ಅಹಮದಾಬಾದ್: ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಸುಮಾರು 3 ಸಾವಿರ ಕೆಜಿಯಷ್ಟು ಹೆರಾಯಿನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು ಅದರ ಅಂದಾಜು ಮೌಲ್ಯ ₹19 ಸಾವಿರ ಕೋಟಿಯಷ್ಟು ಆಗಿದೆ.
ನೆರೆಯ ಅಫ್ಘಾನಿಸ್ತಾನದಿಂದ ಸಾಗಿಸಲಾಗಿದ್ದ ಎರಡು ಕಂಟೈನರ್‌ಗಳು ಇರಾನ್ ಮೂಲಕ ಬಂದದ್ದವು. ಟಾಲ್ಕ್ ಹೆಸರಿನಲ್ಲಿ ಹೆರಾಯಿನ್ ವಸ್ತುಗಳಿದ್ದ ಕಂಟೈನರ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಮಾಡಿ, ಆಂಧ್ರಪ್ರದೇಶದ ದಂಪತಿ ಹಾಗೂ ಇಬ್ಬರು ಅಫ್ಗನ್ನರನ್ನು ಬಂಧಿಸಿ, ಮಾಲಿನ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
‘ವಿಜಯವಾಡದ ಮೆ. ಆಶಿ ಟ್ರೇಡಿಂಗ್ ಕಂಪನಿಯು ಅರೆ ಸಂಸ್ಕರಿತ ಟಾಲ್ಕ್ ಕಲ್ಲುಗಳೆಂದು ಘೋಷಿಸಿದ್ದ ವಸ್ತುಗಳನ್ನು ಅಫ್ಗಾನಿಸ್ತಾನದಿಂದ ಆಮದು ಮಾಡಿಕೊಂಡಿತ್ತು. ಅದು ಇರಾನ್ ಬಂಡಾರ್ ಅಬ್ಬಾಸ್ ಬಂದರ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿತ್ತು. ಈ ದಾಸ್ತಾನನ್ನು ಪರಿಶೀಲಿಸಿದ ಡಿಆರ್‌ಐ ಅಭಿವೃದ್ಧಿಪಡಿಸಿದ ಉಪಕರಣ, ಈ ದಾಸ್ತಾನಿನಲ್ಲಿ ಮಾದಕ ದ್ರವ್ಯಗಳಿದೆ ಎಂದು ಪತ್ತೆ ಮಾಡಿತು‘ ಎಂದು ಡಿಆರ್‌ಐ ಹೇಳಿಕೆಯಾಗಿದೆ.
ಇದನ್ನು ಓದಿ: ಸಿಸಿಬಿ ಧಾಳಿ: ಡ್ರಗ್ ಪೆಡ್ಲರ್‌ಗಳ ಬಂಧನ-2 ಕೋಟಿ ಮೌಲ್ಯದ ಮಾದಕವಸ್ತು ವಶ
ಮಾದಕ ವಸ್ತುಗಳನ್ನು ಪತ್ತೆ ಮಾಡಲು ಅಭಿವೃದ್ಧಿಪಡಿಸಿರುವ ‘ನಿರ್ದಿಷ್ಟ ಬುದ್ದಿಮತ್ತೆ‘ಯಿಂದ(ಸ್ಪೆಸಿಫಿಕ್ ಇಂಟೆಲಿಜೆನ್ಸ್) ಈ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆ ಮಾಡಲು ಸಾಧ್ಯವಾಯಿತು‘ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.
ಎನ್‌ಡಿಪಿಎಸ್ ಕಾಯ್ದೆ 1985‘ರ ಅನ್ವಯ ತಪಾಸಣೆ ನಡೆಸಲಾಗಿದೆ. ಮೊದಲ ಕಂಟೇನರ್ ನಲ್ಲಿ 1999.579 ಕೆಜಿ ಹಾಗೂ ಎರಡನೇ ಕಂಟೇನರ್‌ನಲ್ಲಿ 988.64 ಕೆಜಿ. ಅಂದರೆ ಸುಮಾರು 2988.219 ಕೆಜಿಗಳಷ್ಟು ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.
ಬಂದರಿಗೆ ಬಂದಿದ್ದ 40 ಟನ್‌ಗಳ ಪೈಕಿ ಎರಡು ಕಂಟೇನರ್‌ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದ ಡಿಆರ್‌ಐ ತನಿಖಾ ವಿಭಾಗದ ಅಧಿಕಾರಿಗಳು ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೇತೃತ್ವದ ತಂಡವು ಕಂಟೇನರ್‌ಗಳ ಒಳಗಿರುವ ವಸ್ತುಗಳು ಹೆರಾಯಿನ್ ಎಂದು ದೃಢಪಡಿಸಿದರು.
ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿ ಗೋವಿಂದರಾಜು ಮತ್ತು ಪತ್ನಿ ವೈಶಾಲಿ ಅವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಪತಿ–ಪತ್ನಿ ಇಬ್ಬರೂ ಚೆನ್ನೈ ಮೂಲದವರು. ಅವರು ವಿಜಯವಾಡದಲ್ಲಿ ರಫ್ತು – ಆಮದು ಕಂಪನಿಯನ್ನು ನೋಂದಣಿ ಮಾಡಿಸಿದ್ದಾರೆ. ಈ ಇಬ್ಬರನ್ನು ಡಿಆರ್‌ಐ ಬಂಧಿಸಿದ್ದು, ಅವರನ್ನು ಭುಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇಬ್ಬರನ್ನು ವಿಚಾರಣೆಗಾಗಿ ಹತ್ತು ದಿನಗಳ ಕಾಲ ಡಿಆರ್‌ಐ ವಶಕ್ಕೆ ನೀಡಿದೆ.
ಅಹ್ಮದಾಬಾದ್, ದಿಲ್ಲಿ, ಚೆನ್ನೈ, ಗಾಂಧಿಧಾಮ ಮತ್ತು ಗುಜರಾತ್‌ನ ಮಾಂಡ್ವಿಯಲ್ಲಿ ಶೋಧ ಕಾರ್ಯಾಚರಣೆಗೆ ಮುಂದಾಗಿರುವ ಡಿಆರ್‌ಐ ಈ ದಂಧೆಯಲ್ಲಿ ಅಫ್ಘಾನ್ ಪ್ರಜೆಗಳ ಕೈವಾಡ ಇರುವುದು ಪತ್ತೆಯಾಗಿದೆ.
ಅಫ್ಘಾನಿಸ್ಥಾನವು ವಿಶ್ವದ ಅತಿದೊಡ್ಡ ಹೆರಾಯಿನ್ ಉತ್ಪಾದಕ ರಾಷ್ಟ್ರವಾಗಿದ್ದು ಅಲ್ಲಿಂದ ಜಗತ್ತಿನ ವಿವಿದೆಡೆಗಳಲ್ಲಿ ಸರಿಸುಮಾರು ಶೇಕಡಾ 80-90ರ ಪೂರೈಕೆಯನ್ನು ಮಾಡಲಿದೆ.