ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು, ಮತಗಳಿಕೆ ಕುಸಿದ 5 ರಾಜ್ಯಗಳು

ವಸಂತರಾಜ ಎನ್‌ಕೆ
ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳಲ್ಲಿ ಭಾರೀ ಹಿನ್ನಡೆಯಾಗಿರುವುದು 2024ರ 18ನೆಯ ಲೋಕಸಭಾ ಚುನಾವಣೆಗಳ ಅತಿ ದೊಡ್ಡ ಬೆಳವಣಿಗೆ ಎನ್ನ ಬಹುದು. ಹಿಂದಿ ರಾಜ್ಯಗಳೆಂದು ಕರೆಯಲಾಗುವ ಹತ್ತು ರಾಜ್ಯಗಳಲ್ಲಿ ಐದು ದೊಡ್ಡ ರಾಜ್ಯಗಳಲ್ಲಿ ಎನ್.ಡಿ.ಎ ಕೂಟದ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದೆ. ಆ 5 ರಾಜ್ಯಗಳೆಂದರೆ – ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಜಾರ್ಖಂಡ. ಮೂರು ರಾಜ್ಯಗಳಲ್ಲಿ ಎನ್.ಡಿ.ಎ ಕೂಟದ ಸೀಟು ಅಷ್ಟೇಯಿದೆ, ಆದರೆ ಮತಗಳಿಕೆಯಲ್ಲಿ ಇಳಿಕೆಯಾಗಿದೆ. ಆ 3 ರಾಜ್ಯಗಳೆಂದರೆ– ದೆಹಲಿ, ಹಿಮಾಚಲ, ಉತ್ತರಾಖಂಡ.  ಎನ್.ಡಿ.ಎ ಕೂಟಕ್ಕೆ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಅಲ್ಪ ಏರಿಕೆಯಾಗಿರುವುದು ಎರಡು ರಾಜ್ಯಗಳಲ್ಲಿ ಮಾತ್ರ-ಛತ್ತಿಸಗಢ, ಮಧ್ಯಪ್ರದೇಶ. ಇದಕ್ಕೆ 2019ರ ಚುನಾವಣೆಗಳಲ್ಲಿ ಬಿಜೆಪಿ/ಎನ್.ಡಿ.ಎ ಕೂಟ ಗರಿಷ್ಠ ಮಟ್ಟ ಮುಟ್ಟಿದ್ದು ಒಂದು ಕಾರಣ ನಿಜ. ಆದರೆ ಜನತೆ ಬಿಜೆಪಿ/ಎನ್.ಡಿ.ಎ ಕೂಟ ಮತ್ತು ಅದರ ನಾಯಕ ಮೋದಿಯ ಸಾಧನೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ ಮತ್ತು ಗಂಭೀರ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವುದು ಅಷ್ಟೇ ನಿಜ. ಹಿಂದಿ

ಇದನ್ನೂ ಓದಿ: ಬೇಳೆಕಾಳುಗಳ ಸಂಸ್ಕರಣಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಹಿಂದಿ ರಾಜ್ಯಗಳಲ್ಲಿ ಒಟ್ಟು 225ಸೀಟುಗಳು ಇದ್ದು, ಅದರಲ್ಲಿ ಎನ್.ಡಿ.ಎ ಕೂಟ 2019ರಲ್ಲಿ ಗಳಿಸಿದ್ದ 63 ಸೀಟುಗಳನ್ನು ಕಳೆದುಕೊಂಡು 149 ಸೀಟುಗಳಿಗೆ ಕುಸಿದಿದೆ. ಅದರಲ್ಲಿ ಅರ್ಧದಷ್ಟು (28) ಸೀಟು ಕಳೆದುಕೊಂಡದ್ದು ಉತ್ತರ-ಪ್ರದೇಶದಲ್ಲಿ. ಇಂಡಿಯಾ ಕೂಟ 74 ಸೀಟುಗಳನ್ನು ಗಳಿಸಿದ್ದು 61 ಹೆಚ್ಚು ಸೀಟುಗಳನ್ನು ಗಳಿಸಿದೆ. ಎನ್.ಡಿ.ಎ ಕೂಟ ಈ 10 ಹಿಂದಿ ರಾಜ್ಯಗಳಲ್ಲಿ ಶೇ.2.3 ಮತ ಕಳೆದುಕೊಂಡು ಶೇ.48.9 ಮತಗಳಿಸಿದೆ. ಇಂಡಿಯಾ ಕೂಟ ಶೇ.11.2 ಎಷ್ಟು ಮತಗಳಿಕೆ ಹೆಚ್ಚಿಸಿಕೊಂಡು ಶೇ. 41.0 ಮತಗಳಿಸಿದೆ. ಇತರರು ಶೇ.9 ಮತ ಕಳೆದುಕೊಂಡು ಶೇ,.10 ಮತ ಗಳಿಸಿದ್ದಾರೆ. ಹಿಂದಿ 

