ಕೆಎಸ್‌ಸಿಎ ಅಧ್ಯಕ್ಷ ಚುನಾವಣೆ: ಕೆ.ಎನ್. ಶಾಂತಕುಮಾರ್‌ ಮರುಪ್ರವೇಶಕ್ಕೆ ಹೈಕೋರ್ಟ್ ಅವಕಾಶ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಧ್ಯಕ್ಷ ಚುನಾವಣೆ ಸಂಬಂಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರ ತಿರಸ್ಕಾರಗೊಂಡಿದ್ದರಿಂದ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ, ಹೈಕೋರ್ಟ್ ಮಧ್ಯಪ್ರವೇಶದಿಂದ ಶಾಂತಕುಮಾರ್ ರಿಗೆ ಮತ್ತೆ ಕಣಕ್ಕಿಳಿಯುವ ಅವಕಾಶ ಸಿಕ್ಕಿದೆ.

‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಸ್ಪೋರ್ಟ್ಸ್ ಕ್ಲಬ್’ ಪ್ರತಿನಿಧಿಯಾಗಿ ಶಾಂತಕುಮಾರ್ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರ ಕ್ಲಬ್‌ನಿಂದ 200 ರೂಪಾಯಿ ಚಂದಾ ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ ನವೆಂಬರ್ 24ರಂದು ಚುನಾವಣಾಧಿಕಾರಿಗಳು ಅವರ ನಾಮಪತ್ರವನ್ನು ಅಸಿಂಧುಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಶಾಂತಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಅಧ್ಯಕ್ಷ

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಉಪಾಹಾರ ಸಭೆ

ವಿಚಾರಣೆ ವೇಳೆ ಶಾಂತಕುಮಾರ್ ಪರ ಹಿರಿಯ ವಕೀಲ ಎಸ್.ಎಸ್. ನಾಗಾನಂದ್, “ಇದು ವೈಯಕ್ತಿಕ ಬಾಕಿ ಅಲ್ಲ, ಸಂಸ್ಥೆಯ ಹೆಸರಿನಲ್ಲಿದ್ದ ಬಾಕಿ. ನಾಮಪತ್ರ ಪರಿಶೀಲನೆ ವೇಳೆಗಾಗಲೇ ಬಾಕಿ ಹಣ ಪಾವತಿಸಲಾಗಿದೆ,” ಎಂದು ವಾದ ಮಂಡಿಸಿದರು. ತಮ್ಮ ವಾದಕ್ಕೆ ಪೂರಕವಾಗಿ ವಿಡಿಯೋ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದನ್ನು ಪರಿಶೀಲಿಸಿದ ನ್ಯಾ. ಸೂರಜ್ ಗೋವಿಂದರಾಜು, ಚುನಾವಣಾಧಿಕಾರಿಗಳ ಕ್ರಮವನ್ನು ರದ್ದುಗೊಳಿಸಿ, ಶಾಂತಕುಮಾರ್ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿದರು.

ಡಿಸೆಂಬರ್ 7ಕ್ಕೆ ಚುನಾವಣೆ

ಹೈಕೋರ್ಟ್ ಆದೇಶದಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಇದರಿಂದಾಗಿ ಬ್ರಿಜೇಶ್ ಪಟೇಲ್ ಬಣದ ಕೆ.ಎನ್. ಶಾಂತಕುಮಾರ್ ಮತ್ತು ಅನಿಲ್ ಕುಂಬ್ಳೆ ಬೆಂಬಲಿತ ‘ಗೇಮ್ ಚೇಂಜರ್ಸ್’ ಬಣದ ವೆಂಕಟೇಶ್ ಪ್ರಸಾದ್ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ಈ ಹಿಂದೆ ನವೆಂಬರ್ 30ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು, 9 ವರ್ಷಗಳ ಅಧಿಕಾರಾವಧಿ ನಿಯಮ ಮತ್ತು ಅರ್ಹತೆ ಕುರಿತ ಗೊಂದಲಗಳಿಂದಾಗಿ ಡಿಸೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆದರೆ, ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ, ಹಾಲಿ ಬೈ-ಲಾ ಪ್ರಕಾರ ಡಿಸೆಂಬರ್ 7 ರಂದೇ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಇದೀಗ ಶಾಂತಕುಮಾರ್ ಪ್ರಕರಣದಲ್ಲೂ ನ್ಯಾಯಾಲಯ ಸ್ಪರ್ಧೆಗೆ ಅವಕಾಶ ನೀಡುವ ಮೂಲಕ ಚುನಾವಣಾ ಪ್ರಕ್ರಿಯೆಗೆ ವೇಗ ನೀಡಿದೆ.

ಇದನ್ನೂ ನೋಡಿ: ಬಾಕಿ ವೇತನಕ್ಕಾಗಿ ಬೀಡಿ ನೌಕರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *