- ಆಂಧ್ರಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ
- ರಾಜ್ಯ ಸರ್ಕಾರಿ ಸಂಸ್ಥೆಯ ಮೂರು ಬಸ್‌ಗಳು ಕೊಚ್ಚಿಹೋಗಿ 12 ಮಂದಿ ಸಾವು
- ರಾಯಲಸೀಮೆ ಭಾಗದಲ್ಲಿ ಭಾರಿ ಹಾನಿ, ತಿರುಪತಿಯಲ್ಲಿ ಪ್ರವಾಹ ಸ್ಥಿತಿ
- 23 ಕ್ಕೇರಿದ ಸಾವಿನ ಸಂಖ್ಯೆ, ನೂರಾರು ಮಂದಿ ನಾಪತ್ತೆ
ಅಮರಾವತಿ : ಭಾರಿ ಮಳೆಯಿಂದಾಗಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ನೂರಕ್ಕೂ ಹೆಚ್ಚು ಮಂದಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ತಿರುಪತಿಯಲ್ಲಿ ಬೃಹತ್ ಪ್ರವಾಹದ ನಡುವೆ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ.
ತಿರುಪತಿಯಲ್ಲಿ ಪ್ರವಾಹ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಗಳನ್ನು ಮುಚ್ಚಲಾಗಿದೆ. ಅಲ್ಲದೆ ತಿರುಮಲ ನಡಿಗೆ ಮಾರ್ಗವನ್ನೂ ಬಂದ್ ಮಾಡಲಾಗಿದ್ದು, ಯಾತ್ರಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಳೆಯಿಂದಾಗಿ ತಿರುಪತಿ ಹೊರವಲಯದ ಸ್ವರ್ಣಮುಖಿ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಜಲಾಶಯಗಳು ತುಂಬಿ ಹರಿಯುತ್ತಿವೆ. ಪ್ರವಾಹದಲ್ಲಿ ಸಾಕಷ್ಟು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದ್ದು, ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೆ ದನಕರುಗಳೂ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಭಾರೀ ಮಳೆ : ಶಾಲಾ ಕಾಲೇಜುಗಳಿಗೆ ರಜೆ, ಬೀದಿಗೆ ಬಿದ್ದ ರೈತರು
ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ರಾಯಲಸೀಮಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ಗುರುವಾರದಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು ಪರಿಣಾಮ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಪ್ರವಾಹದಿಂದ ಹಾನಿಯಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು, ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅನೇಕ ಭಾಗಗಳಲ್ಲಿ ಪ್ರವಾಹದಿಂದಾಗಿ ರಸ್ತೆಗಳು, ರೈಲ್ವೆ ಹಳಿಗಳು ಹಾನಿಗೊಳಗಾಗಿವೆ. ವಾಹನ ಸಂಚಾರ ಮತ್ತು ರೈಲುಗಳ ಓಡಾಟ ಹಾಗೂ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ. ರಾಯಲಸೀಮೆ ಪ್ರದೇಶದಲ್ಲಿ ವಿಪರೀತ ಹಾನಿಯಾಗಿದೆ. ಚಿತ್ತೂರು, ಕಡಪ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಕಡಪ ವಿಮಾನ ನಿಲ್ದಾಣವನ್ನು ನವೆಂಬರ್ 25ರವರೆಗೂ ಸ್ಥಗಿತಗೊಳಿಸಲಾಗಿದೆ.
ತಡರಾತ್ರಿ ಸುರಿದ ಭಾರೀ ಮಳೆಗೆ ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದಲ್ಲಿನ ಓಲ್ಡ್ ಚೇರ್ಮನ್ ಸ್ಟ್ರೀಟ್‌ನಲ್ಲಿರುವ ಮೂರು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದುಬಿದ್ದಿದ್ದು, ಓರ್ವ ಮಹಿಳೆ ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ 4 ಮಂದಿ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸತ್ಯಬಾಬು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಅವಶೇಷಗಳಡಿಯಿಂದ ಆರು ಜನರನ್ನು ಹೊರತೆಗೆದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಪಿಲ್ಲರ್‌ಗಳಿಲ್ಲದೆ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದು ಅಪಘಾತಕ್ಕೆ ಕಾರಣ ಎಂದು ಶಂಕಿಸಿದ್ದಾರೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆಗೆಯುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.