ಬೆಂಗಳೂರು : ಗೌರಿ-ಗಣೇಶ ಹಬ್ಬದ ಸಂಭ್ರಮಾಚರಣೆ ಇದೀಗ ಮುಗಿಯುತ್ತಲಿದ್ದು, ಇದರ ಪರಿಣಾಮ ನಗರದಲ್ಲಿ ಸುಮಾರು 500 ಟನ್ ಹೆಚ್ಚುವರಿ ಹಸಿ ತ್ಯಾಜ್ಯ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಒಣ ತ್ಯಾಜ್ಯ ಸೇರಿದಂತೆ ಒಟ್ಟು 6 ಸಾವಿರ ಟನ್ ತ್ಯಾಜ್ಯ ಸಂಗ್ರಹಣೆಗೊಂಡಿದ್ದು, ಬಿಬಿಎಂಪಿಗೆ ಈ ಪ್ರಮಾಣದ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ದೊಡ್ದ ತಲೆನೋವಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಪ್ರತಿದಿನ ಸರಾಸರಿ 3,500 ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆದರೆ, ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆ ಸೇರಿ ಮನೆಗಳಲ್ಲಿ ಹೆಚ್ಚುವರಿಯಾಗಿ 500 ಟನ್ ತ್ಯಾಜ್ಯ ಉತ್ಪತ್ತಿಯಾಗಿದ್ದು, ಒಟ್ಟು 4 ಸಾವಿರ ಟನ್ ಹಸಿ ತ್ಯಾಜ್ಯ ಸಂಗ್ರಹಣೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣೇಶ ವಿಸರ್ಜನಾ ಸ್ಥಳ, ಕಲ್ಯಾಣಿ, ಸಂಚಾರಿ ಟ್ಯಾಂಕುಗಳ ಬಳಿ ಗಣೇಶ ಪೂಜೆಗೆಂದು ಬಳಸಲಾದ ಹೂವು, ಬಾಳೆ ದಿಂಡು, ಮಾವಿನ ಎಲೆ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಿರುವುದರಿಂದ ಹೆಚ್ಚಿನ ತ್ಯಾಜ್ಯ ಉತ್ಪಾದನೆಯಾಗಿದೆ. ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ವ್ಯತ್ಯಯವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಬಹುತೇಕರು ಪೌರ ಕಾರ್ಮಿಕರು ರಜೆಯಲ್ಲಿದ್ದ ಕಾರಣದಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿಯೂ ವ್ಯತ್ಯಯ ಉಂಟಾಗಿದೆ.
ಕೆಲ ದಿನಗಳ ಅಂತರದಲ್ಲಿ 6 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗಿದೆ. ಇದರಿಂದ ಬಿಬಿಎಂಪಿ ಪೌರಕಾರ್ಮಿಕರ ಮೇಲೂ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.