ಹಿಂದಿ ರಾಜ್ಯಗಳ ಸೀಟು-ಮತ ಪ್ರಮಾಣಗಳಿಕೆ

 

 

 

 

ಬಿಜೆಪಿಯ ಸೀಟು ಮತಗಳಿಕೆ ಕುಸಿದ 5 ರಾಜ್ಯಗಳು

ಉತ್ತರ-ಪ್ರದೇಶ

ಉತ್ತರ-ಪ್ರದೇಶದಲ್ಲಿ ಎನ್.ಡಿ.ಎ ಸೀಟುಗಳಲ್ಲೂ (64ರಿಂದ 36ಕ್ಕೆ) ಮತ ಪ್ರಮಾಣದಲ್ಲೂ ಅತ್ಯಂತ ಹೆಚ್ಚಿನ ನಷ್ಟ ಅನುಭವಿಸಿದೆ. ಇವೆಲ್ಲವೂ ಇಂಡಿಯಾ ಕೂಟಕ್ಕೆ ಲಾಭವಾಗಿದೆ. ಬಿ.ಎಸ್.ಪಿ ಎಲ್ಲಾ ಸೀಟುಗಳಲ್ಲಿ ಸ್ಪರ್ಧಿಸಿ ಶೂನ್ಯ ಸಂಪಾದನೆ ಮಾಡಿದ್ದು ಶೇ. 10 ರಷ್ಟು ಮತ ಕಳೆದು ಕೊಂಡಿದೆ. ಈ ಮತಗಳೂ ಇಂಡಿಯಾ ಕೂಟಕ್ಕೆ ಹೋಗಿದೆ. ಎನ್.ಡಿ.ಎ ಕೂಟದ ಬಿಜೆಪಿ 33 ಸೀಟು, ರಾಷ್ಟ್ರೀಯ ಲೋಕದಳ 2 ಸೀಟು, ಅಪ್ನಾದಲ್ 1 ಸೀಟುಗಳಿಸಿವೆ. ಇಂಡಿಯಾ ಕೂಟದ ಸಮಾಜವಾದಿ ಪಕ್ಷ(ಎಸ್.ಪಿ) 37 ಸೀಟು ಗಳಿಸಿ ದೇಶದಲ್ಲೇ ಮೂರನೇ ಅತಿದೊಡ್ಡ ಪಕ್ಷವಾಗಿ ಹೊಮ್ಮಿದೆ. ಕಾಂಗ್ರೆಸ್ 6 ಸೀಟು ಗಳಿಸಿದೆ. ಎರಡೂ ಕೂಟಕ್ಕೆ ಸೇರದೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಹೊಸ ದಲಿತ ಪಕ್ಷವಾದ ಆಜಾದ್ಸಮಾಜ ಪಾರ್ಟಿ (ಕಾನ್ಶಿರಾಂ)ಯ ಚಂದ್ರಶೇಖರ್ ಬಿಜೆಪಿ ಎಸ್.ಪಿ, ಬಿ.ಎಸ್.ಪಿ ಮೂರೂ ಪಕ್ಷಗಳನ್ನೂ ಸೋಲಿಸಿ ಆಯ್ಕೆಯಾಗಿರುವುದು ವಿಶೇಷ. ಎರಡೂ ಕೂಟಗಳ ಮತ ಗಳಿಕೆ ಪ್ರಮಾಣ ಹೆಚ್ಚು ಕಡಿಮೆ (ಕೇವಲ 0.5 % ವ್ಯತ್ಯಾಸ) ಒಂದೇ ಆಗಿರುವುದು ಸಹ ಗಮನಾರ್ಹ. ಮುಂಬರುವ ವಿಧಾನ ಸಭಾಚುನಾವಣೆ

