“ಹೆಣ ಬೇಕಾಗಿದೆ.”

ಜಲೀಲ್ ಮುಕ್ರಿ 

ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಮಾನವನ‌ ಹೆಣ ಖಂಡಿತ ಬೇಡ
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರ
ಹೆಣಬೇಕಾಗಿದೆ.

ಅರಮನೆ‌ ಕಟ್ಟಿಕೊಂಡಿದ್ದೇನೆ
ಮಕ್ಕಳು ಮರಿಮಕ್ಕಳಿಗಾಗುವಷ್ಟು
ಕೂಡಿಟ್ಟಿದ್ದೇನೆ.
ಮಾನವ ಸಹಜ ಆಸೆ ನನ್ನಲ್ಲಿ‌
ಇನ್ನೂ ಇದೆ.
ಇನ್ನೂ ಕೂಡಿಡಬೇಕಾಗಿದೆ.
ಸಹಕರಿಸಿ, ಹೆಣವೊಂದು ಬೇಕಾಗಿದೆ.

ಹಿಂದೂ ಮುಸ್ಲಿಂನನ್ನು ಕೊಂದ
ಮುಸ್ಲಿಂ ಹಿಂದೂವನ್ನು ಕೊಂದ
ಹೆಣಬೇಕಾಗಿದೆ.
ಸ್ವಧರ್ಮದವರೇ ಕೊಂದ
ಅತ್ಯಾಚಾರ ಮಾಡಿದ ಹೆಣ
ಖಂಡಿತ ಬೇಡ.
ಸಹಕರಿಸಿ, ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ.

ಬಡವರಿಗೆ ಉಣ್ಣಿಸಲಿಲ್ಲ
ದರಿದ್ರರಿಗೆ ಸೂರಿಲ್ಲ,
ಲಂಚ ಭ್ರಷ್ಟಾಚಾರ ನಿಲ್ಲಿಸಲಾಗಲಿಲ್ಲ
ಸುಳ್ಳು ಭರವಸೆ ಪೂರೈಸಲಿಲ್ಲ.
ಮತಗಿಟ್ಟಿಸಲು ಬೇರೆ ದಾರಿ ಇಲ್ಲ
ಹೆಣವೊಂದು ಬೇಕಾಗಿದೆ.

ಪೂಜಾರಿ, ಬಾಳಿಗ, ಆಶ್ರಫ್, ದಾನಮ್ಮ
ಶರತ್, ದೀಪಕ್, ಬಸೀರ್ ಹೆಣದಲ್ಲಿ
ಒಂದಿಷ್ಟು ಮತ ಸಿಕ್ಕಿತು.
ಆದರೂ ಗೆಲ್ಲಲು ಇನ್ನೋಂದಿಷ್ಟು ಹೆಣಗಳು ಬೇಕಾಗಿದೆ.

ಪಕ್ಷ ಪಕ್ಷಗಳ ಪೈಪೋಟಿಯ
ಮಾರುಕಟ್ಟೆಯಲ್ಲಿ ಹೆಣಗಳು ಹರಾಜಾಗುತ್ತಿವೆ, ಬಿಕರಿಯಾಗುತ್ತಿವೆ.
ಕೊಂದವರು, ಸತ್ತವರು ಸಾರಾಸಗಟು ಹರಾಜಾಗುತ್ತಿದ್ದಾರೆ ಸಹಕರಿಸಿ, ಹೆಣಬೇಕಾಗಿದೆ

Donate Janashakthi Media

Leave a Reply

Your email address will not be published. Required fields are marked *