ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ, ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಏಳು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ವಾರ ಇನ್ನಷ್ಟು ಭಾರೀ ಮಳೆಯ ನಿರೀಕ್ಷೆಯಿದೆ.
ಮೇ 21 ಮತ್ತು 22 ರಂದು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ನೀಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಇದನ್ನೂ ಓದಿ: ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ – ಕೆಲವು ಪ್ರಶ್ನೆಗಳು ಭಾಗ 2
ತುಮಕೂರು, ರಾಮನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದ್ದು, ನೇ 21 ಬುಧವಾರದಂದು ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಕೊಡಗಿನಲ್ಲಿ ಭೂಕುಸಿತ ಸಾಧ್ಯತೆ, ಎಚ್ಚರಿಕೆ
ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. 2018ರಲ್ಲಿ ಸಂಭವಿಸಿದ ಭೀಕರ ಭೂಕುಸಿತವನ್ನು ಯಾರೂ ಮರೆತಿಲ್ಲ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತೊಮ್ಮೆ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಭೂಗರ್ಭಶಾಸ್ತ್ರಜ್ಞರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜಿಲ್ಲೆಯ 43 ಸ್ಥಳಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಲಕ್ಷ್ಮಣತೀರ್ಥ, ಹಟ್ಟಿಹೊಳೆ ಹಾಗೂ ಕಾವೇರಿ ನದಿ ದಡದಲ್ಲಿರುವವರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ತಿಂಗಳ 27 ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ನಾಲ್ಕು ದಿನಗಳ ನಂತರ ಮುಂಗಾರು ಕೊಡಗು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಿಂದಲೇ ಮಳೆಯ ಆರ್ಭಟ ನಿರೀಕ್ಷಿಸಲಾಗಿದೆ. ತಜ್ಞರು ಎಚ್ಚರಿಕೆ ನೀಡಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ನೋಡಲ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಈಗಾಗಲೇ ನಿಯೋಜಿಸಲಾಗಿದೆ. ಜೊತೆಗೆ, ಸಂಭಾವ್ಯ ಪ್ರವಾಹ ಉಂಟಾಗುವ ಸ್ಥಳಗಳ ಸಮೀಪ 100ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಪೂರ್ವ ಮುಂಗಾರು ರಾಜ್ಯಾದ್ಯಂತ ಹಲವು ಅವಘಡಗಳನ್ನು ಸೃಷ್ಟಿಸಿದೆ. ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯಾದ್ಯಂತ ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದಾರೆ. ಮಳೆಯಿಂದ ಜಲಾವೃತವಾದ ಸ್ಥಳಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಇದನ್ನೂ ನೋಡಿ: ಪಹಲ್ಗಾಮ ಹತ್ಯೆ ಮತ್ತು ಸೇನಾ ಸಂಘರ್ಷ, ಯುದ್ಧೋನ್ಮಾದ ಮತ್ತು ಉನ್ಮಾದ ರಾಷ್ಟ್ರೀಯತೆ…Janashakthi Media