ಉತ್ತರ-ಪ್ರದೇಶ ಸೀಟು-ಮತ ಪ್ರಮಾಣ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾನ ತನ್ನ ಚಾರಿತ್ರಿಕ ಸಾಧನೆ ಮತ್ತು ಇದು ತನ್ನನ್ನು ಈ ಲೋಕಸಭಾ ಚುನಾವಣೆಯಲ್ಲಿ 400 ಗಡಿದಾಟಿಸಿ ಬಿಡುತ್ತದೆಯೆಂದು ಭಾವಿಸಿದ್ದ ಬಿಜೆಪಿಗೆ ಶಾಕ್ ಕೊಟ್ಟಿದೆ. ಪ್ರಾಣ ಪ್ರತಿಷ್ಠಾನ ಇಡೀ ದೇಶದಲ್ಲಿ ಪ್ರಭಾವ ಬೀರುವುದು ಹಾಗಿರಲಿ, ಉತ್ತರ-ಪ್ರದೇಶ ರಾಜ್ಯದಲ್ಲೂ, ಕೊನೆಗೆ ಅಯೋಧ್ಯೆಯಿರುವ ಫೈಜಾಬಾದ್ ಕ್ಷೇತ್ರದಲ್ಲೂ ಬಿಜೆಪಿ ಕೈಹಿಡಿದಿಲ್ಲ.  ‘ರಾಹುಲ್‌ ಗಾಂಧೀ ಅಮೇಥಿಯಿಂದ ಓಡಿ ಹೋಗಿದ್ದಾರೆ’ ಎಂದು ಟ್ರೋಲ್ಮಾಡುತ್ತಿದ್ದ ಸ್ಮೃತಿ ಇರಾನಿಯನ್ನು 1.7 ಲಕ್ಷದಷ್ಟು ಅಂತರದಿಂದ, ಅವರು’ ಗಾಂಧಿಗಳ ಕ್ಲಾರ್ಕು’ ಎಂದು ಕರೆದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ಸೋಲಿಸಿದ್ದಾರೆ.  ‘ಪ್ರತ್ಯಕ್ಷ ರಾಮನೇ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದ ರಾಮಾಯಣ ಸೀರಿಯಲ್ರಾಮ ಪಾತ್ರಧಾರಿ ಅರುಣ್ ಗೋವಿಲ್ ಸಹ ಸೋತಿದ್ದಾರೆ.  ಹಿಂದೆ ರೆಕಾರ್ಡ್ ಅಂತರದಿಂದ ಗೆದ್ದಿದ್ದ ಪ್ರಧಾನಿ ಮೋದಿ ಕೇವಲ 1.5 ಲಕ್ಷ ಅಂತರದಿಂದ ಗೆದ್ದಿದ್ದಾರೆ.

ಒಂದು ಹಂತದಲ್ಲಿ ಅವರು ಹಿನ್ನಡೆಯಲ್ಲಿದ್ದರು. ರಾಹುಲ್‌ ಗಾಂಧಿ ರಾಯ್ಬ ರೇಲಿಯಲ್ಲಿ 3.9 ಲಕ್ಷದ ಭಾರೀ ಬಹು ಮತದಿಂದ ಗೆದ್ದಿದ್ದಾರೆ. ಹೀಗೆ ಬಿಜೆಪಿ ಉತ್ತರ-ಪ್ರದೇಶದಲ್ಲಿ ಸಮಗ್ರ ಸೋಲು ಅನುಭವಿಸಿದೆ. ಮೋದಿ ಗ್ಯಾರಂಟಿಯಾಗಲಿ, ಯೋಗಿ ಬುಲ್ಡೋಜರ್ ಬೆದರಿಕೆಯಾಗಲಿ, ಡಬ್ಬಲ್ ಇಂಜಿನ್ ಮೆಚ್ಚುಗೆಯಾಗಲಿ, ಕೊನೆಯ ಗಳಿಗೆಯಲ್ಲಿ ಕಿಸಾನ್‌ ಚಳುವಳಿಯ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಭಾರತರತ್ನ ಕೊಟ್ಟು ಜಾಟ್ ಸಮುದಾಯದ ಪಕ್ಷವಾದ ರಾಷ್ಟ್ರೀಯ ಲೋಕದಳದ ಜತೆ ಕೊನೆಯ ಗಳಿಗೆಯ ಮೈತ್ರಿ – ಇವು ಜನಾದೇಶದ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ. ಬದಲಾಗಿ ಉದ್ಯೋಗ ಸೃಷ್ಟಿ ಬೆಲೆ ಏರಿಕೆ ತಡೆಯಲ್ಲಿ ಮೋದಿ-ಯೋಗಿ ಆಡಳಿತದ ಭೀಕರ ವೈಫಲ್ಯಗಳು, ಮಾತ್ರ ಜನಮನದಲ್ಲಿತ್ತು ಎಂಬುದು ಸ್ಪಷ್ಟ. ಎಸ್.ಪಿ ನಾಯಕ ಅಖೀಲೇಶ್ ಯಾದವ್ಎಸ್.ಪಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಹಳೆ ಮುಸ್ಲಿಂ-ಯಾದವ ಜಾತಿ ಸಮೀಕರಣವಾದ ಬದಲಿಸಿ, ಪ್ರಧಾನವಾಗಿ ಇತರ ಒಬಿಸಿ, ದಲಿತರ ಸೇರಿದಂತೆ ಎಲ್ಲ ಸಮುದಾಯಗಳ ವರಿಗ ಟಿಕೆಟ್ ಕೊಟ್ಟದ್ದು ಸಹ ಬಿಜೆಪಿ-ಎನ್.ಡಿ.ಎ ಸೋಲಿಗೆ ಕಾರಣವಾಯಿತು.

