ರಾಜಾರಾಂ ತಲ್ಲೂರು
ನಿನ್ನೆ ಕುತೂಹಲಕ್ಕೆಂದು ಫೆಬ್ರವರಿ 2021 ರಿಂದೀಚೆಗೆ (ಅರ್ಥಾತ್, ಟೋಲ್ ಪಾವತಿ ಕಡ್ಡಾಯ ಆದಲ್ಲಿಂದೀಚೆಗೆ) ನಾನು ನನ್ನ ಎರಡು ಕಾರುಗಳಿಗೆ ಪಾವತಿಸಿದ ಹೆದ್ದಾರಿ ಟೋಲ್ ಎಷ್ಟು ಎಂದು ಗಮನಿಸಿದೆ. ಒಟ್ಟು ಅಂದಾಜು 60,000 ರೂಪಾಯಿ! (ಇದರಲ್ಲಿ ಸುರತ್ಕಲ್ ಬಳಿ ಟೋಲ್ ದಾಟುವಾಗ ಕೊಡಲಾಗಿರುವ ಅನಧಿಕೃತ ವಸೂಲಿ ಕೂಡ ಸೇರಿದೆ!!)
ಅತಿ ಕಡಿಮೆ ತಿರುಗಾಟಗಳಿರುವ ನನ್ನ ಕೈಯಿಂದಲೇ ಈ ಪ್ರಮಾಣದಲ್ಲಿ ಟೋಲ್ ಪಡೆಯಲಾಗಿದೆ. ಹಾಗಾದರೆ, ಕರಾವಳಿಯಲ್ಲಿ ಸಂಗ್ರಹವಾಗಿರುವ ಒಟ್ಟು ಟೋಲ್ ಪ್ರಮಾಣ ಎಷ್ಟಿರಬಹುದು?!!
ಇದಲ್ಲದೇ, ಹೊಸದಾಗಿ ವಾಹನ ಖರೀದಿಸುವಾಗ ರಸ್ತೆ ತೆರಿಗೆ ಎಂದು ದೊಡ್ಡ ಮೊತ್ತವೊಂದನ್ನು ಪಾವತಿಸಲಾಗುತ್ತದೆ.
ಇಷ್ಟೆಲ್ಲ ಹಣ ಪಾವತಿಸಿದ ಬಳಿಕ ನಮಗೆ ಸಿಕ್ಕಿರುವ ರಸ್ತೆ ಸೇವೆ ಎಂತಹದು? ಮಳೆಗಾಲ ಇನ್ನೂ ಆರಂಭವಾಗಿಲ್ಲ – ಉಡುಪಿಯಿಂದ ಕುಂದಾಪುರ ಕಡೆ ಹೋಗುವ ರಸ್ತೆಗಳು ಎಲ್ಲೆಂದರಲ್ಲಿ ತೂತು ಬಿದ್ದಿವೆ. ಕಿತ್ತೆದ್ದು ರಸ್ತೆಯಲ್ಲಿ ಹರಡಿಕೊಂಡಿರುವ ಡಾಮರು ಮಿಶ್ರಿತ ಜಲ್ಲಿ ಪುಡಿಗಳು ರಸ್ತೆಯ ಗುಣಮಟ್ಟದ ಬಗ್ಗೆ ಸಾಕ್ಷ್ಯ ಹೇಳುತ್ತಿವೆ. ಇನ್ನೆರಡು ತಿಂಗಳಿನಲ್ಲಿ ಕರಾವಳಿಯಲ್ಲಿ ರಸ್ತೆ ಕಮ್ಮಿ-ಹೊಂಡ ಜಾಸ್ತಿ ಆಗುವುದು ಖಚಿತ.
ಟೋಲ್ ಕೊಟ್ಟ ಮೇಲೆ ಅದಕ್ಕೆ ತಕ್ಕನಾದ ರಸ್ತೆ ಕೇಳುವುದು ನಮ್ಮ ಹಕ್ಕು ಎಂದುಕೊಂಡಿದ್ದೇನೆ. ಟೋಲ್ ರಸ್ತೆಗಳ ಕಾನೂನು ಕೂಡ ಅದನ್ನೇ ಹೇಳುತ್ತದೆ.
ದಿನಕ್ಕೆ ಇಷ್ಟು ಕಿಲೋಮೀಟರ್ ರಸ್ತೆ ನಿರ್ಮಿಸಿದ್ದೇವೆ ಎಂಬ ಅಕೌಂಟ್ ಕೊಡುವ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಸಾಹೇಬರು ಪಾವತಿಸಿದ ಟೋಲ್‌ಗೆ ಕೊಟ್ಟ ರಸ್ತೆಯ ಗುಣಮಟ್ಟದ ಬಗ್ಗೆಯೂ ಅಕೌಂಟಬಿಲಿಟಿ ತೋರಿಸಬೇಕಲ್ಲವೆ?