ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್ ಬಳಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.
ರಾಜ್ಯ ಆರೋಗ್ಯ, ವೈದ್ಯಕೀಯ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್. ಯಮೋಜಿ ಅವರು, ಎರಡನೇ ದಿನದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಹೇಳಿದರು.
“ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಈ ಅವಧಿಯಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾದರೆ ಸರ್ಕಾರವೇ ಹೊಣೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತಸ್ವಾಮಿ, ಮುಖಂಡ ಗವಿಸಿದ್ಧಪ್ಪ ದ್ಯಾಮಣ್ಣ ಉಪ್ಪಾರ ಸೇರಿದಂತೆ ನೂರಕ್ಕೂ ಹೆಚ್ಚು ಜನರಿದ್ದಾರೆ.
ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳು
- ನೌಕರರ ಸೇವೆ ಖಾಯಂಗೊಳಿಸಬೇಕು
- ಸಮಾನ ಕೆಲಸಕ್ಕೆ, ಸಮಾನ ವೇತನ ಜಾರಿ ಮಾಡಬೇಕು.
- ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ಸಂಸ್ಥೆ ಮತ್ತು ನೇರ ವೇತನ ಪಾವತಿಸಬೇಕು.
- ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸಬೇಕು.
- ನೌಕರರ ಕುಟುಂಬಕ್ಕೆ ಅನುಕಂಪದ ಆಧಾರದ ನೌಕರಿಯನ್ನು ನೀಡಬೇಕು.
- ಕೃಪಾಂಕ ಹೆಚ್ಚಳ: ಶೇ.20ಕ್ಕೆ ನಿಗದಿಯಾಗಿದ್ದ, ಕೃಪಾಂಕ ಶೇ.30ಕ್ಕೆ ಹೆಚ್ಚಿಸಿದ ಆದೇಶಿಸಬೇಕು.
- ಗುತ್ತಿಗೆ ನೌಕರರಿಗೆ ಪ್ರೊತ್ಸಾಹ ಧನವನ್ನು ಮತ್ತು ಹೊರಗುತ್ತಿಗೆ ನೌಕರರಿಗೆ ಬೋನಸ್ ನಿಯಮದಂತೆ ನೀಡಬೇಕು.
- ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಮೆ ಸೇರಿ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಬೇಕು ಹಾಗೂ ತಕ್ಷಣ ಜಾರಿಗೊಳಿಸಬೇಕು.