ಬಿ.ಎಸ್.ಪಿಯು ಬಿಜೆಪಿಯ ಬಿಟೀಮ್ ನಂತೆ ವರ್ತಿಸಿದ್ದು, ಅದರ ಜೊತೆ ಸೇರಿ ಹಲವು ಕ್ಷೇತ್ರಗಳಲ್ಲಿ ನಿರ್ದಿಷ್ಟ ಸಮುದಾಯದ ಅಭ್ಯರ್ಥಿಗಳನ್ನು ಹಾಕಿತು ಅಥವಾ ಬದಲಾಯಿಸಿತು. ಬಿಜೆಪಿ ವಿರುದ್ಧ ಪರಿಣಾಮಕಾರಿ ಪ್ರಚಾರ ಮಾಡುತ್ತಿದ್ದ ಮುಖ್ಯ ಪ್ರಚಾರಕ/ಸಂಯೋಜಕನನ್ನೇ ಬಿಜೆಪಿ ಅಣತಿಯ ಮೇರೆಗೆ ಎಲ್ಲಾ ಪದವಿಗಳಿಂದ ಬರ್ಖಾಸ್ತು ಮಾಡಿತು. ಇಂಡಿಯಾಕೂಟದಅಭ್ಯರ್ಥಿಯನ್ನುಸೋಲಿಸಲುಎಲ್ಲತಂತ್ರಗಳನ್ನುಹೂಡಿತ್ತು. ಇದು ಸ್ಪಷ್ಟವಾಗುತ್ತಾ ಹೋದಂತೆ ಅದರ ಮುಸ್ಲಿಂ ಮತ್ತು ದಲಿತ ಮತದಾರರು ಕೈಬಿಟ್ಟರು. ಆದರೂ ಬಿ.ಎಸ್.ಪಿಯ ಸ್ಪರ್ಧೆಯಿಂದ 16 ಕ್ಷೇತ್ರಗಳಲ್ಲಿ ಇಂಡಿಯಾ ಕೂಟ ಸೋತಿತು ಎಂದು ವಿಶ್ಲೇಷಣೆಯೊಂದು ಹೇಳಿದೆ.

ಬಿಹಾರ

ಬಿಹಾರದಲ್ಲಿ ಎನ್.ಡಿ.ಎ ಸೀಟುಗಳಲ್ಲಿ (30ರಿಂದ 21ಕ್ಕೆ) ನಷ್ಟದ ಪ್ರಮಾಣ ಉತ್ತರ-ಪ್ರದೇಶದಷ್ಟು ತೀವ್ರವಾಗಿಲ್ಲ.  ಆದರೆ ಮತ ಪ್ರಮಾಣದಲ್ಲಿ ನಷ್ಟ (12.5%ರಷ್ಟು) ಯು.ಪಿಗಿಂತಲೂ ಹೆಚ್ಚುಎಂಬುದನ್ನು ಗಮನಿಸ ಬೇಕು. ಬಿಜೆಪಿ 17 ಸೀಟು ಸ್ಪರ್ಧಿಸಿ, ಜೆಡಿಯು 16 ಸೀಟು ಸ್ಪರ್ಧಿಸಿ ತಲಾ 12 ಸೀಟು ಪಡೆದಿವೆ. ಲೋಕ ಜನಶಕ್ತಿ 5 ರಲ್ಲಿ 5 ಸೀಟುಗಳನ್ನು ಗೆದ್ದಿದೆ.  ಇಂಡಿಯಾ ಕೂಟ ಸೀಟುಗಳು (1 ರಿಂದ 9 ಕ್ಕೆ) ಮತ್ತು ಮತ ಪ್ರಮಾಣ ಎರಡರಲ್ಲೂ (13.6%) ಏರಿಕೆ ಕಂಡಿದೆ. ಇಂಡಿಯಾ ಕೂಟದ ಆರ್,ಜೆ.ಡಿ 6, ಕಾಂಗ್ರೆಸ್ 3, ಸಿಪಿಐ(ಎಂ.ಎಲ್-ಲಿಬರೇಶನ್) 2 ಸೀಟುಗಳನ್ನು ಗೆದ್ದಿವೆ.

