ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ್ದು, ಈ ಬಗ್ಗೆ ಆದೇಶ ಹೊರಡಿಸಿದೆ. ಇದೇ ವೇಳೆ ಲೋಕಾಯುಕ್ಕೆ ಸಂಪೂರ್ಣ ಅಧಿಕಾರ ನೀಡಿದೆ.
ಉಚ್ಚ ನ್ಯಾಯಾಲಯದ ಆದೇಶದನ್ವಯ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ, ಪೊಲೀಸ್ ಠಾಣಾಧಿಕಾರವನ್ನು ನೀಡಿ ಸರ್ಕಾರದ ಅಧಿಸೂಚನೆಯಂತೆ ಪುನರುಜ್ಜೀವನಗೊಳಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ 2022ರ ಆಗಸ್ಟ್ 11ರಂದು ಎಸಿಬಿ ರದ್ದುಗೊಳಿಸುವ ಕುರಿತು ಮಹತ್ವದ ತೀರ್ಪು ನೀಡಿತ್ತು. ಇದೀಗ ಸರ್ಕಾರ ಆದೇಶ ಅನುಷ್ಠಾನಗೊಂಡಿದೆ. ಈ ಮೂಲಕ ಇದೀಗ ಎಸಿಬಿ ಇತಿಹಾಸ ಪುಟ ಸೇರಿದೆ. ರಾಜ್ಯದಲ್ಲಿ ಆರು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯಚರಣೆ ಮಾಡುತ್ತಿತ್ತು. 2016ರ ಮಾರ್ಚ್ 19 ರಂದು ಎಸಿಬಿಯನ್ನು ರಚನೆ ಮಾಡಲಾಗಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನಂತೆ ಪರಿಶೀಲಿಸಿದ ರಾಜ್ಯ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
- ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಗೊಳಿಸಿದೆ.
- ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ ಸಂಪೂರ್ಣ ಅಧಿಕಾರ ನೀಡಲಾಗಿದೆ.
- ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣಾಧಿಕಾರ ನೀಡಲಾಗಿದೆ.
- ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪುಸ್ತುತ ಬಾಕಿಯಿರುವ ತನಿಖೆಗಳು ವಿಚಾರಣೆಗಳು/ಇತರೆ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಖ್ಯೆಗೆ ವರ್ಗಾಯಿಸುವುದು.