ನವದೆಹಲಿ: ಭಾರತದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ 2025-26ರ ಅರ್ಧ ಅಂತಿಮ ಹಂತಕ್ಕೆ ತಲುಪಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ್, ಕರ್ನಾಟಕ ಮತ್ತು ಬಂಗಾಳ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿವೆ. ರಣಜಿ
ಈ ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 15ರಿಂದ 19ರವರೆಗೆ ನಡೆಯಲಿವೆ. ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಸಮರಕ್ಕಾಗಿ ಕಾಯುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿರುವ ಕರ್ನಾಟಕ ಅಭಿಮಾನಿಗಳು ರಣಜಿ ಚಾಂಪಿಯನ್ ಆಗುವುದನ್ನ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಹಲವು ಆಶ್ಚರ್ಯಗಳು ಸಂಭವಿಸಿವೆ. ಏಕೆಂದರೆ ಉತ್ತರಾಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ್ ತಂಡಗಳು ಮೊದಲ ಬಾರಿಗೆ ಸೆಮಿಫೈನಲ್ ಹಂತಕ್ಕೆ ತಲುಪಿರುವುದು ಐತಿಹಾಸಿಕ ಸಾಧನೆಯಾಗಿದೆ. ಈ ತಂಡಗಳು ಕ್ವಾರ್ಟರ್ ಫೈನಲ್ಗಳಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಎಂಟ್ರಿಕೊಟ್ಟಿವೆ. ಮತ್ತೊಂದೆಡೆ ಕರ್ನಾಟಕ ಮತ್ತು ಬಂಗಾಳಂತಹ ಅನುಭವಿ ತಂಡಗಳು ತಮ್ಮ ಅನುಭವದಿಂದ ಸೆಮಿಫೈನಲ್ ಸ್ಥಾನ ಗಳಿಸಿವೆ.
ಇದನ್ನೂ ಓದಿ: ನೆಲಮಂಗಲ | ಬೆಳಗಿನ ಜಾವ ಸರಗಳ್ಳರ ಕೃತ್ಯ: ಸ್ಪ್ರೇ ಪರಿಣಾಮ ಮಹಿಳೆ ಸಾವು
ಸೆಮಿಫೈನಲ್ ಪಂದ್ಯಗಳ ವಿವರ
ಉತ್ತರಾಖಂಡ vs ಕರ್ನಾಟಕ
ಈ ಪಂದ್ಯ ಫೆಬ್ರವರಿ 15ರಿಂದ 19ರವರೆಗೆ ನಡೆಯಲಿದೆ. ಉತ್ತರಾಖಂಡ ತಂಡಕ್ಕೆ ಇದು ಮೊದಲ ಸೆಮಿಫೈನಲ್. ಕರ್ನಾಟಕ ತಂಡ ಅನುಭವಿ ಆಟಗಾರರೊಂದಿಗೆ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಉತ್ತರಾಖಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.
ಜಮ್ಮು ಮತ್ತು ಕಾಶ್ಮೀರ್ vs ಬಂಗಾಳ
ಈ ಪಂದ್ಯ ಸಹ ಫೆಬ್ರವರಿ 15ರಿಂದ 19ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ತಂಡಕ್ಕೂ ಇದು ಮೊದಲ ಸೆಮಿಫೈನಲ್. ಬಂಗಾಳ ತಂಡ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಶಕ್ತಿಯಿಂದ ಪ್ರಸಿದ್ಧವಾಗಿದೆ. ಹಾಗಾಗಿ ಈ ಪಂದ್ಯದಲ್ಲಿ ಬಂಗಾಳ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರವನ್ನ ಕಡೆಗಣಿಸುವಂತಿಲ್ಲ. ಕಳೆದ ಕೆಲವು ಋತುಗಳಿಂದ ದೊಡ್ಡ ದೊಡ್ಡ ತಂಡಗಳನ್ನೆಲ್ಲಾ ಸದೆಬಡೆದು ಹಂತ ಹಂತವಾಗಿ ನಾಕೌಟ್ ಪ್ರವೇಶದವರೆಗೂ ಬರಲು ಶುರು ಮಾಡಿದೆ.
ಪಂದ್ಯಗಳ ಸ್ಥಳಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳು ಕೂಡ ಕ್ವಾರ್ಟರ್ ಫೈನಲ್ನಂತೆ ಐದು ದಿನಗಳಾಗಿರುತ್ತವೆ.
ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶಗಳು ಹೀಗಿವೆ
ಉತ್ತರಾಖಂಡ್ vs ಜಾರ್ಖಂಡ್ : ಜಮ್ಶೆಡ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಉತ್ತರಾಖಂಡ್ ಇನ್ನಿಂಗ್ಸ್ ಮತ್ತು 6 ರನ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಜಾರ್ಖಂಡ್ ಮೊದಲ ಇನ್ನಿಂಗ್ಸ್ನಲ್ಲಿ 235 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಉತ್ತರಾಖಂಡ 371 ರನ್ಗಳಿಸಿತ್ತು. 2ನೇ ಇನ್ನಿಂಗ್ಸ್ನಲ್ಲಿ ಜಾರ್ಖಂಡ್ 130ಕ್ಕೆ ಆಲೌಟ್ ಆಗಿ ಸೋಲು ಕಂಡಿತು.
ಜಮ್ಮು ಮತ್ತು ಕಾಶ್ಮೀರ್ vs ಮಧ್ಯಪ್ರದೇಶ: ಇಂದೋರ್ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ್ 56 ರನ್ಗಳಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ನಲ್ಲಿ 194 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮಧ್ಯಪ್ರದೇಶ 152 ರನ್ಗಳಿಗೆ ಆಲೌಟ್ ಆಗಿ 42 ರನ್ಗಳ ಹಿನ್ನಡೆ ಅನುಭವಿಸಿತ್ತು. ನಂತರ ಕಾಶ್ಮೀರ ತಂಡ 248 ರನ್ಗಳಿಸಿ 291 ರನ್ಗಳ ಗುರಿ ನೀಡಿತ್ತು. ಮಧ್ಯ ಪ್ರದೇಶ ತಂಡ 234 ರನ್ಗಳಿಗೆ ಆಲೌಟ್ ಆಗುವ ಮೂಲಕ 56 ರನ್ಗಳ ಸೋಲು ಕಂಡಿತು.
ಕರ್ನಾಟಕ vs ಮುಂಬೈ : ಮುಂಬೈನ MCA-BKC ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ 4 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಮುಂಬೈ ಮೊದಲ ಇನ್ನಿಂಗ್ಸ್ನಲ್ಲಿ 120ಕ್ಕೆ ಆಲೌಟ್ ಆದರೆ, ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ 173 ರನ್ಗಳಿಸಿ 53 ರನ್ಗಳ ಮುನ್ನಡೆ ಸಾಧಿಸಿತ್ತು. ನಂತರ ಮುಂಬೈ ತಂಡ 2ನೇ ಇನ್ನಿಂಗ್ಸ್ನಲ್ಲಿ 377ಕ್ಕೆ ಆಲೌಟ್ ಆಗಿ ಕರ್ನಾಟಕಕ್ಕೆ 325 ರನ್ಗಳ ಕಠಿಣ ಗುರಿ ನೀಡಿತ್ತು. ಕೆಎಲ್ ರಾಹುಲ್ (130) ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ 4 ವಿಕೆಟ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.
ಬಂಗಾಳ vs ಆಂಧ್ರಪ್ರದೇಶ್ : ಕಲ್ಯಾಣಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಂಗಾಳ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಸಾಧಿಸಿ ಸೆಮಿಫೈನಲ್ ಸ್ಥಾನ ಪಡೆದಿದೆ. ಈ ಪಂದ್ಯ ಇನ್ನು ಮುಗಿದಿಲ್ಲವಾದರೂ, ಬಂಗಾಳ ಮೊದಲ ಇನ್ನಿಂಗ್ಸ್ನಲ್ಲಿ 335 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಆಂಧ್ರಪ್ರದೇಶ ಕೊನೆಯ ದಿನ ಡ್ರಾ ಸಾಧಿಸುವುದೇ ಕಷ್ಟ, ಹಾಗಾಗಿ ಬಂಗಾಳ ಸೆಮಿಫೈನಲ್ ಸ್ಥಾನ ಖಚಿತವಾಗಿದೆ. ಆಂಧ್ರ ಮೊದಲ ಇನ್ನಿಂಗ್ಸ್ನಲ್ಲಿ 295 ರನ್ಗಳಿಸಿದರೆ, ಬಂಗಾಳ 629 ರನ್ಗಳಿಸಿದೆ.
ಫೆಬ್ರವರಿ 23 ರಿಂದ 27ರವರೆಗೆ ಫೈನಲ್
ಫೈನಲ್ ಪಂದ್ಯ ಫೆಬ್ರವರಿ 23ರಿಂದ 27ರವರೆಗೆ ನಡೆಯಲಿದ್ದು, ಅರ್ಧ ಫೈನಲ್ ಗೆದ್ದ ತಂಡಗಳು ಅಲ್ಲಿ ಮುಖಾಮುಖಿಯಾಗಲಿವೆ. ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಗಳನ್ನು ಲೈವ್ನಲ್ಲಿ ವೀಕ್ಷಿಸಲು ಸ್ಟಾರ್ ಸ್ಪೋರ್ಟ್ಸ್ ಅಥವಾ ಹಾಟ್ಸ್ಟಾರ್ನಲ್ಲಿ ಅವಕಾಶವಿದೆ.
ಇದನ್ನೂ ನೋಡಿ: “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
