ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕೆಲವು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು ಅಲ್ಲಿ ಇದುವರೆಗೆ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಭೂಕುಸಿತ ಮತ್ತು ಪ್ರವಾಹ ಜೋರಾಗಿದ್ದು ಕಾಂಗ್ರಾ ಜಿಲ್ಲೆಯೊಂದರಲ್ಲೇ 12 ಮಂದಿ ಮೃತರಾಗಿದ್ದಾರೆ. ಕುಲ್ಲು ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ. ಮೃತಪಟ್ಟವರಲ್ಲಿ 7 ಮಂದಿ ಮಹಿಳೆಯರು ಮತ್ತು 6 ಮಂದಿ ಪುರುಷರು ಎಂದು ತಿಳಿದು ಬಂದಿದೆ. ಇನ್ನಿಬ್ಬರ ಕಾಣಿಯಾಗಿದ್ದು ಸುಳಿವು ಸಿಕ್ಕಿಲ್ಲ.
ಇದನ್ನು ಓದಿ: ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ ಎಂದು ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಪಡೆಯ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ.
ಇಂದು ಬೆಳೆಗ್ಗೆಯೂ ಸಹ ಭಾರಿ ಮಳೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಲ್ಲಿ ಬೆಳಗಿನ ಜಾವ 4 ರಿಂದ 6 ರವರೆಗೆ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಜನತೆಯಲ್ಲಿ ಆತಂಕ ಮನೆಮಾಡಿದೆ. ಕಾಂಗ್ರಾದಲ್ಲಿ ಪ್ರವಾಹದ ನಂತರ, ಇತರೆ ಪ್ರದೇಶದ ಜನರು ಸಹ ಆತಂಕಗೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಜೋರು ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಂಗ್ರಾ ಜಿಲ್ಲೆಯ ಬೋಹ್ ಕಣಿವೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಗ್ರೋಟಾ ಬಾಗ್ವಾನ್ ಹಾಗೂ ಮೆಕ್ಲಿಯೋಡ್ ಗಂಜ್ ಪ್ರದೇಶದ ಲಿಯುನ್ ಖಾಡ್ ಮತ್ತು ಬೈಜನಾಥ್ ಪ್ರದೇಶದ ಬೈತ್ ಖಾಡ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರ ದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಬೋಹ್ ಕಣಿವೆ ಮತ್ತು ಮಂಜ್ಹಿ ಖಾಡ್ ಪ್ರದೇಶಕ್ಕೆ ಸೇರಿದ ಇಬ್ಬರನ್ನು ಹುಡುಕಲಾಗುತ್ತಿದೆ ಎಂದು ಸುದೇಶ್ ಕುಮಾರ್ ಮೊಖ್ತಾ ತಿಳಿಸಿದರು.
ಧರ್ಮಶಾಲಾ ಸುತ್ತಮುತ್ತಲೂ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಧರ್ಮಶಾಲಾದಲ್ಲಿ ಪ್ರವಾಹದ ಹೊಡೆತಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಭಾರೀ ವೈರಲ್ ಆಗಿವೆ. ಕಂಗ್ರಾ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ.
ಜುಲೈ 17ರವರೆಗೂ ಹಳದಿ ಎಚ್ಚರಿಕೆ ನೀಡಲಾಗಿದೆ. ಉನಾ, ಬಿಲಾಸ್ಪುರ್, ಹಮೀರ್‌ಪುರ, ಚಂಬಾ, ಕಾಂಗ್ರಾ, ಕುಲ್ಲು, ಮಂಡಿ, ಶಿಮ್ಲಾ, ಸೋಲನ್ ಮತ್ತು ಸಿರ್‌ಮೌರ್ ಜಿಲ್ಲೆಗಳಿಗೆ ಕಿತ್ತಳೆ-ಹಳದಿ ಎಚ್ಚರಿಕೆ ನೀಡಲಾಗಿದೆ. ಜುಲೈ 18 ಮತ್ತು 19 ರಂದು ರಾಜ್ಯದ ಬಯಲು ಮತ್ತು ಮಧ್ಯ ಪರ್ವತ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ.