ಹೇಗಿದ್ದೀರಾ ಮಕ್ಕಳೆ..! ಪತ್ರ ಬರೆದ ಗೀತಾ ಟೀಚರ್!!

ಚಿಕ್ಕಮಗಳೂರು : ಕೋವಿಡ್ ಸೋಂಕು ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲಾ ಬಂದ್ ಮಾಡಿಕೊಂಡು ಕೂತಿದೆ. ಮನೆಯಿಂದ ಹೋರಬಾರದಂತೆ ನಿರ್ಭಂದಗಳನ್ನು ಹಾಕಿದೆ.

ಹಾಗೇ ಶಾಲಾ ಕಾಲೇಜುಗಳು ಬಾಗಿಲು ಹಾಕಿವೆ. ಹಾಗಾಗೀ ಮಕ್ಕಳು ಶಿಕ್ಷಕರನ್ನು ಮೀಸ್ ಮಾಡ್ಕೋಂಡ್ರೆ ಶಿಕ್ಷಕರು ಮಕ್ಕಳನ್ನು ಮಿಸ್ ಮಾಡ್ಕೋಳ್ತಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಆಟ- ಪಾಠ ಅಂತೆಲ್ಲ ಸೃಜನಾತ್ಮಕವಾಗಿ ಬೆರೆಯುತ್ತಿದ್ದ ಕೆಲ ಶಿಕ್ಷಕರಿಗೆ ಮಕ್ಕಳದ್ದೇ ಚಿಂತೆ ಅಂದ್ರು ತಪ್ಪಿಲ್ಲ. ದಿನದಿಂದ ದಿನಕ್ಕೆ ಶಾಲೆ ಆರಂಭದ ದಿನ ಮುಂದೋಗ್ತಿದ್ದು ಮಕ್ಕಳನ್ನು ನೆನೆದು ಶಿಕ್ಷಕರು ಮರುಗುತ್ತಿದ್ದಾರೆ.

ಒಂದು ಕಡೆ ಕೂತಲ್ಲಿ ಕೂರದ ಮಕ್ಕಳು ಕೊರೊನಾದಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲೆಗೆ ಬರಲಾಗದ ಮಕ್ಕಳನ್ನು ನೆನೆದ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಕಿಯೊಬ್ಬರು ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೀತಿಯ ಪತ್ರವೊಂದನ್ನು ಬರೆದು ಅವರಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ.

ಮನೆಯಲ್ಲಿ ಕೂತು ಮಕ್ಕಳಂತೆ ಪತ್ರ ಬರೆಯುತ್ತಿರೋ ಇವರ ಹೆಸರು ಗೀತಾ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ.

ಶಿಕ್ಷಕಿಯ ಪ್ರೀತಿಯ ಪತ್ರವನ್ನು ಮಕ್ಕಳು ಹೆತ್ತವರೆದುರು ಓದಿ ಸಂಭ್ರಮಿಸಿದ್ದಾರೆ. ಪ್ರತಿಯೊಂದು ಮಗುವಿನ ಜೊತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳ ಬುತ್ತಿಯನ್ನ ನೆನಪಿಸಿದ್ದಾರೆ. ಪ್ರತಿಯೊಂದು ಮಗುವಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ. ಮಕ್ಕಳ-ಪೋಷಕರು ಯೋಗಕ್ಷೇಮ ವಿಚಾರಿಸಿ, ಕೋವಿಡ್ ನಿಂದ ಮನೆಯಲ್ಲಿರೋ ಮಕ್ಕಳು-ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿದ್ದಾರೆ. ವರ್ಷದಿಂದ ಶಾಲೆ ಬಾಗಿಲು ಹಾಕಿದ್ರು ತಾವು ಆಗಾಗ ಪಾಠ ಮಾಡಿ ಕಳಿಸುತ್ತಿದ್ದ ವಿಡಿಯೋ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿಕ್ಷಕಿಯ ಪತ್ರ ಓದಿ ಮಕ್ಕಳು ಫುಲ್ ಖುಷಿಯಾಗಿರೋದನ್ನ ಕೇಳಿ ಶಿಕ್ಷಕಿ ಗೀತಾ ಸಂತಸ ಪಟ್ಟಿದ್ದಾರೆ.