ಬಿಹಾರ -ಸೀಟು-ಮತ ಪ್ರಮಾಣ

ಪಕ್ಷೇತರರಲ್ಲದೆ ಇತರೆಯಲ್ಲಿ ಪ್ರಮುಖವಾಗಿ ಬಿ.ಎಸ್.ಪಿ, ಎಐಎಂ.ಐ.ಎಂಬರುತ್ತವೆ. ಅವುಗಳ ಮತಗಳಿಕೆಯಲ್ಲಿ ಗಮನಾರ್ಹವಾಗಿ ಕಡಿಮೆಯಾಗದಿರುವುದು ಇಂಡಿಯಾ ಕೂಟದ ಸಾಧನೆಗೆ ತಡೆಯಾಗಿರುವಂತೆ ಕಾಣುತ್ತದೆ. ಬಿಹಾರದಲ್ಲೂ ಡಬ್ಬಲ್ ಇಂಜಿನ್ ವೈಫಲ್ಯಗಳ ಮತ್ತು ಅಗ್ನಿವೀರ ಯೋಜನೆಯ ವಿರುದ್ಧ ತೀವ್ರ ಆಕ್ರೋಶವಿದ್ದರೂ, ಬಹುಶಃ ನಿತೀಶ್ ಕುಮಾರ್ (ಅವರ ಹಲವು ತಿಪ್ಪರಲಾಗಗಳ ನಂತರವೂ) ಎಲ್ಲಾ ಸಮುದಾಯಗಳ ನಡುವೆ ಅವರ ಜನಪ್ರಿಯತೆ ಎನ್.ಡಿ.ಎಯನ್ನು ಸ್ವಲ್ಪ ಮಟ್ಟಿಗೆ ಕಾಪಾಡಿದಂತೆ ಕಾಣುತ್ತದೆ. ಪಾನ ನಿಷೇಧದಿಂದಾಗಿ ಮಹಿಳೆಯರ ವಿಶ್ವಾಸ, ಜಾತಿಜನಗಣತಿ ನಡೆಸಿದ್ದು, 5 ಲಕ್ಷ ಸರಕಾರಿ ಉದ್ಯೋಗ (ಕೊನೆಯ ಎರಡನ್ನು ಆರ್.ಜೆ.ಡಿ,  ಕಾಂಗ್ರೆಸ್ ಜತೆಗಿನ ಮಹಾಘಟ ಬಂಧನ ಸರಕಾರದ ಅವಧಿಯಲ್ಲಿ ಮಾಡಿದ್ದರೂ) – ಇವುಗಳ ಕ್ರೆಡಿಟ್ ನಿತೀಶ್ ಕುಮಾರ್  ಗೆ ಸಿಕ್ಕಿದಂತೆ ಕಾಣುತ್ತದೆ. ಆರ್.ಜೆ.ಡಿ ಸಹ ಹಳೆ ಮುಸ್ಲಿಂ-ಯಾದವ ಜಾತಿ ಸಮೀಕರಣವನ್ನು ಬದಲಿಸಿ, ಪ್ರಧಾನವಾಗಿ ಇತರ ಒಬಿಸಿ, ದಲಿತರ ಸೇರಿದಂತೆ ಎಲ್ಲ ಸಮುದಾಯಗಳ ವರಿಗ ಟಿಕೆಟ್ ಕೊಟ್ಟಿದ್ದರೂ ಸಹ, ಬಿಜೆಪಿ-ಎನ್.ಡಿ.ಎ ಜಾತಿ ಸಮೀಕರಣವನ್ನು ಬೇಧಿಸಲು ಸಾಧ್ಯವಾಗಿಲ್ಲ.

ರಾಜಸ್ಥಾನ

ರಾಜಸ್ಥಾನದಲ್ಲಿ ಇತೀಚೆಗೆ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಬಹುಮತಗಳಿಸಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಸೀಟುಗಳಲ್ಲೂ (25ರಿಂದ 14ಕ್ಕೆ) ಮತ ಪ್ರಮಾಣದಲ್ಲೂ(ಶೇ.9.3) ಹೆಚ್ಚಿನ ನಷ್ಟ ಅನುಭವಿಸಿದೆ. ಬಿಜೆಪಿ 14 ಸೀಟು ಗಳಿಸಿದರೆ, ಕಾಂಗ್ರೆಸ್ 8 ಸೀಟು ಗಳಿಸಿತು. ಇಂಡಿಯಾ ಕೂಟದ ಇತರ ಪಕ್ಷಗಳಾದ ಸಿಪಿಐ(ಎಂ), ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಭಾರತ ಆದಿವಾಸಿ ಪಕ್ಷ ತಲಾ 1 ಸೀಟುಗಳಿಸಿದ್ದು ವಿಶೇಷ. ಹಿಂದಿ 

