ನವದೆಹಲಿ: ನಾವು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯಗಳ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಲೂ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಮದ್ರಾಸ್ ಹೈಕೋರ್ಟ್ ಹೇಳಿಕೆ ಪ್ರಶ್ನಿಸಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ನಲ್ಲಿ ವಕಾಲತ್ತು ಸಲ್ಲಿಸಿತ್ತು. ಜೊತೆಗೆ ಕೋರ್ಟುಗಳ ಮೌಖಿಕ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ವರದಿ ಮಾಡದಂತೆ ನಿರ್ಬಂಧವಿಧಿಸಬೇಕೆಂದು ಆಯೋಗ ಕೋರಿತ್ತು.
ಚುನಾವಣಾ ಆಯೋಗವು “ಯಾವುದೇ ಆಧಾರವಿಲ್ಲದೆ ಮತ್ತೊಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರದ ಮೇಲೆ ಹತ್ಯೆಯ ಗಂಭೀರ ಆರೋಪ ಹೊರೆಸಿದೆ. ಅದು ಅಂತಿಮವಾಗಿ ಎರಡೂ ಸಂಸ್ಥೆಗಳಿಗೆ ಧಕ್ಕೆ ತಂದಿದೆ” ಎಂದು ಆಯೋಗವು ಆಕ್ಷೇಪಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪೀಠವು ಚುನಾವಣಾ ಆಯೋಗವನ್ನು ಖಂಡಿಸುವುದು ನಮ್ಮ ಉದ್ದೇಶವಲ್ಲ ಬದಲಿಗೆ ಸಂಸ್ಥೆಗಳನ್ನು ಬಲಪಡಿಸಬೇಕಿದೆ ಎಂಬುದಾಗಿದೆ ಎಂದು ಹೇಳಿದೆ.
ಇದನ್ನು ಓದಿ: ಗೆಲುವಿನ ಸಂಭ್ರಮಾಚರಣೆ ನಿಲ್ಲಿಸಿ: ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ಪತ್ರ
ಹೈಕೋರ್ಟ್‌ಗಳಲ್ಲಿ ನಡೆದ ಮೌಖಿಕ ಅವಲೋಕನಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ನ್ಯಾಯಾಲಯಗಳಲ್ಲಿ ನಡೆಯುವ ಸಂಭಾಷಣೆಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುತ್ತವೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಆದೇಶ ನೀಡುವುದಾಗಿ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಚುನಾವಣಾ ಆಯೋಗದ ಪರವಾಗಿ ನ್ಯಾಯವಾದಿ ರಾಕೇಶ್ ದ್ವಿವೇದಿ ವಾದ ಮಂಡಿಸಿದರು.