ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎರಡನೇ ದಿನದ ಅನಿರ್ದಿಷ್ಟ ಧರಣಿಯನ್ನು ಮುಂದುವರೆದಿದೆ. ಇದುವರೆಗೆ ಹೋರಾಟದ ಕಣದಲ್ಲಿ ಚಳಿ ಮತ್ತಿತರ ಕಾರಣದಿಂದ ಹುತಾತ್ಮರಾದ ರೈತ ಹೋರಾಟಗಾರರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಇಂದಿನ ಧರಣಿ ಪ್ರಾರಂಭವಾಗಿತ್ತು.
ಅನಿರ್ದಿಷ್ಟ ವಾದಿ ಎರಡನೇ ದಿನದ ಧರಣಿ ಉದ್ಘಾಟಿಸಿ ಮಾತಾನಾಡಿದ ಹಿರಿಯ ರಂಗಕರ್ಮಿ ಪ್ರಸನ್ನ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮಹಾ ಹೋರಾಟ ದೇಶವನ್ನು ಮುನ್ನೆಡೆಸುವ ಮಹತ್ವದ ಹೋರಾಟ. ಇದು ಶ್ರಮ ಸಂಸ್ಕೃತಿಯ ಗ್ರಾಮೀಣ ಬದುಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಎಂದು ಹಿರಿಯ ರಂಗಕರ್ಮಿ ಸಿ ಪ್ರಸನ್ನ ಬಣ್ಣಿಸಿದರು.
ಇವತ್ತು ಎಲ್ಲೆಡೆ ಕಾಣುತ್ತಿರುವ ಆನಾರೋಗ್ಯ, ಅಸಹನೆ ಗೆ ಮೂಲ ಕಾರಣ ನಮ್ಮನ್ನು ಆಳುತ್ತಿರುವವರ ಕಾರ್ಪೊರೇಟ್ ಸಂಸ್ಕೃತಿ ಪರ ಧೋರಣೆಯಾಗಿದೆ. ಈ ಕಾರಣಕ್ಕಾಗಿ ನಗರಗಳು -ಮಹಾನಗರಗಳು ಬೃಹತ್ ತಿಪ್ಪೆಗುಂಡಿಗಳಾಗಿವೆ. ಸರ್ಕಾರಗಳ ಹೊಸ ಕೃಷಿ ಕಾಯ್ದೆಗಳು ಈ ತಿಪ್ಪೆಗುಂಡಿಗಳನ್ನು ಮತ್ತಷ್ಟು ಬೆಳೆಸುವ ದುರುದ್ದೇಶದ್ದು. ಹಾಗಾಗಿ ವಿನಾಶಕಾರಿ ಕಾರ್ಪೊರೇಟ್ ಸಂಸ್ಕೃತಿ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕೃಷಿಕರು ಹಾಗೂ ಕೃಷಿ ಕಾರ್ಮಿಕರೇ ನಮ್ಮ ದೇಶದ ನಿಜವಾದ ಜ್ಞಾನಿಗಳು. ಈ ಶ್ರಮ ಸಂಸ್ಕೃತಿಯ ಜ್ಞಾನದ ಋಷಿಗಳಾಗಿರುವ ರೈತರು, ಕರಕುಶಲ ಕರ್ಮಿಗಳು, ಕೃಷಿ ಕೂಲಿಕಾರರು ಯಾವುದೇ ಅಂಜಿಕೆ, ಆತಂಕ, ಕೀಳಿರಮೆ ಇಟ್ಟುಕೊಳ್ಳದೇ ಹೋರಾಟ ಮುಂದುವರೆಸಬೇಕು. ಈ ಹೋರಾಟದಲ್ಲಿ ಪಾಲ್ಗೊಳ್ಳುವುದು ನನಗೂ ಕೂಡ ಹೆಮ್ಮೆ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಕೃಷಿ ಕಾಯ್ದೆಗಳು ಕೂಲಿಕಾರರನ್ನು ನಿರುದ್ಯೋಗಿಯಾಗಿಸಿ ಹಸಿವಿಗೆ ತಳ್ಳುವ ಕಾನೂನುಗಳಾಗಿವೆ. ಈಗಾಗಲೇ 25 ರೈತ ಹೋರಾಟಗಾರರು ಚಳಿ ಮತ್ತಿತರೆ ಕಾರಣದಿಂದ ನಿಧನರಾಗಿದ್ದರು ಮೋದಿ ಸರ್ಕಾರ ರೈತರ ವಿರುದ್ಧ ಹಠ ಸಾಧಿಸುತ್ತಿದೆ. ಇದು ಅತ್ಯಂತ ಅಮಾನವೀಯ ಎಂದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ದ ಕಾರ್ಯಕರ್ತರು ಭಾಗವಹಿಸಿದ್ದ ಈ ಧರಣಿ ನೇತೃತ್ವವನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ,ರಾಜ್ಯ ಉಪಾಧ್ಯಕ್ಷ ಎಂ ಪುಟ್ಟಮಾದು,ಮಾಜಿ ಜಿಪಂ ಸದಸ್ಯೆ ಸಾವಿತ್ರಮ್ಮ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು, ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯಾಧ್ಯಕ್ಷ ಜಿಎಂ ವೀರ ಸಂಗಯ್ಯ, ರಾಜ್ಯ ಉಪಾಧ್ಯಕ್ಷ ಜಿಟಿ ರಾಮಸ್ವಾಮಿ, ಶಿರಸಿ ವಕೀಲ ರವೀಂದ್ರನಾಯಕ್ ,ಆರ್ ಕೆ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಕಬ್ಬು ಬೆಳೆಗಾರರ ಸಂಘ ರಾಜ್ಯ ಅದ್ಯಕ್ಷ ಕುರುಬೂರು ಶಾಂತಕುಮಾರ್ ಕರ್ನಾಟಕ ಜನಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಸಮತಲ ಮುಂತಾದವರು ಭಾಗವಹಿಸಿದ್ದಾರೆ.