ರಾಜಸ್ಥಾನ – ಸೀಟು-ಮತಪ್ರಮಾಣ

ಕಾಂಗ್ರೆಸ್ ವಿಧಾನಸಭಾ ಸೋಲಿನಿಂದ ಪಾಠಕಲಿತು ಹೆಚ್ಚಿನ ಐಕ್ಯತೆಯಿಂದ ಕೆಲಸ ಮಾಡಿತ್ತು. ಸಾಕಷ್ಟು ಮತಗಳಿಸಿದ್ದ ಇತರ ಪಕ್ಷಗಳನ್ನು ಇಂಡಿಯಾ ಕೂಟಕ್ಕೆ ಸೇರಿಸಿಕೊಂಡು ಸೀಟು ಹಂಚಿಕೊಂಡಿತ್ತು. ಪಂಜಾಬ್, ಹರಿಯಾಣ, ಯು.ಪಿ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಉತ್ತರ ಭಾಗದಲ್ಲಿ ಕಿಸಾನ್ ಚಳುವಳಿ ಮತ್ತು ಕೇಂದ್ರ ಸರಕಾರದಿಂದ ಅದರದ ಮನದ ವಿರುದ್ಧ ಆಕ್ರೋಶ ಸಹ ಮಡುಗಟ್ಟಿತ್ತು. ವಿಧಾನಸಭೆ ಚುನಾವಣೆ ನಡೆದು ಮುಖ್ಯಮಂತ್ರಿ ಆಯ್ಕೆ ಮತ್ತು ಸರಕಾರದ ರಚನೆಯ ನಂತರ ಬಣ ರಾಜಕಾರಣ ಬಿಜೆಪಿಯಲ್ಲಿ ತೀವ್ರ ಗೊಂಡಿದ್ದು, ಟಿಕೆಟ್ ಹಂಚಿಕೆಯ ಬಗೆಗಿನ ಅತೃಪ್ತಿ ಅದನ್ನು ಇನ್ನಷ್ಟು ಉಲ್ಬಣಿಸಿದೆ. ಇವೆಲ್ಲ ಬಿಜೆಪಿ ಸೀಟುಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಹಿಂದಿ 

ಹರಿಯಾಣ

ಹರಿಯಾಣದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೀಟುಗಳಲ್ಲೂ (10 ರಿಂದ 5ಕ್ಕೆ) ಮತಪ್ರಮಾಣದಲ್ಲೂ (ಶೇ.12.0) ಹೆಚ್ಚಿನನಷ್ಟಅನುಭವಿಸಿದೆ.  ಬಿಜೆಪಿ 5 ಸೀಟು ಗಳಿಸಿದರೆ, ಕಾಂಗ್ರೆಸ್ 5 ಸೀಟು ಗಳಿಸಿತು. ಇಂಡಿಯಾ ಕೂಟದ ಇತರ ಪಕ್ಷವಾದ ಎಎಪಿ 1 ಸೀಟಿನಲ್ಲಿ ಕಾಂಗ್ರೆಸಿನಿಂದ ಇತ್ತೀಚೆಗಷ್ಟೇ ಪಕ್ಷಾಂತರ ಮಾಡಿದ್ದ ಬಿಜೆಪಿಯ ನವೀನ್ ಜಿಂದಾಲ್ ವಿರುದ್ಧ ಸ್ಪರ್ಧಿಸಿ ಸೋತಿದೆ. ಇಂಡಿಯಾ ತನ್ನ ಮತಗಳಿಕೆ ಪ್ರಮಾಣವನ್ನು ಗಮನಾರ್ಹವಾಗಿ (18.9%) ಏರಿಸಿ ಕೊಂಡಿದೆ. ಮಾತ್ರವಲ್ಲ, ಹಿಂದಿ ರಾಜ್ಯಗಳಲ್ಲಿ ಈ ರಾಜ್ಯದಲ್ಲಿ ಮಾತ್ರ ಇಂಡಿಯಾ ಕೂಟದ ಮತ ಪ್ರಮಾಣ ಎನ್.ಡಿ.ಎ ಯ ಮತ ಪ್ರಮಾಣಕ್ಕಿಂತ ಹೆಚ್ಚಿದೆ. ಹಿಂದಿ 

