ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಳದಿ ಮಾರ್ಗದಲ್ಲಿರುವ ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಬಯೋಕಾನ್ ಹೆಸರಿಡುವುದನ್ನು ವಿರೋಧಿಸಿ ಹೆಬ್ಬಗೋಡಿ ನಿವಾಸಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಹೊಸದಾಗಿ ತೆರೆದಿರುವ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ’ ಎಂದು ಹೆಸರಿಡುವುದು ಸ್ಥಳೀಯ ಜನರಿಗೆ ಮಾಡಿದ ಅವಮಾನ ಎಂದು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಸಂಪಿಗೆ ರಸ್ತೆಯಲ್ಲಿ ಇರುವ ಮಂತ್ರಿ ಸ್ಕ್ವೇರ್ ಮಲ್ಲೇಶ್ವರಂ (ಸಂಪಿಗೆ ರಸ್ತೆ) ನಿಲ್ದಾಣ ಮಾತ್ರ ನಮ್ಮ ಮೆಟ್ರೋ ಯೋಜನೆಯಡಿಯಲ್ಲಿ ಕಂಪನಿಯ ಹೆಸರಿರುವ ಏಕೈಕ ಮೆಟ್ರೊ ನಿಲ್ದಾಣವಾಗಿದೆ. ಹೆಬ್ಬಗೋಡಿ ನಗರಸಭೆಯ ಪುರಸಭಾ ಸದಸ್ಯ ಮುನಿಕೃಷ್ಣ ಮಾತನಾಡಿ, ಹೆಬ್ಬಗೋಡಿಗೆ ತನ್ನದೇ ಆದ ಇತಿಹಾಸವಿದ್ದು, ಗ್ರಾಮಗಳು ಸಾಕಷ್ಟು ಮಹತ್ವವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೈನಿಕ್ ಜಾಗರಣ್, ಇಂಡಿಯಾ ಟುಡೇ ಮತ್ತು ರಿಪಬ್ಲಿಕ್ ಟಿವಿಗೆ ನೋಟಿಸ್ ಕಳುಹಿಸಿದ ಜೆಡಿಯು ನಾಯಕ ಲಲನ್ ಸಿಂಗ್!
ಮೆಟ್ರೋ ನಿರ್ಮಾಣಕ್ಕೆ ಕಂಪನಿ ಹಣ ನೀಡಿದೆ ಎಂದ ಮಾತ್ರಕ್ಕೆ ಹೆಬ್ಬಗೋಡಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಬಿಎಂಆರ್‌ಸಿಎಲ್ ಕಂಪನಿಯ ಹೆಸರನ್ನು ಇಡುವುದು ಎಷ್ಟು ಸರಿ. ಮೆಟ್ರೊ ಕಾಮಗಾರಿಗೆ ಕೆಲ ಗ್ರಾಮಸ್ಥರು ಜಮೀನು ಬಿಟ್ಟುಕೊಟ್ಟಿದ್ದಾರೆ. ಮೆಟ್ರೋ ನಿಲ್ದಾಣದಿಂದ ‘ಬಯೋಕಾನ್’ ಹೆಸರನ್ನು ತೆಗೆದುಹಾಕುವಂತೆ ನಾವು ರಾಜ್ಯ ಸರ್ಕಾರ ಮತ್ತು BMRCL ಅನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಹೆಬ್ಬಗೋಡಿ ಪಾಲಿಕೆ ವ್ಯಾಪ್ತಿಯ ಸಂಪಿಗೆ, ಕಮ್ಮಸಂದ್ರ, ವೀರಸಂದ್ರ ವಾರ್ಡ್‌ಗಳ ಮೂಲಸೌಕರ್ಯ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ ಗಮನಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಕೈ ವಾಕ್ ಮಾಡಿ ತಮ್ಮ ಪ್ರಯಾಣವನ್ನು ತೊಂದರೆ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ. ಮೆಟ್ರೊ ನಿಲ್ದಾಣ
2020 ರಲ್ಲಿ, ಬಯೋಲಾಜಿಕ್ಸ್ ಇಂಡಿಯಾ ಲಿಮಿಟೆಡ್ ಮತ್ತು ಸಿಂಜೆನ್ ಇಂಟರ್ನ್ಯಾಷನಲ್ ಲಿಮಿಟೆಡ್ ಹೊಸೂರು ರಸ್ತೆಯ ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ 65 ಕೋಟಿ ರೂಪಾಯಿಗಳನ್ನು ನೀಡಲು BMRCL ನೊಂದಿಗೆ ಒಪ್ಪಂದಕ್ಕೆ (MOU) ಸಹಿ ಹಾಕಿದ್ದವು. ಬಯೋಕಾನ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಕಿರಣ್ ಮಜುಂದಾರ್-ಶಾ ಮತ್ತು ಬಿಎಂಆರ್‌ಸಿಎಲ್‌ನ ಅಂದಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದನ್ನೂ ಓದಿ: ‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ
ಸಮಾಜಕ್ಕೆ ಬಯೋಕಾನ್ ಪ್ರತಿಷ್ಠಾನದ ಕೊಡುಗೆಯನ್ನು ಗುರುತಿಸಲು, ಬಿಎಂಆರ್‌ಸಿಎಲ್, ರಾಜ್ಯ ಸರ್ಕಾರ ಬಯೋಕಾನ್ ಫೌಂಡೇಶನ್ ಜಂಟಿಯಾಗಿ ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್’ ಎಂದು ಹೆಸರಿಸಲು ನಿರ್ಧರಿಸಿದೆ.
ಹೆಬ್ಬಗೋಡಿ ಮೆಟ್ರೊ ನಿಲ್ದಾಣವು ಬೆಂಗಳೂರು ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅಡಿಯಲ್ಲಿ 5,744 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ (ರೀಚ್ 5) ವರೆಗಿನ 18.82 ಕಿಮೀ ಹೊಸ ಮಾರ್ಗದ ಭಾಗವಾಗಿದೆ. ಈ ಮೆಟ್ರೋ ವಿಸ್ತರಣೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ ಹಬ್‌ಗೆ ಸಂಪರ್ಕವನ್ನು ಹೆಚ್ಚಿಸಲು ಮತ್ತು ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಮೆಟ್ರೋ ನಿಲ್ದಾಣಗಳ ಹೆಸರು ವಿವಾದಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಗಿನ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ನೇರಳೆ ಮಾರ್ಗದಲ್ಲಿರುವ ಹೊಸಹಳ್ಳಿ ನಿಲ್ದಾಣಕ್ಕೆ ಬಿಎಂಆರ್‌ಸಿಎಲ್ ನಿಯಮಗಳಿಗೆ ವಿರುದ್ಧವಾಗಿ ಒಕ್ಕಲಿಗ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರನ್ನು ಇಡಲು ಒಪ್ಪಿದ್ದರು. ಇಷ್ಟೆ ಅಲ್ಲದೆ, ಪ್ರಸ್ತಾವನೆಯ ನಂತರ ವಿಧಾನಸೌಧ ನಿಲ್ದಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಲಾಗಿದೆ. BMRCL ಇಂತಹ ಗೊಂದಲವನ್ನು ತಪ್ಪಿಸಲು ಯಾವಾಗಲೂ ನಿಲ್ದಾಣಗಳಿಗೆ ಸ್ಥಳೀಯತೆಯ ಹೆಸರನ್ನು ಇಡುತ್ತದೆ.
ವಿಡಿಯೊ ನೋಡಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media