ಬೆಂಗಳೂರು: ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಆಹಾರ ಪೂರೈಸುವ ಕ್ಯಾಂಟಿನ್‍ಗೆ ಇಡಲಾಗಿರುವ ಇಂದಿರಾ ಹೆಸರನ್ನು ಬದಲಾವಣೆ ಮಾಡಿದಾದಲ್ಲಿ ಮುಂದಿನ ದಿನಗಳಲ್ಲಿ ಹಲವು ರಸ್ತೆ, ಸೇತುವೆಗಳಿಗಿರುವ ಬಿಜೆಪಿ ನಾಯಕರ ಹೆಸರುಗಳನ್ನು ಸಹ ಬದಲಾವಣೆ ಮಾಡಬೇಕಾಗಿ ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʻʻಬಿಜೆಪಿಯವರು ದ್ವೇಷದ ರಾಜಕಾರಣ ಬಿಟ್ಟು ಪ್ರಜಾಸತಾತ್ಮಕವಾಗಿ ನಡೆದುಕೊಳ್ಳಬೇಕು. ಯೋಜನೆಗಳಿಗೆ ಮರುನಾಮಕರಣ ಮಾಡಿದಾಕ್ಷಣ ಅವರ ಸಾಧನೆಗಳನ್ನು ಜನರ ಮನಸ್ಸಿನಿಂದ ಮರೆ ಮಾಚಲು ಸಾಧ್ಯವಿಲ್ಲ. ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಎಂದಿಗೂ ಈ ರೀತಿಯ ಕೆಟ್ಟ ರಾಜಕಾರಣ ಮಾಡಿಲ್ಲ. ಈಗ ಬಿಜೆಪಿ ಅಧಿಕಾರವಧಿಯಲ್ಲಿ ಮರುನಾಮಕರಣ ಮಾಡುವ ಚರ್ಚೆ ನಡೆಯುತ್ತಿದೆʼʼ ಎಂದು ಅಸಮದಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದಿವಗಂತ ಇಂದಿರಾಗಾಂಧಿ ಅವರ ಯೋಜನೆಗಳು, ಸಾಧನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಭಾರತದಲ್ಲಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅವರ ಖ್ಯಾತಿ ಇದೆ. ಇಂದಿರಾಗಾಂಧಿ ದೇಶದ ಘನತೆಯ ಸಂಕೇತ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ರಿಯಾಯಿತಿ ದರದಲ್ಲಿ ಊಟ ನೀಡುವ ಕ್ಯಾಂಟಿನ್ ಆರಂಭಿಸಿದಾಗ ಅದಕ್ಕೆ ಇಂದಿರಾ ಗಾಂಧಿ ಹೆಸರನ್ನು ನಾಮಕರಣ ಮಾಡಿತ್ತು. ಈಗ ಅದಕ್ಕೆ ಬಿಜೆಪಿ ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಎಂದು ಮರುನಾಮಕರಣ ಮಾಡುವ ಚರ್ಚೆ ಆರಂಭಿಸಿದೆ. ಬಿಜೆಪಿ ಸರ್ಕಾರ ಹೊಸದಾಗಿ ಮತ್ತೊಂದು ಯೋಜನೆ ಆರಂಭಿಸಿ ಅದಕ್ಕೆ ಅನ್ನಪೂರ್ಣಶ್ವರಿ ಹೆಸರನ್ನು ನಾಮಕರಣ ಮಾಡಲಿ. ಅದನ್ನು ಬಿಟ್ಟು ಹೊಸದಾಗಿ ಏನನ್ನು ಮಾಡದೆ ಹಿಂದಿನ ಸರ್ಕಾರಗಳು ಜಾರಿಗೆ ತಂದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಮರು ನಾಮಕರಣ ಮಾಡುವುದನ್ನೇ ಸಾಧನೆ ಎಂದು ಬಿಜೆಪಿ ಭಾವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಅಟಲ್ ಸಾರಿಗೆ, ಯಲಯಂಕ ಮೇಲುಸೇತುವೆಗೆ ಸಾರ್ವಕರ್, ಯಶವಂತ ಪುರದ ಮೇಲುಸೇತುವೆಗೆ ದಿನ್ ದಯಾಳ್ ಉಪಾಧ್ಯಾಯ ಹೆಸರನ್ನು ಇಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾವು ಕೂಡ ಮರುನಾಮಕರಣ ಮಾಡಬೇಕಾಗುತ್ತದೆ. ಕೂಡಲೇ ಹೆಸರು ಬದಲಾವಣೆಯ ಷಡ್ಯಂತ್ರವನ್ನು ನಿಲ್ಲಿಸಬೇಕು, ಇಲ್ಲವಾದರೆ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜನಪರವಾಗಿ ಯಾವುದಾದರೂ ಯೋಜನೆ ಜಾರಿಗೆ ತರಲಿ. ಪ್ರಸ್ತುತ ದುಬಾರಿ ತೆರಿಗೆ, ಬೆಲೆ ಏರಿಕೆ ಸೇರಿದಂತೆ ಅನೇಕ ಜನ ವಿರೋಧಿ ಕ್ರಮಗಳಲ್ಲೇ ಕಾಲ ಕಳೆಯುತ್ತಿರುವ ಬಿಜೆಪಿಯವರು ಮರುನಾಮಕರಣದ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಖೇಲ್‍ರತ್ನ ಪ್ರಶಸ್ತಿಗೆ ರಾಜೀವ್ ಗಾಂಧಿ ಅವರ ಹೆಸರು ತೆಗೆದು ಮೇಜರ್ ಧ್ಯಾನ್‍ಚಂದ್ ಹೆಸರು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರ ಧ್ಯಾನ್‍ಚಂದ್ ಹೆಸರಿನಲ್ಲಿ ಖೇಲ್‍ರತ್ನಗಿಂತಲೂ ದೊಡ್ಡ ಪ್ರಶಸ್ತಿ ಸ್ಥಾಪಿಸಬಹುದಿತ್ತು. ಅದನ್ನು ಬಿಟ್ಟು ಹೆಸರು ಬದಲಾವಣೆ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಗುಜರಾತ್‍ನ ಅಹಮದಾಬಾದ್‍ನ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರನ್ನು ತೆಗೆದು ನರೇಂದ್ರ ಮೋದಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ದೆಹಲಿಯ ಕ್ರೀಡಾಂಗಣಕ್ಕೆ ಅರುಣ್ ಜೈಟ್ಲಿ ಹೆಸರು ಇಡಲಾಗಿದೆ. ಇವರೇನು ಕ್ರಿಕೆಟ್ ಆಟಗಾರರೇ. ಮೋದಿಯವರು ಎಷ್ಟು ಸೆಂಚುರಿ ಹೊಡೆದಿದ್ದಾರೆ. 500 ವಿಕೆಟ್ ತೆಗೆದು, 300 ಕ್ಯಾಚ್ ಹಿಡಿದಿದ್ದಾರೆಯೇ ? ಕ್ರಿಕೆಟ್ ಕ್ರೀಡಾಂಗಣಕ್ಕೆ ಮೋದಿ ಅವರ ಹೆಸರು ಏಕೆ ಇಡಬೇಕಿತ್ತು ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾ ಬಿ.ಕೆ.ಹರಿಪ್ರಸಾದ್, ಮುಖ್ಯಸಚೇತಕರಾದ ಎಂ.ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.