ಹರಿಯಾಣದ ಪ್ರಾದೇಶಿಕ ಪಕ್ಷಗಳಾದ ಜನ ನಾಯಕ ಜನತಾ ಪಾರ್ಟಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಬಿ.ಎಸ್.ಪಿ ಸ್ಪರ್ಧಿಸಿದ ಇತರ ಪಕ್ಷಗಳಾಗಿದ್ದು ಅವು ಶೂನ್ಯ ಸಂಪಾದನೆ ಮಾಡಿದ್ದಲ್ಲದೆ, ತಮ್ಮ ಹಿಂದಿನ ಮತ ಗಳಿಕೆಯನ್ನು (ಅರ್ಧಕ್ಕಿಂತಲೂ ಹೆಚ್ಚು) ದೊಡ್ಡ ಪ್ರಮಾಣದಲ್ಲಿ ಕಳೆದು ಕೊಂಡಿವೆ

ಹರಿಯಾಣ – ಸೀಟು-ಮತ ಪ್ರಮಾಣ

ಹರಿಯಾಣದಲ್ಲಿ ಇತರೆಡೆಯಂತೆ ನಿರುದ್ಯೋಗ, ಬೆಲೆ ಏರಿಕೆಗಳಲ್ಲದೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಕಿಸಾನ್ ಆಂದೋಲನ ದ ದಮನ ಮತ್ತು ಮೂರು ಕರಾಳ ಕಾನೂನುಗಳು ದೊಡ್ಡ ಚುನಾವಣಾ ವಿಷಯವಾಗಿತ್ತು. ಹಲವು ಪ್ರದೇಶ/ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಚುನಾವಣಾ ಪ್ರಚಾರಗಳಿಗೆ ಪ್ರವೇಶಿಸಲು ಬಿಡಲಿಲ್ಲ. ಕಿಸಾನ್ ಆಂದೋಲನದ ನಂತರ ಆಶ್ವಾಸನೆ ಕೊಟ್ಟಂತೆ ಎಂ.ಎಸ್.ಪಿ ಕಾನೂನು ಬದ್ಧ ಹಕ್ಕು ಮಾಡದಿದ್ದು ಬಿಜೆಪಿಯ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.  ಹರಿಯಾಣದ ಮಹಿಳಾ ಕ್ರೀಡಾಪಟುಗಳ ಲೈಂಗಿಕ ಕಿರುಕುಳ ಕೊಟ್ಟ ಬಿಜೆಪಿ ಸಂಸದನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ್ದರ ವಿರುದ್ಧ ಆಕ್ರೋಶ ತೀವ್ರವಾಗಿದ್ದು. ಚರಣ್‌ ಸಿಂಗ್ ಗೆ ಭಾರತರತ್ನ ಕೊಟ್ಟದ್ದಾಗಲಿ, ನೆರೆಯ ಯುಪಿಯಲ್ಲಿ ಜಾಟ್ಪಕ್ಷ ಆರ್.ಎಲ್.ಡಿ ಜೊತೆ ಮೈತ್ರಿಯಾಗಲಿ ಈ ಆಕ್ರೋಶವನ್ನು ಶಮನ ಮಾಡಲು ಸಾಧ್ಯವಾಗಲಿಲ್ಲ.

ಹರಿಯಾಣದ ಬಿಜೆಪಿ ರಾಜ್ಯ ಸರಕಾರ ಬಹು ಮತ ಕಳೆದುಕೊಂಡಿದ್ದು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಸರಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಅದನ್ನು ಬೆಂಭಲಿಸುತ್ತಿದ್ದ ಜನನಾಯಕ ಜನತಾ ಪಾರ್ಟಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಹಾಗು ಕೆಲವು ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲ ಹಿಂತೆಗೆದು ಕೊಂಡಿದ್ದಾರೆ. ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ಇದ್ದು ಬಿಜೆಪಿ ಈ ರಾಜ್ಯವನ್ನು ಕಳೆದು ಕೊಳ್ಳುವುದು ಹೆಚ್ಚು ಕಡಿಮೆ ಖಚಿತವಾಗಿದೆ.

