ಆರೋಗ್ಯ ಸಚಿವೆ ವೀಣಾ ಜಾರ್ಜ್ ಮೇಲೆ ದಾಳಿ; ಕೆಎಸ್‌ಯು ಕಾರ್ಯಕರ್ತರ ಗೂಂಡಾಗಿರಿಗೆ ಖಂಡನೆ

ಕಣ್ಣೂರು: ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕಣ್ಣೂರು ರೈಲು ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ವೇಳೆ ಗಾಯಗೊಂಡ ಘಟನೆ ಫೆಬ್ರವರಿ 25ರಂದು ನಡೆದಿದೆ. ಜಿಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಂದೇ ಭಾರತ್ ರೈಲಿಗೆ ಹತ್ತಲು ಮುಂದಾಗಿದ್ದ ಸಂದರ್ಭದಲ್ಲಿ ಕೆಎಸ್‌ಯು ಕಾರ್ಯಕರ್ತರು ಏಕಾಏಕಿ ಅವರತ್ತ ನುಗ್ಗಿದ ಪರಿಣಾಮ ತಳ್ಳಾಟ-ನುಗ್ಗಾಟ ಉಂಟಾಯಿತು ಎಂದು ತಿಳಿದುಬಂದಿದೆ. ಪೊಲೀಸ್ ಭದ್ರತೆ ಇದ್ದರೂ ಪರಿಸ್ಥಿತಿ ಉದ್ವಿಗ್ನಗೊಂಡಿತು. ಆರೋಗ್ಯ

ಈ ಗೊಂದಲದ ವೇಳೆ ಸಚಿವೆಯ ಕುತ್ತಿಗೆ, ಕಿವಿಯ ಹಿಂದಿನ ಭಾಗ ಹಾಗೂ ಕೈಗೆ ಗಾಯಗಳಾಗಿವೆ. ಕುತ್ತಿಗೆಯ ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಮುಂದಿನ ಪ್ರಯಾಣವನ್ನು ರದ್ದುಪಡಿಸಿ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುತ್ತಿಗೆಗೆ ಪಟ್ಟಿ ಹಾಕಿಕೊಂಡಿರುವ ಅವರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ. ಮರಳಿ ಬರುವಾಗ ತೀವ್ರ ತಳ್ಳಾಟ ಮತ್ತು ನೂಕಾಟ ನಡೆಯಿತು,” ಎಂದು ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಗೆ ಮಾಹಿತಿ ನೀಡಿದರೆಂದು ವರದಿಯಾಗಿದೆ. ಆರೋಗ್ಯ

ಇದನ್ನೂ ಓದಿ: ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮ: ಮನವಿ ಸಲ್ಲಿಕೆ

ಅಂತಾರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಚಿವೆ ಕಣ್ಣೂರಿಗೆ ಆಗಮಿಸಿದ್ದರು.

ಇದಕ್ಕೂ ಕೆಲವೇ ದಿನಗಳ ಹಿಂದೆ, ಫೆಬ್ರವರಿ ೨೧ರಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವೆಯ ಅಧಿಕೃತ ನಿವಾಸದ ಗೇಟ್ ಒಡೆದು, ಮನೆ ಬಾಗಿಲಿನ ಮುಂದೆ ಶವಪೂಷ್ಪಮಾಲೆ ಇಟ್ಟ ಘಟನೆ ನಡೆದಿತ್ತು.

ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಇದು ಮಹಿಳೆಯ ಮೇಲಿನ ಹಲ್ಲೆ. ಇಂತಹ ಕೃತ್ಯಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತವೆ,” ಎಂದು ಹೇಳಿದ್ದಾರೆ. ಆಯ್ಕೆಯಾದ ಜನಪ್ರತಿನಿಧಿಗಳ ಮೇಲೆ ಹಿಂಸಾಚಾರ ಅಸ್ವೀಕಾರಾರ್ಹ ಎಂದು ಅವರು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರೇರಣೆಯಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ಸಚಿವೆಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ, ಇಂತಹ ವರ್ತನೆ ಅನೂಚಿತವೆಂದು ಹೇಳಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಮಹಿಳಾ ಸಚಿವೆಯ ಮೇಲೆ ನಡೆದ ದಾಳಿ ಕ್ರೂರ ಮತ್ತು ಅಪೂರ್ವವೆಂದು ಹೇಳಿ, ಕಾಂಗ್ರೆಸ್ ನಾಯಕತ್ವದ ತಿಳುವಳಿಕೆಯಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದರು. ಈ ಘಟನೆ ವಿರುದ್ಧ ಸಿಪಿಐ(ಎಂ) ಮತ್ತು ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ರಾಜ್ಯದಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿವೆ.

ಇನ್ನೊಂದೆಡೆ, ದಾಳಿಯ ಆರೋಪವನ್ನು ಕೆಎಸ್‌ಯು ತಳ್ಳಿಹಾಕಿದೆ. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ. ಮುಹಮ್ಮದ್ ಶಮ್ಮಾಸ್, “ಸಚಿವೆಯ ಗಾಯದ ಆರೋಪ ನಾಟಕ. ಯಾವುದೇ ದಾಳಿ ನಡೆದಿಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ನೋಡಿ: “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *