದ ಮೇರೆಗೆ ಗಣಿಗಾರಿಕೆ ನಡೆಸುತ್ತಿರುವ ನಿದರ್ಶನಗಳಿಗೂ ಸಹ ಈ ಆದೇಶ ಅನ್ವಯಿಸುತ್ತದೆ.
ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿಯಿಂದ ಸುರಕ್ಷತಾ ವರದಿಗೆ ಅನುಕೂಲವಾಗುವಂತೆ ಮಂಡ್ಯ ಜಿಲ್ಲಾಧಿಕಾರಿ ಅವರು 2018 ರ ನವೆಂಬರ್ 27ರಂದು ನೀಡಿದ್ದ ಆದೇಶದಲ್ಲಿ ಕೆಆರ್‌ಎಸ್ ಅಣೆಕಟ್ಟು ಪ್ರದೇಶದಲ್ಲಿ ಸ್ಪೋಟಕ ಚಟುವಟಿಕೆಗಳಿಗೆ ನಿಷೇಧ ಹೇರಿದ್ದರು ಆದರೆ ಗಣಿಗಾರಿಕೆಯನ್ನು ನ್ಯಾಯಾಲಯಗಳು ಮತ್ತು ಸರ್ಕಾರದ ಅನುಮತಿಯೊಂದಿಗೆ ವೈಯಕ್ತಿಕ ಗಣಿಗಾರರಿಂದ ಗಣಿಗಾರಿಕೆ ನಡೆಸಲಾಗುತ್ತಿತ್ತು.
ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಕಂದಾಯ ಇತ್ಯಾದಿ ಇಲಾಖೆಗಳ ಅಧಿಕಾರಿಗಳು ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಎಂಬ ನಿರ್ದೇಶನಗಳನ್ನು ಹೈಕೋರ್ಟ್ ನೀಡಿದೆ. “ಹೇಳಿದ ನಿರ್ದೇಶನಗಳ ಉಲ್ಲಂಘನೆಯನ್ನು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು” ಎಂದು ಪೀಠ ಹೇಳಿದೆ.
ಇದನ್ನೂ ಓದಿ: 4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಗೋವಾದಿಂದ ಪ್ರಯಾಣಿಸಿದ ಬೆಂಗಳೂರಿನ ಉದ್ಯಮಿ!
ಕಲ್ಲು ಕ್ವಾರಿಗಳಲ್ಲಿ ಸ್ಫೋಟಕಗಳನ್ನು ಸ್ಫೋಟಿಸುವ ಗಣಿಗಾರಿಕೆ ಚಟುವಟಿಕೆಗಳಿಂದ ಅಣೆಕಟ್ಟಿಗೆ ಆಗಬಹುದಾದ ಹಾನಿಯ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ಕನಿಷ್ಠ ಆರು ತಿಂಗಳ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ. ಗಣಿಗಾರಿಕೆಯ ಮೇಲಿನ ನಿರ್ಬಂಧಗಳು ಗಣಿಗಾರಿಕೆ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತವೆ ಆದರೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಇದು ಅನಿವಾರ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.
“ಈ ಅಣೆಕಟ್ಟು ಹಳೆಯ ಮೈಸೂರು ರಾಜ್ಯದ ಜನರ ರಕ್ತ ಮತ್ತು ಬೆವರುಗಳಿಂದ ಸೃಷ್ಟಿಯಾಗಿದೆ ಎಂದು ಸಾಹಿತ್ಯ ಕೃತಿಯಲ್ಲಿ ವಿವರಿಸಲಾಗಿದೆ. ಈ ಅಣೆಕಟ್ಟನ್ನು ಅದರ ಸುರಕ್ಷತೆ ಮತ್ತು ಅಸ್ತಿತ್ವಕ್ಕೆ ಅಪಾಯಕಾರಿಯಾದ ಯಾವುದೇ ಚಟುವಟಿಕೆಯಿಂದ ರಕ್ಷಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಬ್ಲಾಸ್ಟಿಂಗ್ ಮಾಡದೆ ಗಣಿಗಾರಿಕೆ ಚಟುವಟಿಕೆ ನಡೆಸಲು ತನ್ನ ಕಕ್ಷಿದಾರನಿಗೆ ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ಹಾಜರಾದ ವಕೀಲರ ವಾದವನ್ನು ನಾವು ಒಪ್ಪುವುದಿಲ್ಲ” ಎಂದು ಪೀಠವು ಹೇಳಿದೆ.
ವಿಡಿಯೊ ನೋಡಿ: ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media