ಜಾರ್ಖಂಡ್

ಜಾರ್ಖಂಡ್ ನಲ್ಲಿ ಎನ್.ಡಿ.ಎ ಸೀಟುಗಳಲ್ಲಿ (12ರಿಂದ 9ಕ್ಕೆ) ನಷ್ಟದ ಪ್ರಮಾಣ ಹೆಚ್ಚಲ್ಲದಿದ್ದರೂ, ಮತ ಪ್ರಮಾಣದಲ್ಲಿ ನಷ್ಟ (13.2%ರಷ್ಟು) ಗಮನಾರ್ಹವಾಗಿದೆ. ಬಿಜೆಪಿ 13 ಸೀಟು ಸ್ಪರ್ಧಿಸಿ 8 ಗೆದ್ದಿದ್ದರೆ, ಎ.ಜೆ.ಎಸ್.ಯು ಸ್ಪರ್ಧಿಸಿದ 1 ಸೀಟು ಗೆದ್ದಿದೆ. ಇಂಡಿಯಾ ಕೂಟದ ಸೀಟುಗಳು (2 ರಿಂದ 5ಕ್ಕೆ) ಮತ್ತು ಮತ ಪ್ರಮಾಣ ಎರಡರಲ್ಲೂ (13.6%) ಏರಿಕೆ ಕಂಡಿದೆ. ಇಂಡಿಯಾ ಕೂಟದ ಕಾಂಗ್ರೆಸ್ 7 ಸೀಟುಗಳಲ್ಲಿ ಸ್ಪರ್ಧಿಸಿ 2, ಜೆಎಂಎಂ 5 ಸೀಟುಗಳಲ್ಲಿ ಸ್ಪರ್ಧಿಸಿ 3 ಸೀಟುಗಳನ್ನು ಗೆದ್ದಿದೆ. ಆರ್.ಜೆ.ಡಿ ಮತ್ತು ಸಿಪಿಐ(ಎಂ.ಎಲ್-ಲಿಬರೇಶನ್) ತಲಾ 1 ಸೀಟಿನಲ್ಲಿ ಸ್ಪರ್ಧಿಸಿ ಸೋತಿವೆ. ಇತರರಲ್ಲಿ ಸಿಪಿಐ 4 ಸೀಟುಗಳಲ್ಲಿ ಮತ್ತು ಸಿಪಿಐ(ಎಂ) 1 ಸೀಟಿನಲ್ಲಿ ಸ್ಪರ್ಧಿಸಿ ಸೋತಿವೆ.

ಜಾರ್ಖಂಡ್- ಸೀಟು-ಮತಪ್ರಮಾಣ

ಜಾರ್ಖಂಡ್ ನ ಜೆಎಂಎಂ ಪಕ್ಷದ ಮುಖ್ಯಮಂತ್ರಿ ಹೆಮಂತ್ ಸೊರೇನ್ ಅವರನ್ನು ಚುನಾವಣೆಗೆ ಮೊದಲೇ ಹಣದ ಸಾಗಾಣಿಕೆಯ ಆಪಾದನೆಯ ಮೇಲೆ ಬಂಧಿಸಲಾಗಿತ್ತು. ಚುನಾವಣೆ ಘೋಷಣೆಯಾದರೂ ಅವರಿಗೆ ಬೈಲ್ ಕೊಡಲಾಗಲಿಲ್ಲ. ಮುಂದೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ಗೆ ಬೈಲ್ ಕೊಟ್ಟ ಮೇಲೂ ಸೊರೇನ್ ಅವರಿಗೆ ಬೈಲ್ ಸಿಗಲಿಲ್ಲ. ಈ ರೀತಿಯ ಬಂಧನ ರಾಜಕೀಯ ದುರುದ್ದೇಶದ್ದಾಗಿದ್ದು, ಜನತೆಯಲ್ಲಿ ಅವರ ವಿರುದ್ಧ ತಪ್ಪು ಅಭಿಪ್ರಾಯ ರೂಪಿಸಲಾಗಿದ್ದು, ಜೆಎಂಎಂ ಮತ್ತಿತರ ಪಕ್ಷಗಳಿಗೆ ‘ಸಮನಾದ ರಾಜಕೀಯ ಅವಕಾಶ’ ನಿರಾಕರಿಸಲಾಯಿತು ಎಂದೇ ಹೇಳಬೇಕು. ಅಷ್ಟರ ಮಟ್ಟಿಗೆ ಈ ರಾಜ್ಯದ ಫಲಿತಾಂಶ ಬಿಜೆಪಿ ಪರವಾಗಿ ವಿರೂಪ ಗೊಂಡದ್ದು ಎಂದೇ ಹೇಳ ಬೇಕಾಗುತ್ತದೆ.  ಆದರೂ ಬಿಜೆಪಿಯ ಮತ ಪ್ರಮಾಣದಲ್ಲಿ ಭಾರೀ ಇಳಿಕೆಯಾಯಿತು ಎಂದು ಗಮನಿಸಬೇಕು.

ಇದನ್ನೂ ನೋಡಿ: ಲೋಕಸಭೆ ಚುನಾವಣೆ 2024: ಹಲವು ಕ್ಷೇತ್ರಗಳಲ್ಲಿ NOTA ಮತದಾನ ಪ್ರಮಾಣ ಹೆಚ್ಚು!Janashakthi Media

Donate Janashakthi Media

Leave a Reply

Your email address will not be published. Required fields are marked *