ಇದನ್ನೂ ಓದಿ : ಜುಲೈ 1ರಿಂದ ತರಗತಿ ಆರಂಭ: ಶುಲ್ಕದ ಬಗ್ಗೆ ಇನ್ನು ಬಗೆಹರಿದಿಲ್ಲ ಗೊಂದಲ

ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನು ಮಾತ್ರ ಕೇಳದೇ ಕೊರೊನಾದ ಬಗ್ಗೆಯೂ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದ್ದಾರೆ. ರಜೆ ಇರುವುದರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡುವುದಕ್ಕೆ ಹೋಗದಂತೆ ಪತ್ರದಲ್ಲಿ ಹೇಳಿದ್ದಾರೆ. ಜತೆಗೆ ಮೊಬೈಲನ್ನು ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿ ಪತ್ರ ಬರೆದಿದ್ದನ್ನು ಕಂಡು ಮಕ್ಕಳು ಓಕೆ ಮಿಸ್ ಎಂದಿದ್ದಾರೆ. ಅಲ್ಲದೇ ಪ್ರೀತಿಯಿಂದ ಮಿಸ್ ಬರೆದ ಪತ್ರವನ್ನು ಜೋಪಾನವಾಗಿ ಬೀರುವಿನಲ್ಲಿಟ್ಟು, ಶಿಕ್ಷಕಿಗೂ ಮಕ್ಕಳು ಪತ್ರ ಬರೆದು ಖುಷಿ ಪಟ್ಟಿದ್ದಾರೆ. ನಾವೆಲ್ಲಾ ಆರೋಗ್ಯವಾಗಿದ್ದೇವೆ, ನೀವು ಕೂಡ ಕ್ಷೇಮವಾಗಿರಿ ಮಿಸ್ ಎಂದು ಮಕ್ಕಳು ತಿಳಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

 

ಅಷ್ಟಕ್ಕೂ ಮಕ್ಕಳು ಹೀಗೆ ವಾಪಸ್ ಪತ್ರ ಬರೆಯಲು, ಇದೇ ಶಿಕ್ಷಕಿ ತಾನು ಬರೆದ ಪತ್ರದಲ್ಲಿ ಇನ್ನೊಂದು ಖಾಲಿ ಇನ್ಲ್ಯಾಂಡ್ ಲೆಟರ್(ಪತ್ರವನ್ನ)​ ಕಳುಹಿಸಿದ್ದರು. ಈಗ ಲಾಕ್​ಡೌನ್ ಇರುವುದರಿಮದ ಹೊರಗಡೆ ಹೋಗಿ ಲೆಟರ್ ತಗೊಂಡು ಪತ್ರ ಬರೆಯಲು ಸಾಧ್ಯವಿಲ್ಲ ಎಂದು ಪತ್ರದೊಳಗೆ ಪತ್ರಗಳನ್ನು ಹಾಕಿ ಬುದ್ಧಿವಂತಿಕೆ ಮೆರೆದಿದ್ದಾರೆ. ಸದ್ಯ ಒಬ್ಬೊಬ್ಬರೇ ಮಕ್ಕಳು ಪತ್ರಕ್ಕೆ ಉತ್ತರ ನೀಡುತ್ತಿದ್ದು, ಶಿಕ್ಷಕಿ ಗೀತಾಗೂ ಸಂತಸ ತಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕಿಯ ಪ್ರೀತಿಯ ಪತ್ರ ಹೊಸ ಬಾಂಧವ್ಯವನ್ನು ಬೆಸೆದಿದೆ. ಮಕ್ಕಳ ಜೊತೆ ನಿಕಟ ಸಂಬಂಧವನ್ನ ಇಟ್ಟುಕೊಂಡು ಯಾರೂ ಕೂಡ ಶಿಕ್ಷಣದಿಂದ ವಿಮುಖರಾಗದಂತೆ ಮಾಡಲು ಇದು ದಾರಿಯಾದಂತಾಗಿದೆ.

ಇಂದಿನ ಆಧುನಿಕ ಯುಗದಲ್ಲೂ ಮಕ್ಕಳಲ್ಲಿ ಪತ್ರ ಬರೆಯುವ ಸಂಸ್ಕೃತಿ ಬೆಳೆಸುವ ಮತ್ತು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿರುವ ಶಿಕ್ಷಕಿಯ ಕಾರ್ಯ ಎಲ್ಲ ಶಿಕ್ಷಕ ವರ್ಗದವರಿಗೂ ಸ್ಫೂರ್ತಿಯಾಗಿದೆ. ಖಾಸಗಿ ಶಾಲೆಗಳ ಆನ್ಲೈನ್ ಭರಾಟೆ, ಫೀಸುಗಳ ಟಾರ್ಚರ್ ನಡುವೆ ಗೀತಾ ಟೀಚರ್ ಸರಕಾರಿ ಶಾಲೆ ಮತ್ತು ಅಲ್ಲಿನ‌ ಮಕ್ಕಳ ಕಾಳಜಿ ಹೇಗಿರುತ್ತೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು  ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *